ಸಾರಾಂಶ
‘ನೀಟ್’ ಹಾಗೂ ‘ನೆಟ್’ ಪರೀಕ್ಷಾ ಅಕ್ರಮಗಳು ತಾರಕಕ್ಕೇರುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ‘ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಮತ್ತು ಅವರ ಭವಿಷ್ಯದ ಬಗ್ಗೆ ಯಾವುದೇ ರಾಜಿ ಇಲ್ಲ ಎಂದು ಹೇಳಿದ್ದಾರೆ.
ನವದೆಹಲಿ: ‘ನೀಟ್’ ಹಾಗೂ ‘ನೆಟ್’ ಪರೀಕ್ಷಾ ಅಕ್ರಮಗಳು ತಾರಕಕ್ಕೇರುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ‘ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಮತ್ತು ಅವರ ಭವಿಷ್ಯದ ಬಗ್ಗೆ ಯಾವುದೇ ರಾಜಿ ಇಲ್ಲ. ಪ್ರವೇಶ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳ ಆರೋಪದ ಬಗ್ಗೆ ವಿಶೇಷ ಉನ್ನತ ಮಟ್ಟದ ಸಮಿತಿಯಿಂದ ತನಿಖೆ ನಡೆಸಲಾಗುವುದು ಮತ್ತು ಯಾವುದೇ ಅಪರಾಧಿಗಳನ್ನು ಬಿಡುವುದಿಲ್ಲ’ ಎಂದು ಹೇಳಿದ್ದಾರೆ.
ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರೀಕ್ಷಾ ಅಕ್ರಮದ ತನಿಖೆಯ ಜತೆಗೆ, ಪರೀಕ್ಷೆ ನಡೆಸುವ ಹೊಣೆ ಹೊತ್ತಿರುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ದತ್ತಾಂಶ ಕಾರ್ಯನಿರ್ವಹಣೆ ಪರಿಶೀಲಿಸಲು ಸರ್ಕಾರವು ವಿಶೇಷ ಸಮಿತಿಯನ್ನು ರಚಿಸಲಿದೆ. ಅದರ ರಚನೆ, ಕಾರ್ಯನಿರ್ವಹಣೆ, ಪರೀಕ್ಷಾ ಪ್ರಕ್ರಿಯೆ, ಪಾರದರ್ಶಕತೆ ಸುಧಾರಿಸಲು ಉನ್ನತ ಮಟ್ಟದ ಸಮಿತಿಯಿಂದ ಶಿಫಾರಸುಗಳನ್ನು ಬಯಸಲಿದೆ’ ಎಂದು ನುಡಿದರು.ಇದೇ ವೇಳೆ, ನೆಟ್ ಪ್ರಶ್ನೆಪತ್ರಿಕೆ ಡಾರ್ಕ್‌ನೆಟ್‌ನಲ್ಲಿ ಸೋರಿಕೆ ಆಗಿ ಟೆಲಿಗ್ರಾಂ ಆ್ಯಪ್‌ನಲ್ಲಿ ಹರಿದಾಡಿತ್ತು. ಹೀಗಾಗಿ ಪರೀಕ್ಷೆ ರದ್ದು ಮಾಡಲಾಯಿತು ಎಂದು ಸ್ಪಷ್ಟಪಡಿಸಿದರು.
ರಾಜಕೀಯ ಬೇಡ:ಇದೇ ವೇಳೆ ನೀಟ್ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಪ್ರತಿಪಕ್ಷಗಳಿಗೆ ಮನವಿ ಮಾಡಿದ ಅವರು, ‘ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಅಕ್ರಮದ ಆರೋಪ ಕೇಳಿಬಂದಿದೆ. ಹೀಗಾಗಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಪಾಸಾಗಿರುವವರಿಗೆ ಇದರಿಂದ ಅನ್ಯಾಯ ಆಗಬಾರದು. ಬಿಹಾರದಲ್ಲಿ ಅಕ್ರಮ ಆರೋಪ ಕೇಳಿಬಂದಿದ್ದು, ಅಲ್ಲಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವರಿಂದ ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಬಿಹಾರ ಪೊಲೀಸರಿಂದ ಅಕ್ರಮದ ಬಗ್ಗೆ ಮತ್ತಷ್ಟು ಮಾಹಿತಿ ಸಿಕ್ಕ ಬಳಿಕ ನಾವು ಇನ್ನಷ್ಟು ಕ್ರಮ ಜರುಗಿಸಲಿದ್ದೇವೆ. ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ’ ಎಂದರು.
‘ಯಾವುದೇ ಅಕ್ರಮವನ್ನು ಸರ್ಕಾರ ಸಹಿಸುವುದಿಲ್ಲ. ಸರ್ಕಾರ ಮತ್ತು ವ್ಯವಸ್ಥೆಯ ಮೇಲೆ ಜನರು ನಂಬಿಕೆ ಇಡಬೇಕು. ಸರ್ಕಾರವು ಜವಾಬ್ದಾರಿ ತೆಗೆದುಕೊಂಡು ಆದ ತಪ್ಪುಗಳನ್ನು ಸರಿಪಡಿಸುವ ಜವಾಬ್ದಾರಿ ವಹಿಸಿಕೊಳ್ಳುತ್ತಿದೆ. ವದಂತಿಗಳನ್ನು ಯಾರೂ ಹರಡಿಸಬಾರದು’ ಎಂದು ಮನವಿ ಮಾಡಿದರು.
;Resize=(128,128))
;Resize=(128,128))
;Resize=(128,128))
;Resize=(128,128))