ಭಾರತೀಯರನ್ನು ಬಿಡುಗಡೆ ಮಾಡಿ: ರಷ್ಯಾಗೆ ಭಾರತ ಮನವಿ

| Published : Feb 24 2024, 02:30 AM IST / Updated: Feb 24 2024, 07:42 AM IST

ಸಾರಾಂಶ

ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಕಲಬುರಗಿಯ 3 ಮಂದಿಯೂ ಸೇರಿದಂತೆ 60 ಯುವಕರನ್ನು ಶೀಘ್ರ ಬಿಡುಗಡೆ ಮಾಡುವಂತೆ ಪುಟಿನ್‌ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ನವದೆಹಲಿ: ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಕಲಬುರಗಿಯ 3 ಮಂದಿಯೂ ಸೇರಿದಂತೆ 60 ಯುವಕರನ್ನು ಶೀಘ್ರ ಬಿಡುಗಡೆ ಮಾಡುವಂತೆ ವ್ಲಾದಿಮಿರ್‌ ಪುಟಿನ್‌ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ತಿಳಿಸಿದ್ದಾರೆ. 

ಈ ಕುರಿತು ರಷ್ಯಾದ ಭಾರತೀಯ ದೂತಾವಾಸ ಕಚೇರಿಯ ಜೊತೆ ಸಂಪರ್ಕದಲ್ಲಿದ್ದು, ರಷ್ಯಾ ಸೇನೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಭಾರತೀಯ ಯುವಕರನ್ನು ರಷ್ಯಾ ಸೇನೆಯಿಂದ ಶೀಘ್ರವಾಗಿ ಮುಕ್ತಿಗೊಳಿಸುವಂತೆ ವಿನಂತಿಸಲಾಗಿದೆ ಎಂದು ತಿಳಿಸಿದ್ದಾರೆ. 

ಕರ್ನಾಟಕದ ಕಲಬುರಗಿ ಜಿಲ್ಲೆಯ ಮೂವರು ಸೇರಿದಂತೆ 60 ಭಾರತೀಯ ಯುವಕರು ರಷ್ಯಾ ಸೇನೆಯಲ್ಲಿ ಕಳೆದ ವರ್ಷ ಸಹಾಯಕರಾಗಿ ಕೆಲಸಕ್ಕೆ ಸೇರಿಕೊಂಡಿದ್ದರು. 

ಆದರೆ ರಷ್ಯಾ ಸೇನೆ ಅವರಿಗೆ ವಂಚಿಸಿ ಎಲ್ಲರನ್ನು ರಷ್ಯಾದ ಖಾಸಗಿ ವ್ಯಾಗ್ನರ್‌ ಸೇನಾಪಡೆಗೆ ಸೇರಿಸುವ ಮೂಲಕ ಉಕ್ರೇನ್‌ ಜೊತೆಗಿನ ಯುದ್ಧದಲ್ಲಿ ಹೋರಾಡುವಂತೆ ಒತ್ತಾಯ ಮಾಡುತ್ತಿದೆ.

 ಇದು ಭಾರತೀಯರಲ್ಲಿ ಕಳವಳ ಉಂಟು ಮಾಡಿದ್ದು, ಇವರ ಬಿಡುಗಡೆಗೆ ತೀವ್ರ ಒತ್ತಾಯ ಕೇಳಿಬಂದಿದೆ.