ಸಾರಾಂಶ
ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ದೆಹಲಿ ಪೊಲೀಸ್ ವಿಶೇಷ ಘಟಕದ ಅಧಿಕಾರಿಗಳು ಪುಣೆ ಐಸಿಸ್ ಮಾಡ್ಯೂಲ್ ಜತೆ ನಂಟು ಹೊಂದಿದ್ದ ಶಂಕಿತ ಉಗ್ರನೊಬ್ಬನನ್ನು ರಾಷ್ಟ್ರ ರಾಜಧಾನಿಯಲ್ಲಿ ಬಂಧಿಸಿದ್ದಾರೆ.ರಿಜ್ವಾನ್ ಅಲಿ ಬಂಧಿತ. ಪುಣೆ ಮಾಡ್ಯೂಲ್‌ಗೆ ಸಂಬಂಧಿಸಿದಂತೆ ಈತನಿಗಾಗಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತೀವ್ರ ಶೋಧ ಕಾರ್ಯಾಚರಣೆ ನಡೆಸಿತ್ತು. ಅಲ್ಲದ 3 ಲಕ್ಷ ರು. ಬಹುಮಾನವನ್ನೂ ಘೋಷಣೆ ಮಾಡಿತ್ತು.
ದೆಹಲಿ ಹಾಗೂ ಮುಂಬೈನ ಪ್ರಮುಖ ಸ್ಥಳಗಳಿಗೆ ತೆರಳಿ ರಿಜ್ವಾನ್ ಅಲಿ ಪರಿಶೀಲನೆ ನಡೆಸಿದ್ದ. ಆತನಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆತನನ್ನು ಎನ್‌ಐಎ ವಶಕ್ಕೆ ಕೋರುವ ಸಾಧ್ಯತೆ ಇದೆ.ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದ 2ನೇ ವರ್ಷದ ಕೋರ್ಸ್ ಅನ್ನು ಅರ್ಧಕ್ಕೇ ತ್ಯಜಿಸಿದ್ದ ರಿಜ್ವಾನ್, ದೆಹಲಿ ಪೊಲೀಸರು ನಡೆಸುವ ಮೂಲಭೂತವಾದ ನಿರ್ಮೂಲನಾ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದ. ಆದಾಗ್ಯೂ ರಿಜ್ವಾನ್, ಆತನ ಬಂಟರಾದ ಶಾನವಾಜ್ ಆಲಂ, ತಾಲ್ಹಾ ಲಿಯಾಖತ್ ಖಾನ್ ಹಾಗೂ ಅಬ್ದುಲ್ಲಾ ಫಯಾಜ್ ಶೇಖ್ ಅಲಿಯಾಸ್ ಡೈಪರ್‌ವಾಲಾ ಸೇರಿಕೊಂಡು ಐಇಡಿ ರೂಪಿಸಿ ಪುಣೆಯ ಕೋಂಧ್ವಾದಲ್ಲಿ ನಿಯಂತ್ರಿತ ಸ್ಫೋಟವನ್ನು ನಡೆಸಿದ್ದರು.