ಸಾರಾಂಶ
ಪಟನಾ : ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ಸಮುದಾಯದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿನ ಮೀಸಲು ಮಿತಿಯನ್ನು ಶೇ.50ರಿಂದ ಶೇ.65ಕ್ಕೆ ಹೆಚ್ಚಳ ಮಾಡಿ ಬಿಹಾರದ ನಿತೀಶ್ ಕುಮಾರ್ ಸರ್ಕಾರ 2023ರಲ್ಲಿ ಹೊರಡಿಸಿದ್ದ ಆದೇಶವನ್ನು ಬಿಹಾರ ಹೈಕೋರ್ಟ್ ಗುರುವಾರ ವಜಾ ಮಾಡಿದೆ. ‘ಮೀಸಲು ಮಿತಿ ಶೇ.50ರ ಗಡಿ ದಾಟುವಂತಿಲ್ಲ’ ಎಂದು ಇಂದ್ರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ಉಲ್ಲೇಖಿಸಿ ಅರ್ಜಿದಾರರು ಮಾಡಿದ್ದ ವಾದವನ್ನು ಎತ್ತಿಹಿಡಿದ ಹೈಕೋರ್ಟ್ ಈ ಮಹತ್ವದ ಆದೇಶ ಹೊರಡಿಸಿದೆ.
ಹೈಕೋರ್ಟ್‌ನ ಈ ಆದೇಶದಿಂದಾಗಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸರ್ಕಾರಕ್ಕೆ ಹಿನ್ನಡೆಯಾಗಿದೆ. ಜೊತೆಗೆ ಜಾತಿಗಣತಿ ನಡೆಸಿ ಅದರ ಆಧಾರದಲ್ಲಿ ಮೀಸಲು ಮಿತಿಯನ್ನು ಹೆಚ್ಚಿಸುವಂತೆ ವಿವಿಧ ರಾಜ್ಯಗಳಲ್ಲಿ ವ್ಯಕ್ತವಾಗುತ್ತಿರುವ ಬೇಡಿಕೆಗಳ ಮೇಲೂ ಈ ತೀರ್ಪು ಪರಿಣಾಮ ಬೀರುವ ಸಾಧ್ಯತೆ ಇದೆ.
ಆದರೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹೋಗುವುದಾಗಿ ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಹೇಳಿದ್ದಾರೆ.ವಿವಾದ ಏನು?:
ಕಳೆದ ವರ್ಷ ಬಿಹಾರದಲ್ಲಿ ಅಸ್ತಿತ್ವದಲ್ಲಿದ್ದ ಜೆಡಿಯು, ಆರ್‌ಜೆಡಿ ಮತ್ತು ಕಾಂಗ್ರೆಸ್ ನೇತೃತ್ವದ ಸರ್ಕಾರ ನಡೆಸಿದ್ದ ಜಾತಿಗಣತಿಯಲ್ಲಿ, ‘ಪರಿಶಿಷ್ಟ ಜಾತಿ, ಪಂಗಡವು ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.21ರಷ್ಟು ಪಾಲು ಹೊಂದಿದೆ, ಒಬಿಸಿ ಮತ್ತು ಅತ್ಯಂತ ಹಿಂದುಳಿದವರ ಜಾತಿ (ಇಬಿಸಿ) ಪ್ರಮಾಣವು ಶೇ.63ರಷ್ಟಿದೆ’ ಎಂದು ಕಂಡುಬಂದಿತ್ತು.
ಈ ಹಿನ್ನೆಲೆಯಲ್ಲಿ ಅವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ಪ್ರಮಾಣವನ್ನು ಶೇ.50ರಿಂದ ಶೇ.65ಕ್ಕೆ ಹೆಚ್ಚಿಸುವ ನಿರ್ಧಾರ ಕೈಗೊಂಡಿತ್ತು.ಅದರನ್ವಯ ಹೊರಡಿಸಿದ್ದ ಗೆಜೆಟ್ ನೋಟಿಫಿಕೇಷನ್ ಅನ್ವಯ ಎಸ್‌ಸಿ ಮೀಸಲನ್ನು ಶೇ.16ರಿಂದ ಶೇ.20ಕ್ಕೆ, ಎಸ್ಟಿ ಮೀಸಲನ್ನು ಶೇ.1ರಿಂದ ಶೇ.2ಕ್ಕೆ, ಇಬಿಸಿ ಮೀಸಲನ್ನು ಶೇ.18ರಿಂದ ಶೇ.25ಕ್ಕೆ ಮತ್ತು ಒಬಿಸಿ ಕೋಟಾವನ್ನು ಶೇ.15ರಿಂದ ಶೇ.18ಕ್ಕೆ ಹೆಚ್ಚಿಸಿಲಾಗಿತ್ತು. ಈ ಮೂಲಕ ಹಿಂದುಳಿದ ಸಮುದಾಯದ ಮೀಸಲು ಪ್ರಮಾಣ ಶೇ.50ರಿಂದ ಶೇ.65ಕ್ಕೆ ಹೆಚ್ಚಳ ಮಾಡಿತ್ತು.
ಮತ್ತೊಂದೆಡೆ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ (ಇಡಬ್ಲ್ಯುಎಸ್)ಕ್ಕೆ ನೀಡುವ ಶೇ.10ರಷ್ಟು ಮೀಸಲೂ ಸೇರಿ ರಾಜ್ಯದ ಒಟ್ಟು ಮೀಸಲು ಪ್ರಮಾಣ ಶೇ.75ಕ್ಕೆ ತಲುಪಿತ್ತು.ಈ ಮೀಸಲು ವಿಷಯ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆ ವೇಳೆಯೂ ವಿಪಕ್ಷಗಳಿಗೆ ದೊಡ್ಡ ಅಸ್ತ್ರವಾಗಿ ಬಳಕೆಯಾಗಿತ್ತು. ಇಂಡಿಯಾ ಮೈತ್ರಿ ಕೂಟ ತಾನು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ದೇಶವ್ಯಾಪಿ ಜಾತಿಗಣತಿ ನಡೆಸುವ, ಅದರ ವರದಿಯಲ್ಲಿ ಆಧಾರದಲ್ಲಿ ಎಸ್‌ಸಿ, ಎಸ್ಟಿ, ಒಬಿಸಿಗಳಿಗೆ ಹೆಚ್ಚಿನ ಮೀಸಲು ನೀಡುವ, ಮೀಸಲಿಗೆ ಹಾಕಿರುವ ಶೇ.50ರ ಮಿತಿ ತೆಗೆದು ಹಾಕುವ ಭರವಸೆ ನೀಡಿತ್ತು.
ಮೇಲ್ಮನವಿ:
ಈ ನಡುವೆ ಕಳೆದ ವರ್ಷ ಬಿಹಾರ ಸರ್ಕಾರ ಮೀಸಲು ಏರಿಕೆ ಮಾಡಿ ಆದೇಶ ಹೊರಡಿಸಿದ ಬೆನ್ನಲ್ಲೇ, ಬಿಹಾರ ಸರ್ಕಾರದ ನಿರ್ಧಾರವು ಸಂವಿಧಾನದ 14 (ಕಾನೂನಿನ ಮುಂದೆ ಸಮಾನತೆ), 16 (ಉದ್ಯೋಗದಲ್ಲಿ ಎಲ್ಲಾ ನಾಗರಿಕರಿಗೂ ಸಮಾನ ಅವಕಾಶದ ಹಕ್ಕು) ಮತ್ತು 20 (ಅಪರಾಧ ಪ್ರಕರಣಗಳಲ್ಲಿ ಕೆಲವೊಂದು ಹಕ್ಕುಗಳ ರಕ್ಷಣೆ) ವಿಧಿಗಳ ಉಲ್ಲಂಘನೆಯಾಗಿದೆ ಎಂದು ಹಲವು ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಅಲ್ಲದೆ ಇಂದ್ರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಯಾವುದೇ ಕಾರಣಕ್ಕೂ ಒಟ್ಟಾರೆ ಮೀಸಲು ಪ್ರಮಾಣ ಶೇ.50ರ ಮಿತಿ ದಾಟಬಾರದು ಎಂದು ಸ್ಪಷ್ಟಪಡಿಸಿದೆ ಎಂಬ ಅಂಶವನ್ನು ಗಮನಕ್ಕೆ ತಂದಿದ್ದರು. ಅಲ್ಲದೆ ಇತ್ತೀಚಿನ ಮಹಾರಾಷ್ಟ್ರದ ಮರಾಠ ಮೀಸಲು ಪ್ರಕರಣದಲ್ಲಿ ಕೂಡಾ ಯಾವುದೇ ರಾಜ್ಯ ಸರ್ಕಾರ ಶೇ.50ರ ಮಿತಿ ದಾಟುವಂಥ ಮೀಸಲು ಜಾರಿ ಮಾಡಬಾರದು ಎಂದು ಸುಪ್ರೀಂಕೋರ್ಟ್ ಹೇಳಿದ್ದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು.ಆ ಎಲ್ಲಾ ಅಂಶಗಳನ್ನು ಪರಿಗಣಿಸಿದ ನ್ಯಾಯಾಲಯ ಬಿಹಾರ ಸರ್ಕಾರ ಮೀಸಲು ಹೆಚ್ಚಳ ಆದೇಶವನ್ನು ವಜಾ ಮಾಡಿ ತೀರ್ಪು ನೀಡಿದೆ.