-ಚಿಂತಾಜನಕ ಸ್ಥಿತಿಯಲ್ಲಿ ನೂತನ ನಾಯಕ

- ಯಾವುದೇ ನಿರ್ಧಾರ ಕೈಗೊಳ್ಳುವ ಸ್ಥಿತಿಯಲ್ಲಿಲ್ಲ

----- ಅತ್ತ ಅಲಿ ಖಮೇನಿಯ ಅಂತ್ಯಕ್ರಿಯೆಗೂ ಸಿದ್ಧತೆಟೆಹ್ರಾನ್: ಅಮೆರಿಕ, ಇಸ್ರೇಲ್‌ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿರುವ ಅವರಿಗೆ ಕೋಂ ನಗರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಯಾವುದೇ ಆಡಳಿತಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಅಮೆರಿಕ ಹಾಗೂ ಇಸ್ರೇಲ್‌ ಗುಪ್ತಚರ ಮೂಲಗಳು ತಿಳಿಸಿವೆ.

ಫೆ.28ರಂದು ನಡೆದ ದಾಳಿಯಲ್ಲಿ ಮೊಜ್ತಬಾರ ತಂದೆ ಖಮೇನಿ ಸೇರಿದಂತೆ ಹಲವು ಉನ್ನತ ನಾಯಕರು ಸಾವನ್ನಪ್ಪಿದ್ದರು. ಅದೇ ದಾಳಿಯಲ್ಲೇ ಮೊಜ್ತಬಾರೂ ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅವರು ಸರ್ವೋಚ್ಚ ನಾಯಕನ ಪದವಿ ಅಲಂಕರಿಸಿದ ಬಳಿಕ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೇ ಮೊದಲ ಬಾರಿ, ಅವರು ದಕ್ಷಿಣ ಟೆಹ್ರಾನ್‌ನಿಂದ 140 ಕಿ.ಮೀ. ದೂರದಲ್ಲಿರುವ ಕೋಂ ನಗರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಖಮೇನಿ ಅಂತ್ಯಕ್ರಿಯೆಗೆ ಸಿದ್ಧತೆ:ಫೆ.28ರಂದು ಮೃತಪಟ್ಟಿರುವ ಖಮೇನಿ ಹಾಗೂ ಇತರ ಕುಟುಂಬ ಸದಸ್ಯರ ಅಂತ್ಯಕ್ರಿಯೆಯನ್ನು ಇದುವರೆಗೂ ನೆರವೇರಿಸಲಾಗಿಲ್ಲ. ಇದೀಗ ಪವಿತ್ರ ಕೋಂ ನಗರದತ್ಲಿ ಬೃಹತ್‌ ಸಮಾಧಿ ನಿರ್ಮಿಸಲು ಸಿದ್ಧತೆಗಳು ನಡೆದಿವೆ. ಖಮೇನಿ ಪಕ್ಕದಲ್ಲೇ ಇತರ ಕುಟುಂಬಸ್ಥರನ್ನೂ ಹೂಳಲಾಗುತ್ತದೆ ಎಂದು ಅಮೆರಿಕ-ಇಸ್ರೇಲಿ ಗುಪ್ತಚರ ಏಜೆನ್ಸಿಗಳು ಪತ್ತೆ ಮಾಡಿವೆ.