ಕಡಲ್ಗಳ್ಳರ ದಾಳಿಗೆ ತುತ್ತಾದ ವಿದೇಶಿ ಹಡಗಿಗೆ ಮತ್ತೆ ನೆರವಾದ ಭಾರತೀಯ ನೌಕಾಪಡೆ

| Published : Jan 19 2024, 01:48 AM IST / Updated: Jan 19 2024, 02:58 PM IST

Ship
ಕಡಲ್ಗಳ್ಳರ ದಾಳಿಗೆ ತುತ್ತಾದ ವಿದೇಶಿ ಹಡಗಿಗೆ ಮತ್ತೆ ನೆರವಾದ ಭಾರತೀಯ ನೌಕಾಪಡೆ
Share this Article
  • FB
  • TW
  • Linkdin
  • Email

ಸಾರಾಂಶ

9 ಭಾರತೀಯರು ಸೇರಿ 22 ಸಿಬ್ಬಂದಿ ಹೊಂದಿದ್ದ ಹಡಗು ರಕ್ಷಣೆಗೆ ಭಾರತೀಯ ನೌಕಾಪಡೆ ನೆರವು ನೀಡಿದೆ. ಈ ಘಟನೆಯು ಗಲ್ಫ್‌ ಆಫ್‌ ಏಡನ್‌ನಲ್ಲಿ ನಡೆದಿದೆ.

ನವದೆಹಲಿ: ಗಲ್ಫ್‌ ಆಫ್‌ ಏಡನ್‌ನಲ್ಲಿ ಕಡಲ್ಗಳ್ಳರ ದಾಳಿಗೆ ತುತ್ತಾಗಿದ್ದ ಮತ್ತೊಂದು ಸರಕು ಸಾಗಣೆ ಹಡಗನ್ನು ಭಾರತೀಯ ನೌಕಾ ಪಡೆ ರಕ್ಷಿಸಿದೆ. ಈ ಮೂಲಕ ಹಡಗಿನಲ್ಲಿದ್ದ 9 ಭಾರತೀಯರು ಸೇರಿದಂತೆ 22 ಮಂದಿಯನ್ನು ದಾಳಿಯಿಂದ ಕಾಪಾಡಿದೆ.

22 ಮಂದಿ ಸಿಬ್ಬಂದಿಯಿದ್ದ ಮಾರ್ಷಲ್‌ ಐಲ್ಯಾಂಡ್‌ ದೇಶಕ್ಕೆ ಸೇರಿದ ಸರಕು ಸಾಗಣೆ ಹಡಗು ಬುಧವಾರ ರಾತ್ರಿ ಗಲ್ಫ್‌ ಆಫ್‌ ಏಡನ್‌ ಬಳಿ ಸಮುದ್ರಕ್ಕಿಳಿದ ಕೆಲವು ಗಂಟೆಗಳಲ್ಲೇ ಕಡಲ್ಗಳ್ಳರ ಡ್ರೋನ್‌ ದಾಳಿಗೆ ತುತ್ತಾಯಿತು. 

ಈ ಹಡಗು ಕಳಿಸಿದ ರಕ್ಷಣಾ ಸಂದೇಶಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಭಾರತದ ಐಎನ್‌ಎಸ್‌ ವಿಶಾಖ ಪಟ್ಟಣಂ ಯುದ್ಧನೌಕೆ ಕ್ಷಿಪಣಿ ಧ್ವಂಸಕಗಳನ್ನು ಹಾರಿಸುವ ಮೂಲಕ ಹಡಗನ್ನು ಕಡಲ್ಗಳ್ಳರಿಂದ ರಕ್ಷಣೆ ಮಾಡಿದೆ. 

ಕಡಲ್ಗಳ್ಳರ ದಾಳಿಯಿಂದಾಗಿ ವ್ಯಾಪಾರಿ ಹಡಗಿನ ಮೇಲೆ ಬೆಂಕಿ ಹೊತ್ತಿಕೊಂಡರೂ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಈ ಮೊದಲು ಉತ್ತರ ಅರಬ್ಬಿ ಸಮುದ್ರದಲ್ಲಿ ದಾಳಿಗೆ ತುತ್ತಾಗಿದ್ದ ಲೈಬೀರಿಯಾ ಹಡನ್ನು ಸಹ ಭಾರತೀಯ ನೌಕಾಪಡೆಯ ಕಮಾಂಡೋಗಳು ರಕ್ಷಣೆ ಮಾಡಿದ್ದರು. ಈ ಸಮಯದಲ್ಲಿ 21 ಮಂದಿ ಭಾರತೀಯ ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿತ್ತು.