ಟಿಪ್ಪು ಜಯಂತಿ ಆಚರಣೆಗೆ ನಿಷೇಧವೇನಾದರೂ ಇದೆಯೇ : ಪ್ರಶ್ನಿಸಿದ ಬಾಂಬೆ ಹೈಕೋರ್ಟ್‌

| Published : Dec 13 2024, 12:48 AM IST / Updated: Dec 13 2024, 04:26 AM IST

ಸಾರಾಂಶ

ಟಿಪ್ಪು ಜಯಂತಿ ಆಚರಣೆಗೆ ನಿಷೇಧವೇನಾದರೂ ಇದೆಯೇ ಎಂದು ಬಾಂಬೆ ಹೈಕೋರ್ಟ್‌ ಮಹಾರಾಷ್ಟ್ರ ಸರ್ಕಾರವನ್ನು ಪ್ರಶ್ನಿಸಿದ ಪ್ರಸಂಗ ಗುರುವಾರ ನಡೆದಿದೆ.

ಮುಂಬೈ: ಟಿಪ್ಪು ಜಯಂತಿ ಆಚರಣೆಗೆ ನಿಷೇಧವೇನಾದರೂ ಇದೆಯೇ ಎಂದು ಬಾಂಬೆ ಹೈಕೋರ್ಟ್‌ ಮಹಾರಾಷ್ಟ್ರ ಸರ್ಕಾರವನ್ನು ಪ್ರಶ್ನಿಸಿದ ಪ್ರಸಂಗ ಗುರುವಾರ ನಡೆದಿದೆ. ಜತೆಗೆ, ಕಾನೂನು ಸುವ್ಯವಸ್ಥೆ ಕಾರಣ ಮುಂದಿಟ್ಟುಕೊಂಡು ರ್‍ಯಾಲಿಗೆ ಅನುಮತಿ ನಿರಾಕರಿಸಲಾಗದು. ರ್‍ಯಾಲಿಯಲ್ಲಿ ಪಾಲ್ಗೊಂಡವರೇನಾದರೂ ಪ್ರಚೋದನಾಕಾರಿ, ಅವಹೇಳನಕಾರಿ ಹೇಳಿಕೆ ನೀಡಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಸಲಹೆ ನೀಡಿದೆ. ಪುಣೆಯಲ್ಲಿ ಕಾನೂನು ಸುವ್ಯವಸ್ಥೆ ಕಾರಣ ನೀಡಿ ಜಯಂತಿ ರ್‍ಯಾಲಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಹೀಗಾಗಿ ಕೋರ್ಟು ಈ ಮಾತು ಹೇಳಿದೆ.

ಟಿಪ್ಪುಸುಲ್ತಾನ್‌ ಜಯಂತಿ ಹಿನ್ನೆಲೆಯಲ್ಲಿ ರ್‍ಯಾಲಿಗೆ ಅನುಮತಿ ನೀಡಲು ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಎಐಎಂಐಎಂ ಪಕ್ಷದ ಮುಖಂಡ ಫೈಯಾಜ್‌ ಶೇಖ್‌ ಅರ್ಜಿ ಸಲ್ಲಿಸಿದ್ದರು. ಆಗ ಕಾನೂನು ಸುವ್ಯವಸ್ಥೆ ಕಾರಣವೊಡ್ಡಿ ಪುಣೆ ಪೊಲೀಸರು ರ್‍ಯಾಲಿಗೆ ಅನುಮತಿ ನಿರಾಕರಿಸಿದ್ದರು. ಅಲ್ಲದೆ, ರ್‍ಯಾಲಿ ಬದಲು ಖಾಸಗಿಯಾಗಿ ಕಾರ್ಯಕ್ರಮ ನಡೆಸುವಂತೆಯೂ ಸೂಚಿಸಿದ್ದರು.

ಇದನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಟಿಪ್ಪು ಜಯಂತಿ ಆಚರಣೆಗೇನಾದರೂ ನಿರ್ಬಂಧ ಇದೆಯೇ ಎಂದು ಪ್ರಶ್ನಿಸಿತು. ಆಗ ಸರ್ಕಾರಿ ಪರ ವಕೀಲರು ಅಂಥ ಯಾವುದೇ ನಿರ್ಬಂಧ ಇಲ್ಲ, ಆದರೆ ಕಾನೂನು ಸುವ್ಯವಸ್ಥೆ ಕಾರಣಕ್ಕೆ ರ್‍ಯಾಲಿಗೆ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಆಗ ನ್ಯಾಯಾಲಯವು, ಒಂದು ವೇಳೆ ನಿರ್ದಿಷ್ಟ ಪ್ರದೇಶದಲ್ಲಿ ರ್‍ಯಾಲಿ ನಡೆಸುವುದರಿಂದ ಸಮಸ್ಯೆಯಾದರೆ ಮಾರ್ಗ ಬದಲಿಸುವಂತೆ ಸೂಚಿಸಬಹುದು ಎಂದು ತಿಳಿಸಿತು. ಜತೆಗೆ, ಈ ಕುರಿತ ಅರ್ಜಿಗೆ ಸಂಬಂಧಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವಂತೆ ಪುಣೆ ಗ್ರಾಮಾಂತರ ಪೊಲೀಸರಿಗೆ ಸೂಚಿಸಿತು.

ವಾಯುಭಾರ ಕುಸಿತ: ತಮಿಳುನಾಡಿನ ಹಲವೆಡೆ ಭಾರೀ ಮಳೆ

ಚೆನ್ನೈ: ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಚೆನ್ನೈ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶಾಲಾ- ಕಾಲೇಜುಗಳಿಗೆ ಗುರುವಾರ ರಜೆ ಘೋಷಿಸಲಾಗಿತ್ತು.

ಚೆನ್ನೈ ಮತ್ತು ನೆರೆಯ ತಿರುವಳ್ಳೂರು, ಚೆಂಗಲ್‌ಪೇಟ್‌, ಕಾಂಚೀಪುರಂ, ವಿಲ್ಲುಪುರಂ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಬುಧವಾರ ರಾತ್ರಿಯಿಡೀ ಮಳೆ ಸುರಿದಿದ್ದು, ಈ ಪ್ರದೇಶಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ಕೆಲವು ಜಿಲ್ಲೆಗಳಲ್ಲಿ ಗುರುವಾರ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ಕೇರಳದಲ್ಲಿಯೂ ಮುನ್ನೆಚ್ಚರಿಕೆ:

ಭಾರತೀಯ ಹವಾಮಾನ ಇಲಾಖೆಯು ಕೇರಳದಲ್ಲಿಯೂ ಧಾರಾಕಾರ ಮಳೆಯಾಗಬಹುದು ಎನ್ನುವ ಮುನ್ಸೂಚನೆಯನ್ನು ನೀಡಿದೆ. ರಾಜ್ಯದ ಕೊಲ್ಲಂ. ಎರ್ನಾಕುಲಂ, ಇಡುಕ್ಕಿ, ತ್ರಿಶೂರ್‌ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್‌ ಘೋಷಿಸಲಾಗಿದೆ. ಜೊತೆಗೆ 8 ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್‌ ನೀಡಿದೆ.

ಖಾಸಗಿಯಲ್ಲಿ ಶೇ.75 ಸ್ಥಳೀಯ ಮೀಸಲು: ಜಾರ್ಖಂಡ್ ಹೈಕೋರ್ಟ್‌ ತಡೆ

ರಾಂಚಿ: ಖಾಸಗಿ ಕಂಪನಿಗಳಲ್ಲಿ ಸ್ಥಳೀಯರಿಗೆ ಶೇ.75ರಷ್ಟು ಮೀಸಲಾತಿಯನ್ನು ನೀಡುವ ಜಾರ್ಖಂಡ್‌ ಸರ್ಕಾರದ ಕಾನೂನಿಗೆ ಅಲ್ಲಿನ ಹೈಕೋರ್ಟ್‌ ತಡೆ ನೀಡಿದೆ.

ಕಾನೂಡ್ನ ವಿರುದ್ಧ ಸಣ್ಣ ಉದ್ಯಮಗಳ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ, ರಾಜ್ಯ ಸರ್ಕಾರಕ್ಕೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ವಿಚಾರಣೆಯನ್ನು ಮಾ.20ಕ್ಕೆ ಮುಂದೂಡಿದೆ.ಏನಿದು ಕಾಯ್ದೆ?

ಜಾರ್ಖಂಡ್‌ನ ಹೇಮಂತ್‌ ಸೊರೇನ್‌ ಸರ್ಕಾರ 2021ರಲ್ಲಿ ಖಾಸಗಿ ಕಂಪನಿಗಳಲ್ಲಿ ಸ್ಥಳೀಯರಿಗೆ 40 ಸಾವಿರ ರು.ಗಿಂತ ಹೆಚ್ಚು ವೇತನ ಇರದ ಹುದ್ದೆಗಳಲ್ಲಿ ಶೇ.75ರಷ್ಟು ಉದ್ಯೋಗ ಮೀಸಲಾತಿ ನೀಡಬೇಕು ಕಾನೂನು ತಂದಿದ್ದರು. ಇದಕ್ಕೆ ಅಲ್ಲಿನ ಉದ್ಯಮಗಳ ವಿರೋಧ ವ್ಯಕ್ತಪಡಿಸಿ ಹೈಕೋರ್ಟ್‌ ಅರ್ಜಿ ಸಲ್ಲಿಸಿ, ಈ ರೀತಿಯ ಕಾನೂನು ಸಮಾನತೆಯನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದ್ದವು.

ಶಬರಿಮಲೆಯಲ್ಲಿ ನಟ ದಿಲೀಪ್‌ಗೆ ವಿಐಪಿ ದರ್ಶನ: ಹೈಕೋರ್ಟ್‌ ಗರಂ

ಕೊಚ್ಚಿ: ಮಲಯಾಳ ನಟ ದಿಲೀಪ್‌ಗೆ ಪವಿತ್ರ ಶಬರಿಮಲೆ ದೇಗುಲದಲ್ಲಿ ವಿಐಪಿ ದರ್ಶನಾವಕಾಶ ನೀಡಿರುವ ಘಟನೆಗೆ ಕೇರಳ ಹೈಕೋರ್ಟ್‌ ಗರಂ ಆಗಿದ್ದು, ‘ಇದು ಗಂಭೀರವಾದ ವಿಷಯವಾಗಿದೆ. ಈ ವಿಶೇಷ ಆತಿಥ್ಯದಿಂದಾಗಿ ದೇಗುಲಕ್ಕೆ ಬಂದಿದ್ದ ಭಕ್ತರಿಗೆ ಕೆಲ ಸಮಯ ಅಯ್ಯಪ್ಪನ ದರ್ಶನದಿಂದ ನಿರ್ಬಂಧಿಸಲಾಗಿತ್ತು. ಇದು ಸರಿಯೇ’ ಎಂದಿದೆ.ಅಲ್ಲದೇ ದೇಗುಲದಲ್ಲಿ ಮುಂದೆ ಇಂತಹ ಘಟನೆ ನಡೆಯಬಾರದು. ಸಾಮಾನ್ಯ ಭಕ್ತರ ದರ್ಶನಕ್ಕೆ ಅಡ್ಡಿಪಡಿಸುವ ಇಂತಹ ಘಟನೆ ಮರುಕಳಿಸಬಾರದು ಆಗಬಾರದು ಎಂದು ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ)ಮಂಡಳಿಗೆ ಸೂಚನೆ ನೀಡಿದೆ,

ಡಿ.5ರಂದು ಶಬರಿಮಲೆಯಲ್ಲಿ ದಿಲೀಪ್‌ಗೆ ವಿಶೇಷ ಆತಿಥ್ಯವನ್ನು ಕಲ್ಪಿಸಲಾಗಿತ್ತು. ಘಟನೆಯ ದೃಶ್ಯಾವಳಿಯ ಸಿಸಿಟೀವಿ ವೀಕ್ಷಿಸಿದ ಹೈಕೋರ್ಟ್‌ನ ನ್ಯಾಯಪೀಠ, ‘ ಇದು 2 ನಿಮಿಷದ ಪ್ರಶ್ನೆಯಲ್ಲ. ನಟ ದರ್ಶನ ಪಡೆಯುವ ಕಾರಣಕ್ಕಾಗಿ ಸೋಪಾನಂನ ಮೊದಲ ಎರಡು ಸಾಲುಗಳಲ್ಲಿ ನಿಂತಿದ್ದ ಭಕ್ತರನ್ನು ತಡೆದು ನಿಲ್ಲಿಸಲಾಗಿದೆ. ವಿಐಪಿ ದರ್ಶನವನ್ನು ಪಡೆಯುವ ಅಂತಹ ವ್ಯಕ್ತಿಗಳು ಪಡೆದಿರುವ ಸವಲತ್ತು ಏನು?’ ಎಂದು ಪ್ರಶ್ನಿಸಿದೆ.

ಛತ್ತೀಸ್‌ಗಢ ಎನ್‌ಕೌಂಟರ್‌: 7 ನಕ್ಸಲರ ಹತ್ಯೆ

ನಾರಾಯಣಪುರ (ಛತ್ತೀಸ್‌ಗಢ): ನಕ್ಸಲರ ವಿರುದ್ಧ ಸತತ 7 ಗಂಟೆ ನಡೆದ ಗುಂಡಿನ ಚಕಮಕಿಯಲ್ಲಿ 7 ನಕ್ಸಲರು ಬಲಿಯಾದ ಘಟನೆ ಬುಧವಾರ ನುಸುಕಿನ ಜಾವ 3 ಗಂಟೆಯಲ್ಲಿ ನಡೆದಿದೆ.ಇದರೊಂದಿಗೆ ಈ ವರ್ಷ ರಾಜ್ಯದಲ್ಲಿ ಬಲಿಯಾದ ನಕ್ಸಲರ ಸಂಖ್ಯೆ 215ಕ್ಕೇರಿದೆ.ನಾರಾಯಣಪುರ ಮತ್ತು ದಂತೇವಾಡ ಜಿಲ್ಲೆಗಳ ಗಡಿಯಲ್ಲಿ ನಕ್ಸಲರ ಚಲನವಲನದ ಬಗ್ಗೆ ಖಚಿತ ಮಾಹಿತಿ ಆಧರಿಸಿದ ಪಡೆಗಳು ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿವೆ.

ಛತ್ತೀಸ್‌ಗಢ ಪೊಲೀಸರ ವಿಶೇಷ ಕಾರ್ಯಪಡೆ, ಕೇಂದ್ರ ಮೀಸಲು ಪೊಲೀಸ್‌ ಪಡೆ, ಜಿಲ್ಲಾ ಮೀಸಲು ಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಘಟನಾ ಸ್ಥಳದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯಮಂತ್ರಿ ವಿಷ್ಣುದೇವ್‌ ಸಾಯಿ ಭದ್ರತಾ ಪಡೆಯನ್ನು ಅಭಿನಂದಿಸಿದ್ದಾರೆ.