ಸಾರಾಂಶ
ಕುಲ್ಗಾಮ್: ಮಿನಿ ಸ್ವಿಜರ್ಲೆಂಡ್ ಅಂತಲೇ ಕರೆಯಲ್ಪಡುತ್ತಿದ್ದ ಪಹಲ್ಗಾಂ ನೆತ್ತರ ಕೋಡಿ ಉಗ್ರರ ಪಕ್ಕಾ ಪ್ಲ್ಯಾನ್‌ನಂತೆಯೇ ನಡೆದಿದೆ ಎಂದು ಗೊತ್ತಾಗಿದೆ. ದುರ್ಗಮ ಪ್ರದೇಶವಾಗಿರುವ ಪಹಲ್ಗಾಂನಿಂದ 6 ಕಿಮೀ ದೂರದಲ್ಲಿರುವ ಪ್ರದೇಶವಾದ ಬೈಸರನ್ ಅನ್ನು ತಲುಪುವುದು ಕಷ್ಟ.
ಕಾಲ್ನಡಿಗೆ ಹಾಗೂ ಕುದುರೆ ಮೂಲಕ ಮಾತ್ರ ಇಲ್ಲಿ ತಲುಪಬಹುದು. ಹೀಗಾಗಿ ಇಲ್ಲಿ ದಾಳಿ ನಡೆಸಿದರೆ ರಕ್ಷಣೆ ವಿಳಂಬವಾಗಿ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎನ್ನುವ ಕಾರಣಕ್ಕೆ ಉಗ್ರರು ಇದೇ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.ಪಹಲ್ಗಾಂಮ ಬೈಸರನ್ ಸುತ್ತಲೂ ಹಚ್ಚ ಹಸುರನ್ನೇ ಹಾಸಿ ಹೊದ್ದಿರುವ ಹುಲ್ಲುಗಾವಲು ಪ್ರದೇಶ.
ಇಲ್ಲಿ ಭದ್ರತಾ ಸಿಬ್ಬಂದಿ ಇರುವುದಿಲ್ಲ.ಮಾತ್ರವಲ್ಲದೇ, ಬೈಸರನ್‌ಗೆ ಮಣ್ಣಿನ ಹಾದಿಯಿದೆ. ಅಲ್ಲಿಗೆ ವಾಹನ ಹೋಗುವುದಿಲ್ಲ. ತಲುಪಬೇಕಾದರೆ ಕಾಲ್ನಡಿಗೆ ಅಥವಾ ಕುದುರೆ ಸವಾರಿಯ ಮೂಲಕ ಮಾತ್ರ ಹೋಗಬೇಕು.
ಹೀಗಾಗಿ ಇಲ್ಲಿ ದಾಳಿ ನಡೆಸಿದರೆ ರಕ್ಷಣಾ ಕಾರ್ಯಗಳು ವಿಳಂಬವಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಇದರಿಂದ ಸಾವು ನೊವುಗಳ ಸಾಧ್ಯತೆಯೂ ಹೆಚ್ಚಾಗುತ್ತದೆ. ಹೀಗಾಗಿ ಇದೇ ಸ್ಥಳದಲ್ಲಿ ದಾಳಿಗೆ ಉಗ್ರರು ಸಂಚು ರೂಪಿಸಿದ್ದರು ಎಂದು ಮೂಲಗಳು ಹೇಳಿವೆ.ದಾಳಿಗೂ ಮುನ್ನ ಭಯೋತ್ಪಾದಕರು ದಟ್ಟಡವಿಯಲ್ಲಿ ಅಡುಗುತಾಣಗಳನ್ನು ಸ್ಥಾಪಿಸಿದ್ದರು. ಬಳಿಕ ಸ್ಥಳೀಯ ಭಯೋತ್ಪಾದಕರು ಮತ್ತು ಸ್ಲೀಪರ್ ಏಜೆಂಟ್‌ಗಳ ಸಹಾಯದಿಂದ ನೆಲೆ ಬದಲಿಸಿ ಪಹಲ್ಗಾಂನಲ್ಲಿ ಗುಂಡಿನ ದಾಳಿ ನಡೆಸಿರುವ ಸಾಧ್ಯತೆಯಿದೆ ಎಂದು ತನಿಖೆಯಲ್ಲಿ ಬಯಲಾಗಿದೆ.