- ಪೆಟ್ರೋಲ್‌ ಬೆಲೆ 4.09 ಡಾಲರ್‌ಗೆ ಏರಿಕೆ

- ಡೀಸೆಲ್‌ ಬೆಲೆ 5.53 ಡಾಲರ್‌ಗೆ ಹೆಚ್ಚಳ

- ಕಳೆದ ವರ್ಷಕ್ಕೆ ಹೋಲಿಸಿದರೆ 1-2 ಡಾಲರ್‌ ನೆಗೆತ- ಇ-ಕಾಮರ್ಸ್‌, ಅಂಚೆ, ವಿಮಾನಯಾನ ಸೇವೆ ಶುಲ್ಕ ಹೆಚ್ಚಳ

- ಹೋರ್ಮುಜ್‌ ಮುಚ್ಚಿದ್ರೂ ತೊಂದರೆಯಿಲ್ಲ ಎಂದಿದ್ದ ಟ್ರಂಪ್‌


ವಾಷಿಂಗ್ಟನ್‌: ಮಧ್ಯಪ್ರಾಚ್ಯ ಯುದ್ಧದಿಂದಾಗಿ ಭಾರತ ಸೇರಿದಂತೆ ಅನೇಕ ದೇಶಗಳಿಗೆ ತಟ್ಟಿರುವ ಅನಿಲ, ತೈಲ ತತ್ವಾರದ ಬಿಸಿಯು ಈಗ ಅಮೆರಿಕವನ್ನೂ ಪ್ರವೇಶಿಸಿದ್ದು, ಬೆಲೆಯೇರಿಕೆಯ ರೂಪದಲ್ಲಿ ಪ್ರತಿಫಲಿಸತೊಡಗಿದೆ. ಹೋರ್ಮುಜ್‌ ಜಲಸಂಧಿಯನ್ನು ಇರಾನ್‌ ಮುಚ್ಚಿದರೂ ಅದರಿಂದ ನಮ್ಮಲ್ಲಿ ಇಂಧನ ಸಮಸ್ಯೆಯಾಗದು ಎಂದು ಅಧ್ಯಕ್ಷ ಟ್ರಂಪ್‌ ರಾಜಾರೋಷವಾಗಿ ಹೇಳಿಕೊಂಡಿದ್ದರೂ ದೇಶದಲ್ಲಾಗಲೇ ಇಂಧನ ಬೆಲೆ ಹೆಚ್ಚಳ ಆಗಿಬಿಟ್ಟಿದೆ.

ಕದನಾರಂಭಕ್ಕೂ ಮೊದಲಿದ್ದ ಪೆಟ್ರೋಲ್‌ ಬೆಲೆಯಲ್ಲಿ 1 ಡಾಲರ್‌ ಏರಿಕೆಯಾಗಿ ಈಗ ಪ್ರತಿ ಗ್ಯಾಲನ್‌ಗೆ 4.09 ಡಾಲರ್‌ (379 ರು.) ಆಗಿದೆ. ಇದು 2022ರ ಆಗಸ್ಟ್‌ನಂದಾದ ಬಹುದೊಡ್ಡ ಹೆಚ್ಚಳ. ಅಂತೆಯೇ, ಪ್ರತಿ ಗ್ಯಾಲನ್‌ ಡೀಸೆಲ್‌ ಬೆಲೆಯೀಗ 5.53 ಡಾಲರ್‌(512.85 ರು.) ಆಗಿದೆ. ಕಳೆದ ವರ್ಷ ಇದು 3.65 ಡಾಲರ್‌ (338.50 ರು.) ಇತ್ತು.ಬೆಲೆ ಏರಿಕೆ ಶುರು:

ಇಂಧನ ದರ ಏರಿಕೆಗಳಿಂದಾಗಿ ಉದ್ದಿಮೆಗಳ ಖರ್ಚು ಕೂಡ ಹೆಚ್ಚಿದ್ದು, ಅದರ ಹೊರೆಯನ್ನು ಗ್ರಾಹಕರ ಮೇಲೆ ಹೊರಿಸಲು ಅವುಗಳು ಮುಂದಾಗಿದೆ. ಇದರ ಭಾಗವಾಗಿ ಇ-ಕಾಮರ್ಸ್‌ ಕಂಪನಿಯಾಗಿರುವ ಅಮೆಜಾನ್‌ ಏ.17ರಿಂದ ಶೇ.3.5ರಷ್ಟು ಹೆಚ್ಚುವರಿ ಇಂಧನ ಶುಲ್ಕವನ್ನು ಹೇರಲು ನಿರ್ಧರಿಸಿದೆ. ಅಮೆರಿಕ ಅಂಚೆ ಇಲಾಖೆ ಕೂಡ ಎಕ್ಸ್‌ಪ್ರೆಸ್‌ ಮೇಲ್‌ಗಳ ದರವನ್ನು ಶೇ.8ರಷ್ಟು ಏರಿಸಿದೆ. ಇದು ಏ.26ರಂದು ಜಾರಿಗೆ ಬಂದು 2027ರ ಜ.17ರ ವರೆಗೆ ಜಾರಿಯಲ್ಲಿರಲಿದೆ.

ಅತ್ತ ವಿಮಾನ ಇಂಧನವೂ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಕೆಲ ವಿಮಾನಯಾನ ಸಂಸ್ಥೆಗಳು ಕೂಡ ಲಗೇಜ್‌ ಮೇಲೆ ವಿಧಿಸುವ ಶುಲ್ಕದಲ್ಲಿ ಏರಿಕೆ ಮಾಡುವ ಸುಳಿವು ನೀಡಿವೆ.