ಮುಂದಿನ ತಿಂಗಳು ದೇಶದ ಮೊದಲ ನವೀಕರಿಸಬಹುದಾದ ಪರಿಸರಸ್ನೇಹಿ ಇಂಧನ ಹೈಡ್ರೋಜನ್‌ ರೈಲು ಪರೀಕ್ಷೆ

| Published : Nov 22 2024, 01:18 AM IST / Updated: Nov 22 2024, 04:32 AM IST

ಸಾರಾಂಶ

ನವೀಕರಿಸಬಹುದಾದ ಪರಿಸರಸ್ನೇಹಿ ಇಂಧನದ ಅಳವಡಿಕೆಯಲ್ಲಿ ಕ್ರಾಂತಿಕಾರಿ ಹೆಜ್ಜೆ ಇರಿಸಿರುವ ಭಾರತೀಯ ರೈಲ್ವೆ, ಮುಂದಿನ ತಿಂಗಳು ದೇಶದ ಮೊಟ್ಟಮೊದಲ ಹೈಡ್ರೋಜನ್‌ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಸಜ್ಜಾಗಿದೆ.

ನವದೆಹಲಿ: ನವೀಕರಿಸಬಹುದಾದ ಪರಿಸರಸ್ನೇಹಿ ಇಂಧನದ ಅಳವಡಿಕೆಯಲ್ಲಿ ಕ್ರಾಂತಿಕಾರಿ ಹೆಜ್ಜೆ ಇರಿಸಿರುವ ಭಾರತೀಯ ರೈಲ್ವೆ, ಮುಂದಿನ ತಿಂಗಳು ದೇಶದ ಮೊಟ್ಟಮೊದಲ ಹೈಡ್ರೋಜನ್‌ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಸಜ್ಜಾಗಿದೆ.

ಡಿಸೆಂಬರ್‌ ತಿಂಗಳಲ್ಲಿ ಹರ್ಯಾಣದ ಜಿಂದ್‌ ಮತ್ತು ಸೋನಿಪತ್‌ ನಡುವಿನ 90 ಕಿ.ಮೀ. ಮಾರ್ಗದಲ್ಲಿ ಜಲಜನಕದಿಂದ ಸಂಚರಿಸುವ ರೈಲು ಪ್ರಾಯೋಗಿಕ ಸಂಚಾರ ನಡೆಸಲಿದೆ. ಯಶಸ್ವಿಯಾದರೆ ಮುಂದಿನ ವರ್ಷ ಒಟ್ಟು 35 ಜನಜನಕ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.

ಡೀಸೆಲ್‌ಗೆ ಯಶಸ್ವಿ ಪರ್ಯಾಯ:

ಸದ್ಯ ದೇಶದ ರೈಲ್ವೆ ಗಾಡಿಗಳು ವಿದ್ಯುತ್ ಮತ್ತು ಡೀಸೆಲ್‌ ಇಂಧನ ಬಳಸಿ ಓಡುತ್ತಿವೆ. ಜಲಜನಕ ಬಳಸಿದರೆ ಡೀಸೆಲ್‌ನಿಂದ ವಾತಾವರಣಕ್ಕೆ ಇಂಗಾಲ ಬಿಡುಗಡೆಯಾಗುವುದನ್ನು ತಪ್ಪಿಸುವ ಮೂಲಕ ಮಾಲಿನ್ಯ ಕಡಿಮೆ ಮಾಡಬಹುದು. ಅಲ್ಲದೆ, ಜಲಜನಕವು ಸೋವಿ ಮತ್ತು ಸುಲಭವಾಗಿ ಸಿಗುವ ಇಂಧನವಾಗಿದೆ. 2030ರ ವೇಳೆಗೆ ಶೂನ್ಯ ಕಾರ್ಬನ್‌ ಬಿಡುಗಡೆಯ ಗುರಿ ಸಾಧಿಸುವ ರೈಲ್ವೆ ಇಲಾಖೆಯ ಸಂಕಲ್ಪಕ್ಕೆ ಇದು ಪೂರಕವಾಗಿದೆ.

ವಾತಾವರಣಕ್ಕೆ ನೀರಿನ ಕಣ ಬಿಡುಗಡೆ:

ಅತ್ಯಂತ ಸುಧಾರಿತ ತಂತ್ರಜ್ಞಾನ ಬಳಸಿ ಜನಜನಕದ ರೈಲ್ವೆ ಎಂಜಿನ್‌ ಸಿದ್ಧಪಡಿಸಲಾಗಿದೆ. ಇದರಲ್ಲಿ ಜಲಜನಕದ ಕಣಗಳು ವಿದ್ಯುತ್‌ ಉತ್ಪಾದಿಸಿ ಎಂಜಿನ್‌ ಚಲಿಸುವಂತೆ ಮಾಡುತ್ತವೆ. ಜಲಜನಕ ಮತ್ತು ಆಮ್ಲಜನಕವನ್ನು ಸೇರಿಸಿದಾಗ ವಿದ್ಯುತ್‌ ಉತ್ಪಾದನೆಯಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಕೇವಲ ನೀರಿನ ಸೂಕ್ಷ್ಮ ಕಣಗಳು ಮಾತ್ರ ವಾತಾವರಣಕ್ಕೆ ಬಿಡುಗಡೆಯಾಗುತ್ತವೆ.

ಜೀಂದ್‌-ಸೋನಿಪತ್‌ ಮಾರ್ಗದಲ್ಲಿ ರೈಲುಗಳ ಸಂಚಾರ ಕಡಿಮೆ ಇರುವುದರಿಂದ ಮತ್ತು ಜಲಜನಕದ ರೈಲು ಓಡಿಸಲು ಅಗತ್ಯವಿರುವ ತಂತ್ರಜ್ಞಾನಗಳು ಸಮೀಪದಲ್ಲಿ ಲಭ್ಯವಿರುವುದರಿಂದ ಆ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಜರ್ಮನಿ ಮತ್ತು ಚೀನಾದಲ್ಲಿ ಈಗಾಗಲೇ ಹೈಡ್ರೋಜನ್‌ ರೈಲುಗಳು ಓಡುತ್ತಿವೆ.