ಭಾರತದಲ್ಲಿ ಶೇ.80ರಷ್ಟು ಟೆಕ್ಕಿಗಳಿಗೆ ಫ್ಯಾಟಿಲಿವರ್‌ ಸಮಸ್ಯೆ : ವಿಶ್ವ ವಿದ್ಯಾನಿಲಯದ ಸಂಶೋಧನಾ ವರದಿ

| N/A | Published : Mar 03 2025, 01:47 AM IST / Updated: Mar 03 2025, 04:58 AM IST

ಸಾರಾಂಶ

ಭಾರತದಲ್ಲಿ ಶೇ.80ರಷ್ಟು ಟೆಕ್ಕಿಗಳು ವೃತ್ತಿ ಜೀವನದ ಅಸಮತೋಲನದಿಂದಾಗಿ ಫ್ಯಾಟಿ ಲಿವರ್‌ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೈದರಾಬಾದ್‌ ವಿಶ್ವ ವಿದ್ಯಾನಿಲಯದ ಸಂಶೋಧನಾ ವರದಿಯೊಂದು ಹೇಳಿದೆ.

ನವದೆಹಲಿ: ಭಾರತದಲ್ಲಿ ಶೇ.80ರಷ್ಟು ಟೆಕ್ಕಿಗಳು ವೃತ್ತಿ ಜೀವನದ ಅಸಮತೋಲನದಿಂದಾಗಿ ಫ್ಯಾಟಿ ಲಿವರ್‌ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೈದರಾಬಾದ್‌ ವಿಶ್ವ ವಿದ್ಯಾನಿಲಯದ ಸಂಶೋಧನಾ ವರದಿಯೊಂದು ಹೇಳಿದೆ. 

ಈ ಸಂಶೋಧನಾ ವರದಿ ಪ್ರಕಾರ, ಶೇ.84ರಷ್ಟು ಐಟಿ ಉದ್ಯೋಗಿಗಳು ಕೆಲಸದ ವೇಳೆ ದೀರ್ಘ ಕಾಲ ಕುಳಿತುಕೊಳ್ಳುವುದು, ಕೆಲಸದ ಒತ್ತಡ, ಅನಾರೋಗ್ಯಕರ ಆಹಾರ ಪದ್ಧತಿ, ಕಡಿಮೆ ದೈಹಿಕ ಚಟುವಟಿಕೆಗಳ ಕಾರಣದಿಂದ ಚಯಾಪಚಯ ಕ್ರಿಯೆಗೆ ಸಂಬಂಧಿಸಿದ ಫ್ಯಾಟಿ ಲಿವರ್‌ನಿಂದ ಬಳಲುತ್ತಿದ್ದಾರೆ ಎಂದು ವರದಿ ಹೇಳಿದೆ.

 ವಿಶ್ವವಿದ್ಯಾನಿಲಯವು ವರದಿ ತಯಾರಿಕೆಗೂ ಮುನ್ನ 2023ರ ಜುಲೈನಿಂದ 2024ರ ಜುಲೈ ಅವಧಿಯಲ್ಲಿ ಹೈದರಾಬಾದ್‌ನ 345 ಐಟಿ ಉದ್ಯೋಗಿಗಳನ್ನು ಸಂಶೋಧನೆಗೆ ಒಳಪಡಿಸಿತ್ತು. ಈ ಸಂದರ್ಭದಲ್ಲಿ ಐಟಿ ಉದ್ಯೋಗಿಗಳ ಕೆಲಸದ ಸಂಸ್ಕೃತಿಯ ಬಗ್ಗೆ ಅಧ್ಯಯನ ನಡೆಸಿದ್ದು, ಒಂದೆಡೆ ದೀರ್ಘಕಾಲ ಕುಳಿತುಕೊಳ್ಳುವುದು, ಕೆಲಸದ ಒತ್ತಡ, ಅನಿಯಮಿತ ನಿದ್ರೆ ಫ್ಯಾಟಿ ಲಿವರ್‌ ಸಮಸ್ಯೆಗೆ ಕಾರಣ ಎಂದು ವರದಿ ಸಿದ್ಧ ಪಡಿಸಿದೆ.

ವರದಿ ಪ್ರಕಾರ, ಸಮೀಕ್ಷೆಗೊಳಗಾದ ಐಟಿ ಉದ್ಯೋಗಿಗಳಲ್ಲಿ ಶೇ.27ರಷ್ಟು ಟೆಕ್ಕಿಗಳು ಬೊಜ್ಜಿನ ಸಮಸ್ಯೆ ಹೊಂದಿದ್ದಾರೆ. ಭಾರತದಲ್ಲಿ ಶೇ.34ರಷ್ಟು ಉದ್ಯೋಗಿಗಳು ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ‘ನಿಯಮಿತ ಆರೋಗ್ಯ ಮತ್ತು ಯಕೃತ್ತಿನಲ್ಲಿ ಕೊಬ್ಬಿನಾಂಶದ ತಪಾಸಣೆ, ವೃತ್ತಿ ಜೀವನದಲ್ಲಿ ಸಮತೋಲನ , ಒತ್ತಡ ನಿರ್ವಹಣೆ’ ಆರೋಗ್ಯ ಸಮಸ್ಯೆಗೆ ಮುಕ್ತಿ ನೀಡಲಿದೆ ಎಂದು ಅಧ್ಯಯನ ಹೇಳಿದೆ. ಜೊತೆಗೆ ಐಟಿ ಕಂಪನಿಗಳು ಕಾರ್ಯಕ್ರಮಗಳ ಮೂಲಕ ಉದ್ಯೋಗಿಗಳ ಆರೋಗ್ಯದ ಕಾಳಜಿ ವಹಿಸಬೇಕು ಎಂದಿದೆ.