ಸಾರಾಂಶ
ಭಾರತೀಯ ರೈಲ್ವೆ 6 ಸಾಮಾನ್ಯ ಗೂಡ್ಸ್ ರೈಲುಗಳನ್ನು ಒಟ್ಟಾಗಿಸಿ ಶುಕ್ರವಾರ 4.5 ಕಿ.ಮೀ. ಉದ್ಧದ ಗೂಡ್ಸ್ ರೈಲು ಓಡಿಸುವ ಮೂಲಕ ಹೊಸ ದಾಖಲೆ ಬರೆದಿದೆ.
ನವದೆಹಲಿ: ಭಾರತೀಯ ರೈಲ್ವೆ ಶುಕ್ರವಾರ 4.5 ಕಿ.ಮೀ. ಉದ್ಧದ ಗೂಡ್ಸ್ ರೈಲು ಓಡಿಸುವ ಮೂಲಕ ಹೊಸ ದಾಖಲೆ ಬರೆದಿದೆ. 6 ಸಾಮಾನ್ಯ ಗೂಡ್ಸ್ ರೈಲುಗಳನ್ನು ಒಟ್ಟಾಗಿಸಿ, ರುದ್ರಾಸ್ತ್ರ ಹೆಸರಿನ ಒಂದೇ ರೈಲಿನ ರೀತಿಯಲ್ಲಿ ಮಾರ್ಪಡಿಸಿ ಅದರ ಸಂಚಾರ ನಡೆಸಲಾಯಿತು.
6 ಎಂಜಿನ್, 354 ಬೋಗಿ ಒಳಗೊಂಡ ಈ ರೈಲು ಉತ್ತರ ಪ್ರದೇಶದ ಗಂಜ್‌ಖ್ವಾಜಾದಿಂದ ಜಾರ್ಖಂಡ್‌ನ ಗದ್ವಾ ತನಕ 200 ಕಿ.ಮೀ. ಸಂಚಾರ ನಡೆಸಿದೆ. ಈ ಮೂಲಕ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಸರಕನ್ನು ಸಾಗಿಸಿ, ಸಮಯವನ್ನು ಉಳಿಸಿದೆ. ಒಂದು ವೇಳೆ 6 ರೈಲುಗಳನ್ನು ಪ್ರತ್ಯೇಕವಾಗಿ ಓಡಿಸಬೇಕಿದ್ದರೆ, ಅದಕ್ಕೆ ಸುಮಾರು 6 ಗಂಟೆಗೂ ಹೆಚ್ಚು ಅವಧಿ ಹಿಡಿಯುತ್ತಿತ್ತು.
ಕಾಶ್ಮೀರದಲ್ಲಿ ಉಗ್ರರ ಜತೆ ಗುಂಡಿನ ಕಾಳಗದಲ್ಲಿ 2 ಯೋಧರು ಹುತಾತ್ಮ
ಶ್ರೀನಗರ: ದಕ್ಷಿಣ ಕಾಶ್ಮೀರ ಜಿಲ್ಲೆಯ ಕುಲ್ಗಾಂನಲ್ಲಿ ಕಳೆದ 9 ದಿನಗಳಿಂದ ನಡೆಯುತ್ತಿರುವ ಉಗ್ರ ವಿರೋಧಿ ಕಾರ್ಯಾಚರಣೆ ಶುಕ್ರವಾರ ತಡರಾತ್ರಿ ಇಬ್ಬರು ಯೋಧರನ್ನು ಬಲಿಪಡೆದಿದೆ. ಶುಕ್ರವಾರದಿಂದ ಶನಿವಾರ ಮುಂಜಾನೆವರೆಗೂ ದೀರ್ಘಾವಧಿ ಕಾರ್ಯಾಚರಣೆ ನಡೆದಿದ್ದು, ಈ ವೇಳೆ ಭದ್ರತಾ ಪಡೆಗಳು ಮತ್ತು ಉಗ್ರರು ಗುಂಡಿನ ಚಕಮಕಿ ನಡೆಸಿದ್ದಾರೆ. ಇದರಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ಕೆಲ ಸೈನಿಕರು ಗಾಯಗೊಂಡಿದ್ದಾರೆ. ಇದೇ ಕಾರ್ಯಾಚರಣೆಯಲ್ಲಿ ಸೇನೆ ಇದುವರೆಗೂ ಇಬ್ಬರು ಉಗ್ರರನ್ನು ಹತ್ಯೆಗೈದಿದೆ.
ಬಿಡುಗಡೆಗೆ ಮುನ್ನವೇ ರಜನೀಕಾಂತ್ ಚಿತ್ರಕ್ಕೆ ₹250 ಕೋಟಿ ‘ಕೂಲಿ’
ನವದೆಹಲಿ: ಈ ವರ್ಷದ ಬಹುನಿರೀಕ್ಷಿತ ರಜನಿಕಾಂತ್ ನಟನೆಯ ಬಹುಭಾಷೆಯ ‘ಕೂಲಿ’ ಚಲನಚಿತ್ರ ಬಿಡುಗಡೆಗೆ ಮುನ್ನವೇ 250 ಕೋಟಿ ರು. ಸಂಪಾದಿಸಿದೆ. 375 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾದ ಸಿನಿಮಾದ ಅಂತಾರಾಷ್ಟ್ರೀಯ, ಡಿಜಿಟಲ್, ಮ್ಯೂಸಿಕ್, ಸ್ಯಾಟಲೈಟ್ ಹಕ್ಕುಗಳು ಈಗಾಗಲೇ 250 ಕೋಟಿ ರು.ಗೆ ಬಿಕರಿಯಾಗಿವೆ ಎನ್ನಲಾಗಿದೆ. ಇದು ತಮಿಳು ಚಿತ್ರೋದ್ಯಮದಲ್ಲೇ ಅತಿಹೆಚ್ಚು ಎನ್ನಲಾಗಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಕೂಲಿ ಚಿತ್ರ ಆ.14ಕ್ಕೆ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಕನ್ನಡಿಗ ಉಪೇಂದ್ರ, ಬಾಲಿವುಡ್‌ನ ಅಮೀರ್ ಖಾನ್ ಸೇರಿ ಹಲವರು ನಟಿಸಿದ್ದಾರೆ.
334 ನೋಂದಾಯಿತ ಪಕ್ಷದ ಮಾನ್ಯತೆ ರದ್ದು ಮಾಡಿದ ಚು.ಆಯೋಗ
ನವದೆಹಲಿ: ಚುನಾವಣಾ ಆಯೋಗದಲ್ಲಿ ನೋಂದಾಯಿಸಿಕೊಂಡಿರುವ ಪಕ್ಷಗಳ ಪೈಕಿ ನಿಯಮಗಳಿಗೆ ಮತ್ತು ನಿಗದಿತ ಅರ್ಹತೆ ಪೂರೈಸುವಲ್ಲಿ ವಿಫಲವಾದ 334 ನೋಂದಾಯಿತ ಪಕ್ಷಗಳ ಮಾನ್ಯತೆಯನ್ನು ಚುನಾವಣಾ ಆಯೋಗ ರದ್ದುಗೊಳಿಸಿದೆ. ಆಯೋಗದಲ್ಲಿ ನೋಂದಾಯಿತ 2854 ಪಕ್ಷಗಳ ಪೈಕಿ 345 ಪಕ್ಷಗಳನ್ನು ಅಮಾನ್ಯ ಮಾಡುವ ಪ್ರಕ್ರಿಯೆ ಜೂನ್‌ನಲ್ಲಿ ಆರಂಭಗೊಂಡು ಅಂತಿಮವಾಗಿ 334 ಪಕ್ಷಗಳು ಮಾನ್ಯತೆ ರದ್ದಾಗಿದೆ. 2019ರಿಂದ ಒಂದೇ ಒಂದು ಚುನಾವಣೆಯಲ್ಲಿಯೂ ಭಾಗವಹಿಸಲು ಇವುಗಳು ವಿಫಲವಾಗಿದೆ. ಹೀಗಾಗಿ ಇವುಗಳನ್ನು ಅಮಾನ್ಯಗೊಳಿಸಲಾಗಿದೆ ಎಂದು ಆಯೋಗ ತಿಳಿಸಿದೆ. ಹೀಗಾಗಿ ಈ ಪಕ್ಷಗಳು ದೇಶದಲ್ಲಿ ಯಾವುದೇ ಕಚೇರಿಯನ್ನು ತೆರೆಯುವಂತಿಲ್ಲ. ಬೇಕಿದ್ದರೆ ಇವುಗಳು ಪುನಃ ನೋಂದಾಯಿಸಿಕೊಳ್ಳಬಹುದಾಗಿದೆ.
ಎಂ ಫಾರ್ ಮಸ್ಜೀದ್, ಎನ್ ಫಾರ್ ನಮಾಜ್: ಎಂಪಿ ಶಾಲೆ ವಿವಾದ
ಭೋಪಾಲ್: ಮಧ್ಯಪ್ರದೇಶದ ಖಾಸಗಿ ಶಾಲೆಯೊಂದು ಮಕ್ಕಳಿಗೆ ಎ ಫಾರ್ ಆ್ಯಪಲ್, ಬಿ ಫಾರ್ ಬಾಲ್ ಬದಲಿಗೆ ‘ಎಂ ಫಾರ್ ಮಸ್ಜೀದ್, ಎನ್ ಫಾರ್ ನಮಾಜ್, ಕೆ ಫಾರ್ ಕಾಬಾ’ ಎಂಬ ಪಠ್ಯವನ್ನು ವಿತರಿಸುವ ಮೂಲಕ ಭಾರಿ ವಿವಾದ ಸೃಷ್ಟಿಸಿದೆ. ರೈಸಿನ್ ಜಿಲ್ಲೆಯ ಖಾಸಗಿ ಶಾಲೆಯ ವಿದ್ಯಾರ್ಥಿಯ ಸಂಬಂಧಿಯೊಬ್ಬರು ಪಠ್ಯ ನೋಡುವಾಗ ಈ ರೀತಿಯ ಇಸ್ಲಾಂ ಸಂಕೇತಗಳು ಪತ್ತೆಯಾಗಿದ್ದು, ಕೂಡಲೇ ಪೋಷಕರ ಗಮನಕ್ಕೆ ತಂದಿದ್ದಾರೆ. ಇದೇ ರೀತಿ ಹಲವು ಪೋಷಕರು ಗಮನಿಸಿ ಶಾಲೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಪ್ರಾಂಶುಪಾಲರು ‘ಇದು ಭೋಪಾಲ್‌ನಿಂದ ಬಂದ ಪಠ್ಯವಾಗಿದ್ದು, ಇದನ್ನು ಪರಿಶೀಲಿಸದೇ ವಿತರಿಸಲಾಗಿದೆ. ಎಲ್ಲಾ ಪಠ್ಯವನ್ನು ವಾಪಾಸು ಪಡೆಯಲಾಗುತ್ತಿದೆ’ ಎಂದು ತಿಳಿಸಿದ್ದಾರೆ.