ಸಾರಾಂಶ
ಲಡಾಖ್ ಸಮೀಪದಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸುವ ಮೂಲಕ ಭಾರತಕ್ಕೆ ಭಾರೀ ಅಪಾಯ ಒಡ್ಡಲು ಮುಂದಾಗಿದ್ದ ಚೀನಾದ ತಂತ್ರಕ್ಕೆ ಇದೀಗ ಭಾರತ ಕೂಡಾ ಪ್ರತಿತಂತ್ರ ಹೆಣೆದಿದೆ.
ನವದೆಹಲಿ: ಲಡಾಖ್ ಸಮೀಪದಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸುವ ಮೂಲಕ ಭಾರತಕ್ಕೆ ಭಾರೀ ಅಪಾಯ ಒಡ್ಡಲು ಮುಂದಾಗಿದ್ದ ಚೀನಾದ ತಂತ್ರಕ್ಕೆ ಇದೀಗ ಭಾರತ ಕೂಡಾ ಪ್ರತಿತಂತ್ರ ಹೆಣೆದಿದೆ. ಟಿಬೆಟ್ ಮೂಲಕ ಭಾರತಕ್ಕೆ ಹರಿದು ಬರುವ ಬ್ರಹ್ಮಪುತ್ರ ನದಿಗೆ ಅರುಣಾಚಲಪ್ರದೇಶದಲ್ಲಿ ಬೃಹತ್ ಅಣೆಕಟ್ಟು ಕಟ್ಟಲು ಭಾರತ ಕೂಡಾ ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.
ಸಿಯಾಂಗ್ ಎಂದು ಚೀನಾ ಕರೆಯುವ, ಭಾರತ ಬ್ರಹ್ಮಪುತ್ರ ಎಂದು ಗುರುತಿಸುವ ನದಿಗೆ ಅರುಣಾಚಲದಲ್ಲಿ 9.2 ಶತಕೋಟಿ ಕ್ಯುಬಿಕ್ ಮೀಟರ್ ನೀರು ಸಂಗ್ರಹ ಸಾಮರ್ಥ್ಯದ ಅಣೆಕಟ್ಟನ್ನು 1.5 ಲಕ್ಷ ಕೋಟಿ ರು.ವೆಚ್ಚದಲ್ಲಿ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಈಗಾಗಲೇ ಕಾರ್ಯಸಾಧ್ಯತೆ ಪರೀಕ್ಷೆ ನಡೆಸಲು ಡ್ರಿಲ್ಲಿಂಗ್ ಶುರುಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಯೋಜನೆಯು ಗಡಿರಾಜ್ಯದಲ್ಲಿ ಆರ್ಥಿಕ ಬೆಳವಣಿಗೆ, ಅಧಿಕ ಶಕ್ತಿ ಉತ್ಪಾದನೆಗೆ ನೆರವಾಗುವುದರ ಜೊತೆಗೆ ಉದ್ಯೋಗ ಸೃಷ್ಟಿಗೂ ನೆರವಾಗಲಿದೆ. ಇದಕ್ಕಿಂತ ಹೆಚ್ಚಾಗಿ ಟಿಬೆಟ್‌ನಲ್ಲಿ ನಿರ್ಮಿಸಲಿರುವ ಅಣೆಕಟ್ಟನ್ನು ಯುದ್ಧದಂಥ ಸಂದರ್ಭದಲ್ಲಿ ಚೀನಾ ತನ್ನ ಅಸ್ತ್ರವಾಗಿ ಬಳಸುವ ಸಾಧ್ಯತೆ ಇದೆ ಎಂಬ ಆತಂಕವೂ ಉಂಟಾಗಿತ್ತು.
ಇದೀಗ ಭಾರತ ಕೂಡಾ ಅಣೆಕಟ್ಟು ನಿರ್ಮಿಸುವುದು ಅಂಥ ಯಾವುದೇ ಸಂಭವನೀಯ ಜಲಾಸ್ತ್ರ ತಡೆಗೂ ನೆರವು ನೀಡಲಿದೆ. ಚೀನಾವು ಟಿಬೆಟ್ ಅಣೆಕಟ್ಟನ್ನು ಭಾರತದ ವಿರುದ್ಧ ವಾಟರ್ ಬಾಂಬ್ ಆಗಿ ಬಳಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂದು ಎರಡು ದಿನಗಳ ಹಿಂದಷ್ಟೇ ಅರುಣಾಚಲಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಕಳವಳ ವ್ಯಕ್ತಪಡಿಸಿದ್ದರು.
ಪರಿಸರದ ಕುರಿತು ಕಾಳಜಿ: ವ್ಯೂಹಾತ್ಮಕ ದೃಷ್ಟಿಯಿಂದ ಈ ಯೋಜನೆ ಭಾರತದ ಪಾಲಿಗೆ ಮಹತ್ವಪೂರ್ಣವಾದರೂ, ಪರಿಸರದ ಮೇಲೆ ಋಣಾತ್ಮಕ ಪರಿಣಾಮ ಬೀರುವ ಆತಂಕವಿದೆ. ಮುಖ್ಯವಾಗಿ ಕಿತ್ತಳೆ ಬೆಳೆಯ ಮೇಲೆ ಅವಲಂಬಿತರಾಗಿರುವ ಸ್ಥಳೀಯರು, ಈ ಅಣೆಕಟ್ಟು ನಿರ್ಮಾಣದಿಂದ ಆತಂಕಕ್ಕೊಳಗಾಗಿದ್ದಾರೆ. ಅತ್ತ ಪರಿಸರವಾದಿಗಳು ಕೂಡ ಪರಿಸರದ ಮೇಲಾಗುವ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಅಭಿವೃದ್ಧಿಯೊಂದಿಗೆ ಪರಿಸರ ಸಂರಕ್ಷಣೆಯನ್ನೂ ಪರಿಗಣಿಸುವಂತೆ ಕೋರಿದ್ದಾರೆ. ಸರ್ಕಾರವೂ ಸುಸ್ಥಿರತೆಯನ್ನು ಕಾಪಾಡುವ ಭರವಸೆ ನೀಡಿದೆ.
ಮಾನಸ ಸರೋವರ ಯಾತ್ರೆ ಪುನರಾರಂಭ
ನವದೆಹಲಿ: ಹಿಂದೂಗಳಿಗೆ ಪವಿತ್ರ ಸ್ಥಳವಾದ ಮಾನನ ಸರೋವರಕ್ಕೆ ಯಾತ್ರೆಯನ್ನು ಪುನಾರಂಭಿಸಲು ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ. ಇದರೊಂದಿಗೆ ಸುಮಾರು 5 ವರ್ಷಗಳ ಬಳಿಕ ಚೀನಾ ಮಾರ್ಗವಾಗಿ ಸುಲಭವಾಗಿ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಸಾವಿರಾರು ಹಿಂದೂಗಳ ಕನಸಿಗೆ ಮತ್ತೆ ಜೀವ ಬಂದಂತೆ ಆಗಿದೆ.ಚೀನಾ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮತ್ತು ಚೀನಾದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಾಂಗ್ ಯಿ ನಡುವಿನ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜೊತೆಗೆ ಉಭಯ ದೇಶಗಳ ನಡುವೆ ನೇರ ವಿಮಾನ ಸಂಪರ್ಕವನ್ನು ಪುನರಾರಂಭಿಸಲು ಸಹ ಪರಸ್ಪರ ಒಪ್ಪಿಕೊಳ್ಳಲಾಗಿದೆ.
ಕೋವಿಡ್ ಕಾರಣದಿಂದ 2020ರಲ್ಲಿ ಟಿಬೆಟ್‌ನ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ನಿಲ್ಲಿಸಲಾಗಿತ್ತು. ಕೋವಿಡ್ ನಂತರ ಭಾರತ ಮತ್ತು ಚೀನಾ ನಡುವಿನ ಸಂಘರ್ಷದ ಕಾರಣದಿಂದ ಯಾತ್ರೆಯನ್ನು ಪುನರಾರಂಭಿಸಲು ಚೀನಾ ಹಿಂದೇಟು ಹಾಕಿತ್ತು. ಗಲ್ವಾನ್ ಸಂಘರ್ಷದ ನಂತರ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡು ಯಾತ್ರೆ 4 ವರ್ಷಗಳಿಂದ ಸಂಪೂರ್ಣ ನಿಂತುಹೋಗಿತ್ತು. ಇದೀಗ ಯಾತ್ರೆ ಪುನರಾರಂಭಕ್ಕೆ ಉಭಯ ದೇಶಗಳು ಒಪ್ಪಿಕೊಂಡಿದ್ದು, ಭಾರತದ ವಿದೇಶಾಂಗ ನೀತಿಗೆ ಬಹುದೊಡ್ಡ ಯಶ ದೊರಕಿದೆ.