ಸಾರಾಂಶ
ಅರಬ್ಬಿ ಸಮುದ್ರದ ಉತ್ತರ ಭಾಗದಲ್ಲಿ ಸೊಮಾಲಿಯಾ ಕಡಲ್ಗಳ್ಳರ ದಾಳಿಗೆ ತುತ್ತಾಗಿ, ಹೈಜಾಕ್ ಭೀತಿ ಎದುರಿಸುತ್ತಿದ್ದ ಲೈಬಿರೀಯಾ ಹಡಗನ್ನು ಭಾರತೀಯ ನೌಕಾಪಡೆಯ ಕಮಾಂಡೋಗಳು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ್ದಾರೆ.
ನವದೆಹಲಿ: ಅರಬ್ಬಿ ಸಮುದ್ರದ ಉತ್ತರ ಭಾಗದಲ್ಲಿ ಸೊಮಾಲಿಯಾ ಕಡಲ್ಗಳ್ಳರ ದಾಳಿಗೆ ತುತ್ತಾಗಿ, ಹೈಜಾಕ್ ಭೀತಿ ಎದುರಿಸುತ್ತಿದ್ದ ಲೈಬಿರೀಯಾ ಹಡಗನ್ನು ಭಾರತೀಯ ನೌಕಾಪಡೆಯ ಕಮಾಂಡೋಗಳು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಘಟನೆ ಶುಕ್ರವಾರ ನಡೆದಿದೆ.
ಈ ಕಾರ್ಯಾಚರಣೆ ಮೂಲಕ 15 ಭಾರತೀಯರು ಸೇರಿ 21 ಮಂದಿ ಹಡಗಿನ ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿದೆ. ಅಲ್ಲದೆ ಹಡಗು ಕಡಲ್ಗಳ್ಳರ ಪಾಲಾಗುವುದನ್ನು ತಪ್ಪಿಸಲಾಗಿದೆ.
ಈ ಕಾರ್ಯಾಚರಣೆಗೆ ಐಎನ್‌ಎಸ್ ಚೆನ್ನೈ ಯುದ್ಧ ನೌಕೆ, ಕರಾವಳಿ ಕಣ್ಗಾವಲು ವಿಮಾನ, ಹೆಲಿಕಾಪ್ಟರ್, ಪಿ-8ಐ ವಿಮಾನ, ಮತ್ತು ಎಂಕ್ಯು9ಬಿ ಪ್ರಿಡೇಟರ್ ಡ್ರೋನ್‌ಗಳನ್ನು ಬಳಸಿಕೊಳ್ಳಲಾಗಿತ್ತು ಎಂದು ಭಾರತೀಯ ನೌಕಾಪಡೆ ಮಾಹಿತಿ ನೀಡಿದೆ.
ಏನಾಗಿತ್ತು?
ಭಾರಿ ಸರಕು ತುಂಬಿಕೊಂಡು ಬಹ್ರೈನ್‌ನತ್ತ ಸಾಗುತ್ತಿದ್ದ ಲೈಬಿರಿಯಾದ ‘ಎಂವಿ ಚೆಮ್ ಪ್ಲುಟೋ’ ಹಡಗು ಸೊಮಾಲಿಯಾದ ಬಳಿ ಕಡಲ್ಗಳ್ಳರ ದಾಳಿಗೆ ತುತ್ತಾಗಿತ್ತು. ಕೂಡಲೇ ಎಚ್ಚೆತ್ತ ಹಡಗಿನ ಸಿಬ್ಬಂದಿ ಬ್ರಿಟನ್‌ನ ಸಾಗರ ರಕ್ಷಣಾ ದಳಕ್ಕೆ ಕರೆ ಮಾಡಿ, ಹಡಗಿನ ಮೇಲೆ 5 - 6 ಮಂದಿ ಕಡಲ್ಗಳ್ಳರು ದಾಳಿ ಮಾಡಿರುವುದಾಗಿ ತಿಳಿಸಿದ್ದರು.
ಹಡಗು ಅರಬ್ಬಿ ಸಮುದ್ರದಲ್ಲಿರುವ ಕಾರಣ ಈ ಮಾಹಿತಿಯನ್ನು ಬ್ರಿಟನ್, ಭಾರತದ ನೌಕಾಪಡೆಯೊಂದಿಗೆ ಹಂಚಿಕೊಂಡಿತ್ತು. ತಕ್ಷಣವೇ ಕಾರ್ಯ ಪ್ರವೃತ್ತರಾದ ಕಮಾಂಡೋಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದರು.
ಕಾರ್ಯಾಚರಣೆ ಹೇಗೆ?
ಕಡಲ್ಗಳ್ಳರ ದಾಳಿ ಸುದ್ದಿ ಸಿಗುತ್ತಲೇ ಭಾರತೀಯ ನೌಕಾಪಡೆಯು ತನ್ನ ಕಣ್ಗಾವಲು ವಿಮಾನ ಮತ್ತು ಡ್ರೋನ್‌ಗಳ ಮೂಲಕ ಲೈಬೀರಿಯಾ ಹಡಗಿನ ಮೇಲೆ ನಿಗಾ ಇಟ್ಟಿತ್ತು. ಜೊತೆಗೆ ಲೈಬೀರಿಯಾ ಹಡಗಿನ ಸಿಬ್ಬಂದಿ ಜೊತೆ ಸಂಪರ್ಕ ಸಾಧಿಸಿ ಎಲ್ಲಾ ರೀತಿಯ ಮಾಹಿತಿ ಕಲೆಹಾಕಿತ್ತು.
ಇಷ್ಟೆಲ್ಲಾ ಆದ ಬಳಿಕ ನೌಕಾಪಡೆ, ತನ್ನ ಐಎನ್‌ಎಸ್ ಚೆನ್ನೈ ಯುದ್ಧ ನೌಕೆಯನ್ನು ಹೈಜಾಕ್ ಭೀತಿಯಲ್ಲಿದ್ದ ಹಡಗಿನ ಬಳಿಕ ರವಾನಿಸಿತು. ಮತ್ತೊಂದೆಡೆ ತನ್ನ ಕಮಾಂಡೋಗಳನ್ನು ರಹಸ್ಯವಾಗಿ ಬೋಟ್ ಮೂಲಕ ವ್ಯಾಪಾರಿ ಹಡಗಿನ ಬಳಿ ಕಳುಹಿಸಿಕೊಟ್ಟಿತ್ತು.
ಹೀಗೆ ಬೋಟ್ ಮೂಲಕ ಲೈಬೀರಿಯಾ ಹಡಗನ್ನು ತಲುಪಿದ ಕಮಾಂಡೋಗಳು, ಮೊದಲಿಗೆ ಹಡಗಿನ ಡೆಕ್ ವಶಕ್ಕೆ ಪಡೆದುಕೊಂಡಿದ್ದು, ಅಲ್ಲಿದ್ದ ಕಡಲ್ಗಳ್ಳರನ್ನು ಓಡಿಸಿ ಎಲ್ಲಾ ಸಿಬ್ಬಂದಿಗಳನ್ನು ರಕ್ಷಣೆ ಮಾಡಿದ್ದಾರೆ.ಭಾರತೀಯ ನೌಕಾಪಡೆಯ ಈ ಸಾಹಸದ ಬಳಿಕ ಕಡಲ್ಗಳ್ಳರು ಹಡಗನ್ನು ಹೈಜಾಕ್ ಮಾಡುವ ಪ್ರಯತ್ನ ಕೈಬಿಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.