ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಈಶ ಆಶ್ರಮದ ವಿರುದ್ಧದ ಪೊಲೀಸ್‌ ತನಿಖೆಗೆ ಸುಪ್ರೀಂ ತಡೆ

| Published : Oct 04 2024, 01:01 AM IST / Updated: Oct 04 2024, 04:17 AM IST

ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಈಶ ಆಶ್ರಮದ ವಿರುದ್ಧದ ಪೊಲೀಸ್‌ ತನಿಖೆಗೆ ಸುಪ್ರೀಂ ತಡೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಯಮತ್ತೂರಿನ ಈಶ ಆಶ್ರಮದಲ್ಲಿ ಇಬ್ಬರು ಮಹಿಳೆಯರನ್ನು ಅಕ್ರಮ ಬಂಧನದಲ್ಲಿ ಇರಿಸಲಾಗಿದೆ ಎಂಬ ಆರೋಪದ ತನಿಖೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಮಹಿಳೆಯರು ಆಶ್ರಮದಲ್ಲಿ ಸ್ವಯಂಪ್ರೇರಿತವಾಗಿ ಇದ್ದೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

 ನವದೆಹಲಿ : ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಈಶ ಆಶ್ರಮದಲ್ಲಿ ಇಬ್ಬರು ಮಹಿಳೆಯರನ್ನು ಅಕ್ರಮವಾಗಿ ಬಂಧನದಲ್ಲಿಡಲಾಗಿದೆ ಎಂಬ ಪ್ರಕರಣ ಸಂಬಂಧ ಪೊಲೀಸರು ನಡೆಸುತ್ತಿದ್ದ ತನಿಖೆಗೆ ಸುಪ್ರೀಂಕೋರ್ಟ್‌ ಗುರುವಾರ ತಡೆಯೊಡ್ಡಿದೆ.

ಈ ಕುರಿತು ಇಬ್ಬರು ಮಹಿಳೆಯರ ತಂದೆ ಮದ್ರಾಸ್‌ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ತನ್ನಲ್ಲಿಗೇ ವರ್ಗಾಯಿಸಿಕೊಂಡಿರುವ ನ್ಯಾಯಾಲಯ, ‘ಸೇನೆ ಅಥವಾ ಪೊಲೀಸರನ್ನು ಇಂತಹ ಸಂಸ್ಥೆಗಳಿಗೆ ಕಳುಹಿಸಲಾಗದು’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಇದೇ ವೇಳೆ, ಇಬ್ಬರೂ ಮಹಿಳೆಯರನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಗುಪ್ತವಾಗಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ನೇತೃತ್ವದ ತ್ರಿಸದಸ್ಯ ಪೀಠ, ‘ಆಶ್ರಮದಲ್ಲಿ ಇಬ್ಬರೂ ಸ್ವಯಂಪ್ರೇರಿತವಾಗಿ ಇದ್ದೇವೆ ಹಾಗೂ ಯಾವುದೇ ಬಲವಂತ ತಮ್ಮ ಮೇಲೆ ಇಲ್ಲ’ ಎಂದು ಅವರು ಹೇಳಿದ್ದನ್ನು ಪರಿಗಣಿಸಿತು.

ಇದೇ ವೇಳೆ, ಪ್ರಕರಣದಲ್ಲಿ ಮದ್ರಾಸ್‌ ಹೈಕೋರ್ಟ್ ಸೂಚನೆ ಮೇರೆಗೆ ಪೊಲೀಸರು ಯಾವುದೇ ರೀತಿಯ ಬಲವಂತದ ಕ್ರಮಗಳನ್ನು ಕೈಗೊಳ್ಳುವಂತಿಲ್ಲ. ಸೆ.30ರಂದು ಮದ್ರಾಸ್‌ ಹೈಕೋರ್ಟ್‌ ನೀಡಿರುವ ಸೂಚನೆಯಂತೆ ಪ್ರಕರಣದ ಸ್ಥಿತಿಗತಿ ವರದಿಯನ್ನಷ್ಟೇ ಸಲ್ಲಿಸತಕ್ಕದ್ದು. ಅದೇ ವರದಿಯನ್ನು ಈ ನ್ಯಾಯಾಲಯಕ್ಕೂ ಸಲ್ಲಿಸಬೇಕು ಎಂದು ಹೇಳಿ ವಿಚಾರಣೆಯನ್ನು ಅ.18ಕ್ಕೆ ಮುಂದೂಡಿತು.

‘ಇಬ್ಬರೂ ಮಹಿಳೆಯರು ತಮ್ಮ 24 ಹಾಗೂ 27ನೇ ವಯಸ್ಸಿನಲ್ಲಿ ಆಶ್ರಮಕ್ಕೆ ಸೇರಿರುವುದಾಗಿ ಹೇಳಿದ್ದಾರೆ. ತಾವು ಆಶ್ರಮದಿಂದ ಹೊರಗೂ ಮುಕ್ತವಾಗಿ ಓಡಾಡುತ್ತಿರುವುದಾಗಿ ತಿಳಿಸಿದ್ದಾರೆ. ತಮ್ಮ ಪೋಷಕರು ತಮ್ಮನ್ನು ಭೇಟಿ ಮಾಡಿದ್ದಾರೆ. ಒಬ್ಬ ಮಹಿಳೆಯಂತೂ ತಾನು ಹೈದರಾಬಾದ್‌ನಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದಾಗಿಯೂ ಹೇಳಿಕೊಂಡಿದ್ದಾರೆ’ ಎಂದು ನ್ಯಾಯಪೀಠ ತಿಳಿಸಿತು.

ಇಬ್ಬರೂ ಮಹಿಳೆಯರ ತಾಯಿ ಕೂಡ 8 ವರ್ಷದ ಹಿಂದೆ ಇದೇ ರೀತಿಯ ಅರ್ಜಿಯನ್ನು ಸಲ್ಲಿಸಿದ್ದರು. ಆ ಪ್ರಕರಣದಲ್ಲಿ ತಂದೆ ಕೂಡ ಭಾಗಿಯಾಗಿದ್ದರು ಎಂದು ಕೋರ್ಟ್‌ ತಿಳಿಸಿತು.

ಏನಿದು ಪ್ರಕರಣ?:

ತಮ್ಮ ಇಬ್ಬರು ಪುತ್ರಿಯರನ್ನು ಸದ್ಗುರು ಅವರ ಕೊಯಮತ್ತೂರಿನ ಈಶ ಆಶ್ರಮದಲ್ಲಿ ಬಂಧನದಲ್ಲಿಡಲಾಗಿದೆ. ಮಹಿಳೆಯರ ತಲೆಕೆಡಿಸಿ, ಅವರನ್ನು ಸನ್ಯಾಸಿನಿಗಳನ್ನಾಗಿಸಲಾಗುತ್ತಿದೆ. ಪೋಷಕರನ್ನು ಭೇಟಿ ಮಾಡಲೂ ಬಿಡುತ್ತಿಲ್ಲ ಎಂದು ಕೊಯಮತ್ತೂರಿನ ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರೊಬ್ಬರು ಮದ್ರಾಸ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಮದ್ರಾಸ್‌ ಹೈಕೋರ್ಟ್‌ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ 150 ಪೊಲೀಸರು ಆಶ್ರಮವನ್ನು ಪ್ರವೇಶಿಸಿ ಆಶ್ರಮವಾಸಿಗಳ ವಿಚಾರಣೆ ನಡೆಸಿದ್ದರು. ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಬೇಕು ಎಂದು ಈಶ ಆಶ್ರಮ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು.