ಸೇನಾ ಕಟ್ಟಡ, ನೌಕಾನೆಲೆ, ಕ್ಷಿಪಣಿ ಘಟಕ, ತೈಲ ಟ್ಯಾಂಕರ್‌, ಏರ್ಪೋರ್ಟ್‌ಗಳೇ ದಾಳಿಯ ಪ್ರಮುಖ ಗುರಿ

ಸತತ 6ನೇ ದಿನವೂ ಅಮೆರಿಕ, ಇಸ್ರೇಲ್‌- ಇರಾನ್‌ ತೀವ್ರ ಸಂಘರ್ಷ । ಭಾರೀ ಪ್ರಮಾಣದ ಸಾವು ನೋವು

ದುಬೈ: ಇರಾನ್‌ಗೆ ಅಣ್ವಸ್ತ್ರ ಸಿಗಬಾರದೆಂಬ ಗುರಿಯೊಂದಿಗೆ ಅಮೆರಿಕ- ಇಸ್ರೇಲ್‌ ಆರಂಭಿಸಿದ್ದ ಯುದ್ಧ ಇದೀಗ 6ನೇ ದಿನ ಪೂರ್ಣಗೊಳಿಸಿದ್ದು, ತಕ್ಷಣಕ್ಕೆ ಸ್ಥಗಿತಗೊಳಿಸುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಜೊತೆಗೆ ದಿನೇ ದಿನೇ ಉಭಯ ಬಣಗಳು ದಾಳಿ ನಡೆಸುತ್ತಿರುವ ಸ್ಥಳಗಳನ್ನು ಗಮನಿಸಿದರೆ ಯುದ್ಧದ ದಿಕ್ಕೀಗ ಪೂರ್ಣ ಪ್ರಮಾಣದಲ್ಲಿ ಪರಸ್ಪರರ ಸೇನಾಬಲ, ಮೂಲಸೌಕರ್ಯ ಮಟ್ಟಹಾಕುವುದು ಮತ್ತು ಆರ್ಥಿಕವಾಗಿ ಪೆಟ್ಟು ನೀಡುವ ಕಡೆಗೆ ಸಾಗಿದ್ದು ಕಂಡುಬರುತ್ತಿದೆ.

ಇರಾನ್‌ ದಾಳಿ:

ತನ್ನ ಯುದ್ಧನೌಕೆ ಹೊಡೆದುರುಳಿಸಿದ ಅಮೆರಿಕದ ಕ್ರಮಕ್ಕೆ ಗುರುವಾರ ತಿರುಗೇಟು ನೀಡಿರುವ ಇರಾನ್‌, ಅಮೆರಿಕದ ಟ್ಯಾಂಕರ್‌ ಒಂದನ್ನು ಹೊಡೆದುರುಳಿಸಿದೆ. ಅಲ್ಲದೆ ಈ ಕೃತ್ಯಕ್ಕೆ ಅಮೆರಿಕ ತೀವ್ರ ಪಶ್ಚಾತಾಪ ಪಡಲಿದೆ ಎಂದು ಎಚ್ಚರಿಸಿದೆ. ಜೊತೆಗೆ ಇರಾನ್‌ ಇಡೀ ಮಧ್ಯಪ್ರಾಚ್ಯದ ಮಿಲಿಟರಿ ಮತ್ತು ಆರ್ಥಿಕ ಮೂಲಸೌಕರ್ಯ ನಾಶದ ಎಚ್ಚರಿಕೆ ನೀಡಿದೆ. ಅಲ್ಲದೆ, ಒಂದು ವೇಳೆ ಇರಾನ್‌ನಲ್ಲಿ ಆಡಳಿತ ಬದಲಾವಣೆಗೇನಾದರೂ ಯತ್ನಿಸಿದರೆ ಇಸ್ರೇಲ್‌ ಡಿಮೋನಾ ಪರಮಾಣು ಘಟಕದ ಮೇಲೆ ದಾಳಿಯ ಎಚ್ಚರಿಕೆಯನ್ನೂ ನೀಡಿದೆ.


ಇದರ ನಡುವೆಯೇ, ಕರಾವಳಿ ತೀರದಲ್ಲಿ ಲಂಗರು ಹಾಕಿದ್ದ ಕುವೈತ್‌ ತೈಲ ಟ್ಯಾಂಕರ್‌, ಅಜರ್‌ಬೈಜಾನ್‌ನ ನಚಿವಿಯನ್‌ ವಿಮಾನ ನಿಲ್ದಾಣದ ಮೇಲೆ ಇರಾನ್ ದಾಳಿ ನಡೆಸಿದೆ. ಜೊತೆಗೆ, ದುಬೈ, ಸೌದಿ ಅರೇಬಿಯಾ, ಟೆಲ್ಅವಿವ್‌, ಜೆರುಸಲೆಂ ಮೇಲೆ ಇರಾನ್‌ ನಡೆಸಿದ ಡ್ರೋನ್ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಲಾಗಿದೆ. ಜೊತೆಗೆ ಇರಾಕ್‌ನಲ್ಲಿರುವ ಖುರ್ದಿಶ್‌ ಬಂಡುಕೋರರ ಗುಂಪಿನ ಕೇಂದ್ರ ಕಚೇರಿ ಮೇಲೂ ದಾಳಿ ನಡೆಸಿದೆ.

ಜಂಟಿ ತಿರುಗೇಟು:

ಈ ನಡುವೆ ಟೆಹ್ರಾನ್‌ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿನ ಸೇನಾ ಕಚೇರಿ, ಇರಾನ್‌ನ ಬಂದರ್‌ ಅಬ್ಬಾಸ್‌ ಬಂದರು ಬಳಿ ಇರುವ ರೆವಲ್ಯೂಷನರಿ ಗಾರ್ಡ್ಸ್‌ನ ನೌಕಾನೆಲೆ ಮೇಲೆ ಗಳನ್ನು ಗುರಿಯಾಗಿಸಿ ಗುರುವಾರವೂ ಅಮೆರಿಕ ಮತ್ತು ಇಸ್ರೇಲ್‌ ದಾಳಿ ನಡೆಸಿವೆ. ಮತ್ತೊಂದೆಡೆ ಈ ನಡುವೆ ಅಮೆರಿಕದ ಬೆಂಬಲದೊಂದಿಗೆ ಇರಾನ್ ವಿರುದ್ಧ ಹೋರಾಡಲು ಸಜ್ಜಾಗಿರುವುದಾಗಿ ಖರ್ದಿಶ್‌ ಬಂಡುಕೋರರ ಗುಂಪು ಘೋಷಿಸಿದೆ. ಅಲ್ಲದೆ ಲೆಬನಾನ್‌ ಮೇಲೆ ಮತ್ತೊಂದು ಸುತ್ತಿನಲ್ಲಿ ಭಾರೀ ದಾಳಿ ನಡೆಸಿದ್ದಾಗಿ ಇಸ್ರೇಲ್ ಹೇಳಿದೆ.

==

ಖಮೇನಿ ಸಾವಿಗೆ ಭಾರತ ಸಂತಾಪ

ಅಯಾತೊಲ್ಲಾ ಹತ್ಯೆಗೆ ಮೊದಲ ಪ್ರತಿಕ್ರಿಯೆ । ಅರಾಗ್ಚಿ ಜತೆ ಜೈಶಂಕರ್‌ ಸಂಭಾಷಣೆ

ನವದೆಹಲಿ: 36 ವರ್ಷಗಳ ಕಾಲ ಇರಾನ್‌ನ ಸರ್ವೋಚ್ಚ ನಾಯಕನಾಗಿದ್ದು, ಇತ್ತೀಚೆಗೆ ಅಮೆರಿಕ ದಾಳಿಗೆ ಬಲಿಯಾದ ಅಯಾತೊಲ್ಲಾ ಅಲಿ ಖಮೇನಿ ಸಾವಿಗೆ ಭಾರತ ಸಂತಾಪ ಸೂಚಿಸಿದೆ. ಖಮೇನಿ ಕಳೆದ ಭಾನುವಾರ ಬಲಿಯಾಗಿದ್ದು, ಆ ಬಗ್ಗೆ ಭಾರತದ ಮೊದಲ ಪ್ರತಿಕ್ರಿಯೆಯಿದು.

ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಶ್ರಿಯವರು ಭಾರತಕ್ಕೆ ಇರಾನ್‌ ರಾಯಭಾರಿಯಾಗಿರುವ ಮೊಹಮ್ಮದ್ ಫತಾಲಿ ಅವರನ್ನು ಭೇಟಿಯಾಗಿ, ತಾವು ಸಹಿ ಮಾಡಿರುವ ಶ್ರದ್ಧಾಂಜಲಿ ಪುಸ್ತಕವನ್ನು ನೀಡಿದರು. ಈ ಮೂಲಕ ಪರೋಕ್ಷವಾಗಿ ಖಮೇನಿ ಹತ್ಯೆಯನ್ನು ಖಂಡಿಸಿಸಲಾಗಿದೆ. ಅತ್ತ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್‌ ಅರಾಗ್ಚಿ ಜತೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಆದರೆ ಯಾವ ವಿಷಯದ ಬಗ್ಗೆ ಚರ್ಚೆಯಾಗಿದೆ ಎಂಬುದು ತಿಳಿದುಬಂದಿಲ್ಲ.ಖಮೇನಿ ಹತ್ಯೆಯಾದ ಬೆನ್ನಲ್ಲೇ, ಆ ಬಗ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಬೇಕು ಎಂದು ವಿಪಕ್ಷದ ನಾಯಕರು ಪಟ್ಟು ಹಿಡಿದಿದ್ದರು. ಆದರೆ ಮೋದಿ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ್ದರೇ ಹೊರತು, ಇರಾನ್‌ ಮೇಲಿನ ಅಮೆರಿಕ-ಇಸ್ರೇಲ್‌ನ ದಾಳಿಯನ್ನು ಖಂಡಿಸುವ ಅಥವಾ ಬೆಂಬಲಿಸುವ ಹೇಳಿಕೆಯನ್ನು ನೀಡಿರಲಿಲ್ಲ.

==

ಇಸ್ರೇಲಿಗರು, ಟ್ರಂಪ್‌ ರಕ್ತ ಹರಿಸಿ: ಇರಾನ್‌ ಇಮಾಮ್‌ ಕರೆ

-ಖಮೇನಿ ಹತ್ಯೆ ಪ್ರತೀಕಾರಕ್ಕೆ ಪ್ರಚೋದನೆ

ದುಬೈ: ಖಮೇನಿಯನ್ನು ಹತ್ಯೆಗೈದ ಅಮೆರಿಕ ಮತ್ತು ಇಸ್ರೇಲ್‌ ವಿರುದ್ಧ ಇರಾನ್‌ನ ಪ್ರತೀಕಾರ ಜ್ವಾಲೆ ಮುಂದುವರಿದಿದ್ದು, ‘ಎಲ್ಲ ಇಸ್ರೇಲಿಗಳ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ರಕ್ತವನ್ನು ಹರಿಸಿ’ ಎಂದು ಪ್ರಭಾವಿ ಧಾರ್ಮಿಕ ಮುಖಂಡರೊಬ್ಬರು ದೇಶದ ಜನರಿಗೆ ಕರೆ ನೀಡಿದ್ದಾರೆ.

ರಾಜಕೀಯ ಮುಖಂಡರೂ ಆಗಿರುವ ಆಯತೊಲ್ಲ ಅಬ್ದುಲ್ಲಾ ಜವಾದಿ ಅಮೋಲಿ ನೀಡಿರುವ ಸಂದೇಶವನ್ನು ಸರ್ಕಾರಿ ಸುದ್ದಿವಾಹಿನಿ ಪ್ರಸಾರ ಮಾಡಿದೆ. ‘ನಾವು ಈಗ ಒಂದು ದೊಡ್ಡ ಪರೀಕ್ಷೆಯ ಅಂಚಿನಲ್ಲಿದ್ದೇವೆ. ಈ ಏಕತೆಯನ್ನು ಸಂಪೂರ್ಣವಾಗಿ ಕಾಪಾಡಿಕೊಳ್ಳಬೇಕು. ಈ ಒಗ್ಗಟ್ಟನ್ನು ಸಂಪೂರ್ಣವಾಗಿ ಉಳಿಸಿಕೊಳ್ಳಬೇಕು. ಯಹೂದಿಗಳ ಮತ್ತು ಟ್ರಂಪ್‌ರ ರಕ್ತ ಹರಿಸಬೇಕಿದೆ. ಅನ್ಯಾಯದ ಅಮೆರಿಕದ ವಿರುದ್ಧ ಹೋರಾಡಿ. ಟ್ರಂಪ್‌ ರಕ್ತದ ಹೊಣೆ ನನ್ನ ಹೆಗಲ ಮೇಲಿದೆ’ ಎಂದಿದ್ದಾರೆ.

==

ಸುಪ್ರೀಂ ನಾಯಕನ ಆಯ್ಕೆ ಇನ್ನೂ ಆಗಿಲ್ಲ: ಇರಾನ್‌

- ಮೊಜ್ತಬಾ ಆಯ್ಕೆ ವದಂತಿ ಬೆನ್ನಲ್ಲೇ ಹೇಳಿಕೆ

ನವದೆಹಲಿ: ಕಳೆದ ವಾರ ಅಮೆರಿಕ-ಇಸ್ರೇಲ್ ಜಂಟಿ ವೈಮಾನಿಕ ದಾಳಿಯಲ್ಲಿ ಹತ್ಯೆಗೀಡಾದ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಉತ್ತರಾಧಿಕಾರಿಯನ್ನು ಇರಾನ್ ಇನ್ನೂ ಆಯ್ಕೆ ಮಾಡಿಲ್ಲ ಎಂದು ಇರಾನ್‌ನ ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಖಮೇನಿಯವರ ಪುತ್ರ ಮೊಜ್ತಬಾ ಖಮೇನಿಯವರನ್ನು ಸರ್ವೋಚ್ಚ ನಾಯಕನಾಗಿ ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಅವರು, ‘ಈ ಹುದ್ದೆಗೆ ಹಲವಾರು ಅಭ್ಯರ್ಥಿಗಳಿದ್ದಾರೆ. ಅಯತೊಲ್ಲಾ ಮೊಜ್ತಬಾ ಅವರಲ್ಲಿ ಒಬ್ಬರು. ಖಮೇನಿಯವರ ಮಗ ಎಂಬ ಕಾರಣಕ್ಕಾಗಿ ಅಲ್ಲ. ಬದಲಾಗಿ, ಅವರ ಅರ್ಹತೆಗಳ ಕಾರಣದಿಂದಾಗಿ, ಅವರ ಆಯ್ಕೆಯನ್ನು ಪರಿಗಣಿಸಬಹುದು. ಆದರೆ ಇದು ಅಂತಿಮಗೊಂಡಿಲ್ಲ. ಅರ್ಹ ವ್ಯಕ್ತಿಗಾಗಿ ಇನ್ನೂ ಹುಡುಕಾಟ ನಡೆಯುತ್ತಿದೆ’ ಎಂದಿದ್ದಾರೆ.