ಮಾಲ್ಡೀವ್ಸ್‌ಗೆ ತೆರಳುವ ಭಾರತೀಯರ ಪ್ರವಾಸಿಗರ ಸಂಖ್ಯೆ ಭಾರೀ ಇಳಿಕೆ

| Published : Jan 11 2024, 01:30 AM IST / Updated: Jan 11 2024, 11:02 AM IST

ಸಾರಾಂಶ

ಭಾರತದ ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಪ್ರವಾಸ ತೆರಳಿ ಎಂದು ಕರೆ ನೀಡಿದ ಬೆನ್ನಲ್ಲೇ ಮಾಲ್ಡೀವ್ಸ್‌ಗೆ ತೆರಳುವ ಭಾರತೀಯ ನಿತ್ಯದ ಪ್ರವಾಸಿಗರ ಸಂಖ್ಯೆ 572ರಿಂದ 400ಕ್ಕೆ ಇಳಿಕೆಯಾಗಿದೆ.

ನವದೆಹಲಿ: ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನಕ್ಕೆ ಬೆಂಬಲ ಸಿಗುತ್ತಿರುವ ನಡುವೆಯೇ ಮಾಲ್ಡೀವ್ಸ್‌ಗೆ ಭೇಟಿ ನೀಡುವ ಭಾರತೀಯರ ಸಂಖ್ಯೆಯಲ್ಲಿ ಕುಸಿತ ಕಂಡು ಬಂದಿದೆ.ದತ್ತಾಂಶಗಳ ಪ್ರಕಾರ 2023ರಲ್ಲಿ 2,09,198 ಭಾರತೀಯರು ಮಾಲ್ಡೀವ್ಸ್‌ ಪ್ರವಾಸ ಮಾಡಿ ಮೊದಲ ಸ್ಥಾನದಲ್ಲಿದ್ದರು. ಅಂದರೆ ಪ್ರತಿದಿನಕ್ಕೆ ಸರಾಸರಿ 572 ಭಾರತೀಯರು ಮಾಲ್ಡೀವ್ಸ್‌ಗೆ ಭೇಟಿ ನೀಡಿ ಅಲ್ಲಿನ ಪ್ರವಾಸೋದ್ಯಮಕ್ಕೆ ಶೇ.11.1ರಷ್ಟು ಕೊಡುಗೆ ನೀಡಿದ್ದರು.

ಆದರೆ 2024ರಲ್ಲಿ ಜ.8ರವರೆಗೆ ಕೇವಲ 3,334 ಭಾರತೀಯರು ಮಾತ್ರ ಮಾಲ್ಡೀವ್ಸ್‌ ಪ್ರವಾಸ ಮಾಡಿದ್ದು, ದಿನದ ಸರಾಸರಿಯಲ್ಲಿ ಕೇವಲ 400 ಮಂದಿ ಭೇಟಿ ನೀಡಿದ್ದಾರೆ. ಇದರೊಂದಿಗೆ ಭಾರತ ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡಿದೆ. 

ರಷ್ಯಾ, ಇಟಲಿ ಮತ್ತು ಬ್ರಿಟನ್‌ ಪ್ರವಾಸಿಗರು ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿದ್ದಾರೆ. ಈ ಕುರಿತು ಮಾತನಾಡಿದ ಮಾಲ್ಡೀವ್ಸ್‌ನ ಟ್ರಾವೆಲ್‌ ಏಜೆಂಟ್‌ವೊಬ್ಬರು, ‘ಭಾರತೀಯ ಪ್ರವಾಸಿಗರ ಕುಸಿತ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿರದಿದ್ದರೂ ಮುಂದಿನ ದಿನಗಳಲ್ಲಿ ಪರಿಣಾಮ ಬೀರುವ ಸಾಧ್ಯತೆಯಿದೆ. 

ಈಗ ಬರುತ್ತಿರುವವರೆಲ್ಲರೂ ಮುಂಚೆಯೇ ಪ್ರವಾಸ ಬುಕ್‌ ಮಾಡಿದ್ದವರಾಗಿದ್ದಾರೆ ಮತ್ತು ನಮಗೆ ಇತ್ತೀಚಿನ ದಿನಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಬುಕಿಂಗ್‌ ಬರುತ್ತಿದೆ’ ಎಂದು ತಿಳಿಸಿದ್ದಾರೆ.