ಭಾರತೀಯರೇ, ನೀವು ಅಮೆರಿಕವನ್ನು ನಂಬಬೇಡಿ! : ಯುಎಸ್ ಆರ್ಥಿಕ ತಜ್ಞ ಪ್ರೊ. ಜೆಫ್ರಿ ಸ್ಯಾಕ್ಸ್‌

| N/A | Published : Aug 12 2025, 11:36 AM IST

Modi Trump
ಭಾರತೀಯರೇ, ನೀವು ಅಮೆರಿಕವನ್ನು ನಂಬಬೇಡಿ! : ಯುಎಸ್ ಆರ್ಥಿಕ ತಜ್ಞ ಪ್ರೊ. ಜೆಫ್ರಿ ಸ್ಯಾಕ್ಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಏನೋ ಉಪಕಾರ ಆಗುತ್ತೆಂಬ ನಿರೀಕ್ಷೆ ಇದ್ದರೆ ಮರೆತುಬಿಡಿ । ನಿಲ್ಲಬೇಕಿದ್ದ ಉಕ್ರೇನ್‌ ಯುದ್ಧ ಮುಂದುವರಿಸಿದ್ದೇ ಅಮೆರಿಕ!

ಇವರು ಪ್ರೊ. ಜೆಫ್ರಿ ಸ್ಯಾಕ್ಸ್‌. ವಿಶ್ವ ಪ್ರಸಿದ್ಧ ಆರ್ಥಿಕ ತಜ್ಞ. ಭಾರತ- ಅಮೆರಿಕ ತೆರಿಗೆ ಯುದ್ಧ, ರಷ್ಯಾ- ಉಕ್ರೇನ್‌ ಸಮರದ ಬಗ್ಗೆ ಅತ್ಯಂತ ಒಳನೋಟದ ಅಭಿಪ್ರಾಯವನ್ನು ಮಂಡಿಸಿದ್ದಾರೆ.

ಇವರು ಪ್ರೊ. ಜೆಫ್ರಿ ಸ್ಯಾಕ್ಸ್‌. ವಿಶ್ವ ಪ್ರಸಿದ್ಧ ಆರ್ಥಿಕ ತಜ್ಞ. ಭಾರತ- ಅಮೆರಿಕ ತೆರಿಗೆ ಯುದ್ಧ, ರಷ್ಯಾ- ಉಕ್ರೇನ್‌ ಸಮರದ ಬಗ್ಗೆ ಅತ್ಯಂತ ಒಳನೋಟದ ಅಭಿಪ್ರಾಯವನ್ನು ಮಂಡಿಸಿದ್ದಾರೆ.

ನೀನೊಬ್ಬ ಅಮೆರಿಕ ವಿರೋಧಿ, ಸಿನಿಕತನದ ಮನುಷ್ಯ...!

ಕೆಲ ತಿಂಗಳ ಹಿಂದೆ ನಾನು ಭಾರತಕ್ಕೆ ಬಂದಿದ್ದೆ. ಭಾರತ- ಅಮೆರಿಕ ಸಂಬಂಧದ ಕುರಿತು ಕೆಲವೊಂದು ವಿಚಾರಗಳನ್ನು ಮಂಡಿಸಿದ್ದೆ. ಅದನ್ನು ಕೇಳಿದ ಬಳಿಕ ಕೆಲವರು ಕೊಟ್ಟು ಬಿರುದುಗಳು ಮೇಲಿನವು. 

ಅಷ್ಟಕ್ಕೂ ನಾನು ಹೇಳಿದ್ದು ಏನು ಗೊತ್ತೆ?: ‘ಅಮೆರಿಕವನ್ನು ನಂಬಲು ಹೋಗಬೇಡಿ. ಭಾರತದ ಬಗ್ಗೆ ಅಮೆರಿಕ ರಾಜಕಾರಣಿಗಳದ್ದು ‘ಡೋಂಟ್‌ ಕೇರ್‌’ ನಿಲುವು ಎಂಬುದು ನೆನಪಿರಲಿ ಎಂದು!

ಅಮೆರಿಕಕ್ಕೆ ಚೀನಾದಿಂದ ಅಸಂಖ್ಯ ವಸ್ತುಗಳು ರಫ್ತಾಗುತ್ತವೆ. ಚೀನಾ ಕಂಡರೆ ಅಮೆರಿಕಕ್ಕೆ ಆಗುವುದಿಲ್ಲ. ಅಮೆರಿಕಕ್ಕೆ ತಾನು ಹತ್ತಿರವಾದರೆ, ಆ ದೇಶದ ಅತ್ಯುತ್ತಮ ಪಾಲುದಾರನಾಗಬಹುದು ಎಂಬ ನಂಬುಗೆ ಭಾರತಕ್ಕೆ ಇರುವಂತಿದೆ. ಆದರೆ ವಾಸ್ತವ ಏನು ಗೊತ್ತಾ? ಭಾರತದ ಈ ವ್ಯವಹಾರ ಆಸೆ ಬಗ್ಗೆ ಅಮೆರಿಕಕ್ಕೆ ಕಿಂಚಿತ್ತೂ ಆಸಕ್ತಿ ಇಲ್ಲ. ಟ್ರಂಪ್‌ಗೂ ಅದರ ಬಗ್ಗೆ ಕಾಳಜಿ ಇಲ್ಲ. ಅದಕ್ಕೂ ಮಿಗಿಲಾಗಿ ಯಾರ ಜತೆಗೂ ಟ್ರಂಪ್‌ ದೀರ್ಘಾವಧಿ ಸಂಬಂಧವನ್ನು ಮುಂದುವರಿಸುವ ಸಾಮರ್ಥ್ಯವನ್ನೇ ಹೊಂದಿಲ್ಲ. ಅಮೆರಿಕದ ಮಾಜಿ ವಿದೇಶಾಂಗ ಸಚಿವ ಹೆನ್ರಿ ಕಿಸ್ಸಿಂಜರ್‌ ಹೇಳಿದಂತೆ, ‘ಅಮೆರಿಕದ ಶತ್ರುವಾಗುವುದು ಅಪಾಯಕಾರಿ. ಆದರೆ ಅಮೆರಿಕದ ಸ್ನೇಹಿತನಾಗಿರುವುದು ಪ್ರಾಣಾಂತಿಕ!’

ಭಾರತಕ್ಕೆ ಅಮೆರಿಕ ಉಪಕಾರ ಮಾಡದು

ಅಮೆರಿಕಕ್ಕೆ ಭಾರತ ಪರಮಾಪ್ತ ಮಿತ್ರದೇಶವೇನಲ್ಲ. ‘ಕ್ವಾಡ್‌’ (ಆಸ್ಟ್ರೇಲಿಯಾ, ಭಾರತ, ಜಪಾನ್‌ ಹಾಗೂ ಅಮೆರಿಕವನ್ನೊಳಗೊಂಡ ಕೂಟ)ನಲ್ಲಿ ಅಮೆರಿಕ ಜತೆ ಸೇರಿಕೊಂಡು, ಚೀನಾವನ್ನು ಎದುರು ಹಾಕಿಕೊಂಡರೆ ದೀರ್ಘಾವಧಿಯಲ್ಲಿ ಅಪಾರ ಲಾಭಗಳಿಸಬಹುದು ಎಂದು ಭಾರತವೇನಾದರೂ ಅಂದುಕೊಂಡಿದ್ದರೆ ಅದು ತಪ್ಪು. ಜಗತ್ತಿನಲ್ಲಿ ಭಾರತಕ್ಕೆ ಸ್ವತಂತ್ರ ಸ್ಥಾನವಿದೆ. ಅದೊಂದು ಮಹಾನ್‌ ದೇಶ ಎಂಬುದೆಲ್ಲ ನಿಜ. ಆದರೆ ಚೀನಾ ಅಥವಾ ಅಮೆರಿಕ ಮುಂದೆ ಅಂತಹ ಸ್ಥಾನಮಾನವನ್ನು ಹೊಂದಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು.

ವಿಶ್ವದಲ್ಲೇ ಅತ್ಯಧಿಕ ಜನಸಂಖ್ಯೆ ಹೊಂದಿರುವ ದೇಶ ಭಾರತ, ನಿಜ. ಇದೊಂದು ಸೂಪರ್‌ಪವರ್‌ ದೇಶ. ಹಾಗಂತ, ಈ ಹಿನ್ನೆಲೆಯನ್ನು ಪರಿಗಣಿಸಿ ಅಮೆರಿಕ ಏನೋ ಮಹಾನ್‌ ಉಪಕಾರ ಮಾಡುತ್ತದೆ ಎಂದರೆ, ಅದು ಸುಳ್ಳು. ಅಂಥದ್ದೆಲ್ಲಾ ಆಗುವ ಸಾಧ್ಯತೆ ಕ್ಷೀಣ. ಹೀಗಾಗಿ ಅಮೆರಿಕ ಜತೆಯಲ್ಲೇ ಚೀನಾ ಜತೆಗೂ ಭಾರತ ಉತ್ತಮ ಸಂಬಂಧವನ್ನು ಹೊಂದಬೇಕು ಎಂಬುದು ನನ್ನ ಅನಿಸಿಕೆ. ಹೀಗಂತ ಹೇಳಿದರೆ ನನ್ನ ಹಲವು ಭಾರತೀಯ ಸ್ನೇಹಿತರು ನನ್ನ ಬಗ್ಗೆಯೇ ಅನುಮಾನ ಪಡುತ್ತಾರೆ. ಏನು ಮಾಡಲಿ?

50% ತೆರಿಗೆ ಎದುರಿಸಲು ಹೀಗೆ ಮಾಡಿ

ಟ್ರಂಪ್‌ ಈಗ ಭಾರತದ ಮೇಲೆ ಶೇ.50ರಷ್ಟು ತೆರಿಗೆ ವಿಧಿಸಿದ್ದಾರೆ. ಈಗ ಭಾರತ ಏನು ಮಾಡಬೇಕು? ಏನಿಲ್ಲ, ವೈವಿಧ್ಯಮಯ ರಫ್ತು ತಂತ್ರಗಾರಿಕೆಯನ್ನು ರೂಪಿಸಿಕೊಳ್ಳಬೇಕು. ಅದೇ ಈಗ ಆಗಬೇಕಿರುವುದು. ಅಮೆರಿಕ ಮೇಲಿನ ಅವಲಂಬನೆಯನ್ನು ತಗ್ಗಿಸಿಕೊಳ್ಳಬೇಕು. ಇದು ಮತ್ತೊಂದು ತಂತ್ರಗಾರಿಕೆ. ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್‌ಸಿಇಪಿ)ಯಲ್ಲಿ ಜಪಾನ್‌, ಕೊರಿಯಾ, ಚೀನಾ, ಆಸಿಯಾನ್‌ 10 ದೇಶಗಳು, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಇವೆ. ಈ ಕೂಟವನ್ನು ಭಾರತ ಸೇರಿಕೊಂಡರೆ ಅನುಕೂಲವಾಗುತ್ತೆ.

ಉಕ್ರೇನ್‌ ಯುದ್ಧಕ್ಕೆ ಕಾರಣ ಯಾರು?

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಆ.15ರಂದು ಸಭೆ ಸೇರುತ್ತಾರಂತೆ. ಉಕ್ರೇನ್‌ ಯುದ್ಧ ನಿಲ್ಲಿಸುವ ಬಗ್ಗೆ ಚರ್ಚೆ ನಡೆಯುತ್ತಂತೆ. ಸತ್ಯ ಗೊತ್ತಾ? ಉಕ್ರೇನ್‌ ಯುದ್ಧವನ್ನು ಕೊನೆಗಾಣಸುವ ಒಂದೇ ಒಂದು ಕ್ರಮವನ್ನೂ ಅಮೆರಿಕ ಈವರೆಗೂ ಕೈಗೊಂಡಿಲ್ಲ. ಹಾಗೆ ನೋಡಿದರೆ, ಈಗ ನಡೆಯುತ್ತಿರುವ ರಷ್ಯಾ- ಉಕ್ರೇನ್‌ ಯುದ್ಧಕ್ಕೆ ಮೂಲಭೂತವಾಗಿ ಪ್ರಚೋದನೆ ನೀಡಿದ್ದೇ ಅಮೆರಿಕ. ಅದು ಆಗಿದ್ದು 30 ವರ್ಷಗಳ ಹಿಂದೆ.

ವಾಸ್ತವವಾಗಿ ಎರಡು ದೇಶಗಳ ನಡುವೆ ಯುದ್ಧ ನಡೆಯುತ್ತಿರುವುದು ನ್ಯಾಟೋ ವಿಸ್ತರಣೆಯ ಕುರಿತಾಗಿ. ಅಂತಹ ವಿಸ್ತರಣೆಯ ಪ್ರಯತ್ನ ಆರಂಭವಾಗಿದ್ದು 1990ರ ದಶಕದಲ್ಲಿ. ರಷ್ಯಾ ಆಗ ಇನ್ನೂ ಸೋವಿಯತ್‌ ಒಕ್ಕೂಟವಾಗಿತ್ತು. ನ್ಯಾಟೋ ಪಡೆಗಳನ್ನು ಒಂದೇ ಒಂದು ಇಂಚಿನಷ್ಟೂ ಪೂರ್ವದತ್ತ ವಿಸ್ತರಿಸಬಾರದು ಎಂದು ಅಮರಿಕಕ್ಕೆ ತಾಕೀತು ಮಾಡಿತ್ತು. ಅಮೆರಿಕ ಕೂಡ ಒಪ್ಪಿಕೊಂಡಿತ್ತು ಎನ್ನಿ. 1991ರಲ್ಲಿ ಸೋವಿಯತ್‌ ರಷ್ಯಾ ಪತನದ ಬಳಿಕ ಅಮೆರಿಕ ತನ್ನ ಮಾತಿನಿಂದ ಹಿಂದೆ ಸರಿಯಿತು. ನ್ಯಾಟೋದ ವಿಸ್ತರಣೆ ಕೆಲಸ ಆರಂಭಿಸಿತು. ಅದೆಲ್ಲಾ ಆಗಿದ್ದು 1994ರಲ್ಲಿ. ಅಂತಹ ಭಯಾನಕ ನಿರ್ಧಾರ ಕೈಗೊಂಡವರು ಅಂದಿನ ಅಮೆರಿಕ ಅಧ್ಯಕ್ಷ ಬಿಲ್‌ ಕ್ಲಿಂಟನ್‌. ಅದೇ ಈಗ ರಷ್ಯಾ- ಉಕ್ರೇನ್‌ ಕಾದಾಡುವಂತೆ ಮಾಡಿದೆ. ಯುದ್ಧ ನಿಲ್ಲಿಸಬೇಕಾದರೆ, ಅದು ಶುರುವಾಗಿದ್ದು ಎಲ್ಲಿಂದ? ಅದಕ್ಕೆ ಏನು ಪರಿಹಾರ ಎಂಬುದನ್ನು ಕಂಡುಕೊಳ್ಳಬೇಕು ಅಲ್ಲವೇ?

ನಿಲ್ಲಬೇಕಿದ್ದ ಯುದ್ಧ, ನಡೆಸಿದ್ದು ಅಮೆರಿಕ!

ಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣ ಆರಂಭವಾಗಿದ್ದು 2022ರ ಫೆ.24ರಂದು. ಆ ವೇಳೆ ಎರಡೂ ದೇಶಗಳ ನಡುವೆ ಶಾಂತಿ ಒಪ್ಪಂದ ಬಹುತೇಕ ಅಂತಿಮ ಘಟ್ಟಕ್ಕೆ ತಲುಪಿಬಿಟ್ಟಿತ್ತು. ಆದರೆ ಅಮೆರಿಕ ಮೂಗು ತೋರಿಸಿತು ನೋಡಿ. ‘ಯಾವುದೇ ಕಾರಣಕ್ಕೂ ಒಪ್ಪಂದಕ್ಕೆ ಸಹಿ ಹಾಕಬೇಡಿ. ಏನೇ ಆಗಲಿ ಹೋರಾಡೋಣ, ರಷ್ಯಾವನ್ನು ಸೋಲಿಸಿಬಿಡೋಣ’ ಎಂದು ಉಕ್ರೇನ್‌ ಅಧ್ಯಕ್ಷ ಜೆಲೆನ್‌ಸ್ಕಿಗೆ ತಲೆ ಕೆಡಿಸಿತು. ಬಳಿಕ ಏನಾಯಿತೆಂದು ಎಲ್ಲರಿಗೂ ಗೊತ್ತಿದೆ.

ಯುದ್ಧ ನಿಲ್ಲಿಸಲು ಏನು ಮಾಡಬೇಕು? ಟ್ರಂಪ್‌ ಸತ್ಯ ಹೇಳಬೇಕು. ಅದು ಏನು? ಪೂರ್ವದಿಕ್ಕಿನತ್ತ (ರಷ್ಯಾ ಕಡೆಗೆ) ನ್ಯಾಟೋ ವಿಸ್ತರಣೆಯಾಗುವುದಿಲ್ಲ. ರಷ್ಯಾದಲ್ಲಿ ನಾಯಕತ್ವ ಬದಲಾವಣೆಗೆ ಅಮೆರಿಕ ನಿರಂತರ ಪ್ರಯತ್ನ ಮುಂದುವರಿಸುವುದಿಲ್ಲ ಅಥವಾ ರಷ್ಯಾವನ್ನು ಸುತ್ತುವರಿಯಲು ಬಯಸುವುದಿಲ್ಲ ಎಂದು ಹೇಳಬೇಕು. ಆ ರೀತಿ ಹೇಳಲು ಟ್ರಂಪ್‌ಗೆ ನಿಜಕ್ಕೂ ಧೈರ್ಯ ಇದೆಯಾ?

Read more Articles on