ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜೀವನ ಮತ್ತು ಆದರ್ಶಗಳನ್ನು ಸಾರಿ ಹೇಳುವ ‘ರಾಷ್ಟ್ರೀಯ ಪ್ರೇರಣಾ ಸ್ಥಳ’ವನ್ನು, ಅವರ 101ನೇ ಜನ್ಮದಿನದಂದು ಲಖನೌದಲ್ಲಿ ಗುರುವಾರ ಲೋಕಾರ್ಪಣೆ ಮಾಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಈ ಸ್ಮಾರಕವನ್ನು ಉದ್ಘಾಟಿಸಿದರು.

ಅಟಲ್‌ ಜನ್ಮದಿನದಂದು ರಾಷ್ಟ್ರೀಯ ಪ್ರೇರಣಾ ಸ್ಥಳ ಲೋಕಾರ್ಪಣೆ

ಸ್ವಾತಂತ್ರ್ಯದ ಬಳಿಕ ಎಲ್ಲಾ ಸಾಧನೆ ಗರಿ ಗಾಂಧಿ ಕುಟುಂಬಕ್ಕೆ: ಟೀಕೆ

ಲಖನೌ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜೀವನ ಮತ್ತು ಆದರ್ಶಗಳನ್ನು ಸಾರಿ ಹೇಳುವ ‘ರಾಷ್ಟ್ರೀಯ ಪ್ರೇರಣಾ ಸ್ಥಳ’ವನ್ನು, ಅವರ 101ನೇ ಜನ್ಮದಿನದಂದು ಲಖನೌದಲ್ಲಿ ಗುರುವಾರ ಲೋಕಾರ್ಪಣೆ ಮಾಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಈ ಸ್ಮಾರಕವನ್ನು ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಮೋದಿ, ‘ಆರ್ಟಿಕಲ್‌ 370ರ ಗೋಡೆಯನ್ನು ಕೆಡವಲು ಬಿಜೆಪಿ ಸರ್ಕಾರಕ್ಕೆ ಅವಕಾಶ ಸಿಕ್ಕಿದ್ದು ಹೆಮ್ಮೆಯ ವಿಚಾರ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಆರಂಭಿಸಿದ ಉತ್ತಮ ಆಡಳಿತದ ಪರಿಕಲ್ಪನೆ ಇದೀಗ ಕೇಂದ್ರ ಮತ್ತು ರಾಜ್ಯಗಳು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿವೆ’ ಎಂದು ಹೇಳಿದರು.

ಜತೆಗೆ, ‘ಬಿಜೆಪಿ ಸರ್ಕಾರವು ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರ ಅಂತ್ಯೋದಯ ಚಿಂತನೆಯನ್ನು ಮುಂದಿಟ್ಟುಕೊಂಡು ಸರ್ಕಾರಿ ಯೋಜನೆಗಳು ತಾರತಮ್ಯವಿಲ್ಲದೆ ಎಲ್ಲಾ ಬಡವರಿಗೆ ತಲುಪುವಂತೆ ನೋಡಿಕೊಂಡಿದೆ. 2014ಕ್ಕೂ ಮೊದಲು ಸುಮಾರು 25 ಕೋಟಿ ಜನ ಸಾಮಾಜಿಕ ಭದ್ರತೆ ಯೋಜನೆ ವ್ಯಾಪ್ತಿಯಡಿ ಇದ್ದರು. ಆದರೆ ಇದೀಗ ಈ ಸಂಖ್ಯೆ 95 ಕೋಟಿಗೆ ಏರಿಕೆಯಾಗಿದೆ’ ಎಂದು ತಮ್ಮ ಸರ್ಕಾರದ ಸಾಧನೆಯನ್ನು ಬಣ್ಣಿಸಿದರು.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ರಾಜ್ಯಪಾಲರಾದ ಆನಂದಿಬೆನ್‌ ಪಟೇಲ್‌, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಇತರೆ ಹಿರಿಯ ನಾಯಕರು ಈ ವೇಳೆ ಉಪಸ್ಥಿತರಿದ್ದರು.

ಕೈ ವಿರುದ್ಧ ಕಿಡಿ:

ಇದೇ ಕಾರ್ಯಕ್ರಮದಲ್ಲಿ ಮೋದಿ, ಕಾಂಗ್ರೆಸ್‌ನ ಕುಟುಂಬ ರಾಜಕಾರಣವನ್ನೂ ಟೀಕಿಸಿದ್ದಾರೆ. ‘ಸ್ವಾತಂತ್ರ್ಯಾನಂತರ ಪ್ರತಿಯೊಂದು ಸಾಧನೆಯ ಯಶವನ್ನು ಒಂದೇ(ಗಾಂಧಿ) ಕುಟುಂಬಕ್ಕೆ ಅರ್ಪಿಸುವ ಮನೋಭಾವ ಬೆಳೆದುಬಂದಿತ್ತು. ಅಭದ್ರತೆಯ ಕಾರಣ ಹೀಗೆ ಮಾಡಲಾಗುತ್ತಿತ್ತು. ರಾಜಕೀಯ ಅಸ್ಪೃಶ್ಯತೆಯೂ ಬೆಳೆದುಬಂದಿತ್ತು. ಬಿಜೆಪಿಯನ್ನೂ ಹೀಗೇ ನಡೆಸಿಕೊಳ್ಳಲಾಗಿತ್ತು’ ಎಂದು ವಾಗ್ದಾಳಿ ನಡೆಸಿದ್ದಾರೆ.

==

ಸ್ಮಾರಕದ ವಿಶೇಷ ಏನು?:

ರಾಷ್ಟ್ರೀಯ ಪ್ರೇರಣಾ ಸ್ಥಳವು ಆರೆಸ್ಸೆಸ್‌ ಮುಖಂಡ ಶ್ಯಾಮ ಪ್ರಸಾದ್‌ ಮುಖರ್ಜಿ, ಪಂಡಿತ್‌ ದೀನ್‌ದಯಾಳ್‌ ಉಪಾಧ್ಯಾಯ ಮತ್ತು ವಾಜಪೇಯಿ ಅವರ 65 ಅಡಿ ಎತ್ತರದ ಕಂಚಿನ ಪುತ್ಥಳಿಗಳನ್ನೊಳಗೊಂಡಿದೆ. ಸ್ಮಾರಕ ಕಟ್ಟಡದಲ್ಲಿ 98 ಸಾವಿರ ಚದರಡಿಯ ಕಮಲದ ಹೂವಿನ ವಿನ್ಯಾಸದ ಅತ್ಯಾಧುನಿಕ ಮ್ಯೂಸಿಯಂ ಕೂಡ ಇದ್ದು, ಇಲ್ಲಿಗೆ ಭೇಟಿ ನೀಡುವವರಿಗೆ ಈ ಮೂವರು ನಾಯಕರು ದೇಶ ಕಟ್ಟಲು ನೀಡಿದ ಕೊಡುಗೆಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಈ ಪ್ರೇರಣಾ ಸ್ಥಳವನ್ನು 230 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.