‘ಇರಾನ್ ದುರ್ಬಲಗೊಂಡು ಯಾವುದೇ ಆಯ್ಕೆಗಳಿಲ್ಲದೆ ಅವಮಾನಕ್ಕೊಳಗಾಗಿದೆ. ಹೀಗಾಗಿ ಕದನ ವಿರಾಮಕ್ಕಾಗಿ ಅಮೆರಿಕ ಬಳಿ ಬೇಡಿಕೊಂಡಿತು’ ಎಂದು ಅಮೆರಿಕದ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಹೇಳಿದ್ದಾರೆ.
ವಾಷಿಂಗ್ಟನ್: ‘ಇರಾನ್ ದುರ್ಬಲಗೊಂಡು ಯಾವುದೇ ಆಯ್ಕೆಗಳಿಲ್ಲದೆ ಅವಮಾನಕ್ಕೊಳಗಾಗಿದೆ. ಹೀಗಾಗಿ ಕದನ ವಿರಾಮಕ್ಕಾಗಿ ಅಮೆರಿಕ ಬಳಿ ಬೇಡಿಕೊಂಡಿತು’ ಎಂದು ಅಮೆರಿಕದ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಹೇಳಿದ್ದಾರೆ.
ಕದನ ವಿರಾಮದ ಬಳಿಕ ಪತ್ರಕರ್ತರ ಜತೆ ಮಾತನಾಡಿದ ಹೆಗ್ಸೆತ್, ‘ಇರಾನ್‌ಗೆ ಯಾವುದೇ ಆಯ್ಕೆಗಳಿಲ್ಲ ಮತ್ತು ಸಮಯವೂ ಮೀರಿದೆ. ಹೀಗಾಗಿ ಅದು ಅನಿವಾರ್ಯವಾಗಿ ಮಾತುಕತೆಗೆ ಬರಬೇಕಾಯಿತು. ಇರಾನ್‌ನ ಹೊಸ ನಾಯಕತ್ವವು ಈ ಒಪ್ಪಂದವು ವಿಧಿಗಿಂತ ಉತ್ತಮವಾಗಿದೆ ಎಂದು ಅರಿತುಕೊಂಡಿತು. ಇರಾನಿಯರು ಅವಮಾನಿತರಾಗಿ, ನಿರಾಶೆಗೊಂಡಿದ್ದಾರೆ.
ಆಡಳಿತವು ಕದನ ವಿರಾಮಕ್ಕಾಗಿ ನಮ್ಮಲ್ಲಿ ಬೇಡಿಕೊಂಡಿತು’ ಎಂದರು.‘ಇರಾನಿನ ನಾಯಕತ್ವವನ್ನು ವ್ಯವಸ್ಥಿತವಾಗಿ ನಿರ್ಮೂಲನೆ ಮಾಡಲಾಗಿದೆ. ಎಂದಿಗೂ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದುವುದಿಲ್ಲ ಎಂದು ಅದು ಖಚಿತಪಡಿಸಿದೆ. ಆಪರೇಷನ್ ಎಪಿಕ್ ಫ್ಯೂರಿಯಲ್ಲಿ ಅಮೆರಿಕವು ಇರಾನ್ ವಿರುದ್ಧ ನಿರ್ಣಾಯಕ ಮಿಲಿಟರಿ ವಿಜಯವನ್ನು ಸಾಧಿಸಿತು. ಇರಾನ್‌ನ ಕ್ಷಿಪಣಿ ಕಾರ್ಯಕ್ರಮವು ಕ್ರಿಯಾತ್ಮಕವಾಗಿ ನಾಶವಾಗಿದೆ’ ಎಂದರು, ಜತೆಗೆ ಮಂಗಳವಾರ ಇರಾನ್ ಮೇಲೆ ಘೋರ ದಾಳಿ ಮಾಡಿದ್ದೇವೆ ಎಂದಿರುವ ಅವರು, ‘ಮಂಗಳವಾರ ರಾತ್ರಿ ನಾವು 800 ದಾಳಿಗಳನ್ನು ನಡೆಸಿದ್ದೇವೆ, ಇರಾನ್‌ನ ರಕ್ಷಣಾ ಕೈಗಾರಿಕಾ ನೆಲೆಯನ್ನು ನಾಶಪಡಿಸಿದ್ದೇವೆ. ಇರಾನ್‌ನ ಕಾರ್ಖಾನೆಗಳು ನೆಲಸಮವಾಗಿವೆ’ ಎಂದು ಹೇಳಿಕೊಂಡರು.
ಕದನವಿರಾಮ ಘೋಷಿಸಿದ ಟ್ರಂಪ್ ಹೇಳಿದ್ದೇನು?
ಷರೀಫ್ ಫೋನ್ ಮಾಡಿದರು, ಒಪ್ಪಿದೆ‘
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರೊಂದಿಗೆ ಮಾತುಕತೆ ನಡೆಯಿತು. ಅವರು ಇಂದು ರಾತ್ರಿ ಇರಾನ್‌ಗೆ ಕಳುಹಿಸಲಾಗುತ್ತಿರುವ ವಿನಾಶಕಾರಿ ಪಡೆಯನ್ನು ತಡೆಹಿಡಿಯುವಂತೆ ವಿನಂತಿಸಿದರು. ಇರಾನ್ ದೇಶವು ಹೋರ್ಮುಜ್ ಜಲಸಂಧಿಯನ್ನು ತಕ್ಷಣವೇ ಪೂರ್ಣರೂಪದಲ್ಲಿ ಮತ್ತು ಸುರಕ್ಷಿತವಾಗಿ ತೆರೆಯಲು ಒಪ್ಪಿಕೊಂಡರೆ, ಇರಾನ್ ಮೇಲಿನ ಬಾಂಬ್ ದಾಳಿಯನ್ನು 2 ವಾರಗಳ ಅವಧಿಗೆ ಸ್ಥಗಿತಗೊಳಿಸಲು ನಾನು ಒಪ್ಪುತ್ತೇನೆ. ಇದು ದ್ವಿಪಕ್ಷೀಯ ಕದನವಿರಾಮ ಆಗಿರುತ್ತದೆ!
ಹಾಗೆ ಮಾಡಲು ಕಾರಣವೆಂದರೆ ನಾವು ಈಗಾಗಲೇ ಎಲ್ಲಾ ಮಿಲಿಟರಿ ಉದ್ದೇಶಗಳನ್ನು ಪೂರೈಸಿದ್ದೇವೆ. ನಾವು ಇರಾನ್‌ನಿಂದ 10-ಅಂಶಗಳ ಪ್ರಸ್ತಾವನೆಯನ್ನು ಸ್ವೀಕರಿಸಿದ್ದೇವೆ ಮತ್ತು ಅದು ಮಾತುಕತೆ ನಡೆಸಲು ಕಾರ್ಯಸಾಧ್ಯವಾದ ಪ್ರಸ್ತಾವನೆ ಆಗಿದೆ. ಇದು 2 ವಾರಗಳ ಅವಧಿಯು ಒಪ್ಪಂದವನ್ನು ಅಂತಿಮಗೊಳಿಸಲು ಮತ್ತು ಪೂರ್ಣಗೊಳಿಸಲು ಅನುವು ಮಾಡಿಕೊಡುತ್ತದೆ. ದೀರ್ಘಕಾಲೀನ ಸಮಸ್ಯೆ ಪರಿಹಾರದ ಹಂತಕ್ಕೆ ಬರಲಿ ಎಂದು ಆಶಿಸುವೆ. ಹೋರ್ಮುಜ್ ಜಲಸಂಧಿಯನ್ನು ತೆರೆಯುವುದು ಮಧ್ಯಪ್ರಾಚ್ಯದ ಪಾಲಿಗೆ ಸುವರ್ಣಯುವಾಗಿದೆ. ಇದರಿಂದ ಭಾರಿ ಆರ್ಥಿಕ ಲಾಭವಾಗಲಿದೆ. ಈ ವಿಷಯದ ಬಗ್ಗೆ ನಿಮ್ಮ ಗಮನಕ್ಕೆ ಧನ್ಯವಾದಗಳು!
- ಡೊನಾಲ್ಡ್ ಜೆ. ಟ್ರಂಪ್, ಅಮೆರಿಕ ಅಧ್ಯಕ್ಷ
ಸಂಧಾನ ಸಭೆ ಕಾರಣ ಇಸ್ಲಾಮಾಬಾದ್‌ನಲ್ಲಿ ಇಂದು, ನಾಳೆ ರಜೆ
ಇಸ್ಲಾಮಾಬಾದ್: ಅಮೆರಿಕ ಮತ್ತು ಇರಾನ್ ನಡುವೆ ಶುಕ್ರವಾರ ನಡೆಯಲಿರುವ ಶಾಂತಿ ಮಾತುಕತೆ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರ ರಾಷ್ಟ್ರ ರಾಜಧಾನಿಯಲ್ಲಿ 2 ದಿನಗಳ ರಜೆ ಘೋಷಿಸಿದೆ. ಗುರುವಾರ ಹಾಗೂ ಶುಕ್ರವಾರ ಅಗತ್ಯ ಸೇವೆ ಹೊರತುಪಡಿಸಿ ಮಿಕ್ಕ ಸೇವೆ ಲಭ್ಯವಿರುವುದಿಲ್ಲ ಎಂದು ಸರ್ಕಾರ ಹೇಳಿದೆ. ಭದ್ರತಾ ಕಾರಣಕ್ಕೆ ಈ ಕ್ರಮ ಜರುಗಿಸಲಾಗಿದೆ.