500 ಹಮಾಸ್‌ ನೆಲೆ ಧ್ವಂಸ: ಇಸ್ರೇಲ್‌ ಉಗ್ರ ಬೇಟೆ

| Published : Oct 10 2023, 01:00 AM IST

ಸಾರಾಂಶ

ತನ್ನ ದೇಶದ ಮೇಲೆ ಕಂಡುಕೇಳರಿಯದ, ಅಚ್ಚರಿಯ ದಾಳಿ ನಡೆಸಿದ ಹಮಾಸ್‌ ಉಗ್ರರ ಮೇಲೆ ಮುಗಿಬಿದ್ದಿರುವ ಇಸ್ರೇಲಿ ಪಡೆಗಳು, ಸಮರದ 3ನೇ ದಿನವಾದ ಸೋಮವಾರ ದೇಶದ ದಕ್ಷಿಣ ಭಾಗಗಳಲ್ಲಿ ಅಡಗಿರುವ ಉಗ್ರರ ಪತ್ತೆಗೆ ಭಾರೀ ಕಾರ್ಯಾಚರಣೆ ಆರಂಭಿಸಿವೆ.
ಜೆರುಸಲೇಂ: ತನ್ನ ದೇಶದ ಮೇಲೆ ಕಂಡುಕೇಳರಿಯದ, ಅಚ್ಚರಿಯ ದಾಳಿ ನಡೆಸಿದ ಹಮಾಸ್‌ ಉಗ್ರರ ಮೇಲೆ ಮುಗಿಬಿದ್ದಿರುವ ಇಸ್ರೇಲಿ ಪಡೆಗಳು, ಸಮರದ 3ನೇ ದಿನವಾದ ಸೋಮವಾರ ದೇಶದ ದಕ್ಷಿಣ ಭಾಗಗಳಲ್ಲಿ ಅಡಗಿರುವ ಉಗ್ರರ ಪತ್ತೆಗೆ ಭಾರೀ ಕಾರ್ಯಾಚರಣೆ ಆರಂಭಿಸಿವೆ. ಇದರ ಭಾಗವಾಗಿ ಹಮಾಸ್‌ ವಶಪಡಿಸಿಕೊಂಡಿದ್ದ ಇಸ್ರೇಲ್‌ನ ಕೆಲವು ಭಾಗಗಳನ್ನುಇಸ್ರೇಲ್‌ ಮರುವಶ ಮಾಡಿಕೊಂಡಿದೆ. ಮತ್ತೊಂದೆಡೆ ಹಮಾಸ್‌ ಉಗ್ರರ ನೆಲೆಯಾದ ಗಾಜಾಪಟ್ಟಿ ಪ್ರದೇಶದ ಮೇಲೆ ಭಾರೀ ಪ್ರಮಾಣದ ವೈಮಾನಿಕ ದಾಳಿ ಮೂಲಕ ಅವರ ಹುಟ್ಟಡಗಿಸುವ ಪ್ರಯತ್ನ ಮುಂದುವರೆಸಿದೆ. 500 ಹಮಾಸ್‌ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ. ‘ನಮ್ಮ ಈ ದಾಳಿ ಮಧ್ಯಪ್ರಾಚ್ಯದ ಚಹರೆಯನ್ನೇ ಬದಲಿಸಲಿದೆ’ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ದಾರೆ. ಈ ನಡುವೆ ಸಂಘರ್ಷದಿಂದಾಗಿ 3 ದಿನಗಳಲ್ಲಿ ಉಭಯ ದೇಶಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 1300 ದಾಟಿದ್ದರೆ, ಗಾಯಾಳುಗಳ ಸಂಖ್ಯೆ 5000 ದಾಟಿದೆ. ಈ ಪೈಕಿ ಇಸ್ರೇಲ್‌ನಲ್ಲಿ 800 ಮತ್ತು ಗಾಜಾದಲ್ಲಿ 500 ಜನರು ಸಾವನ್ನಪ್ಪಿದ್ದಾರೆ. ಹಮಾಸ್‌ ಕೊಂಚ ಥಂಡಾ: ಅಚ್ಚರಿಯೆಂದರೆ ಶನಿವಾರ ಇಸ್ರೇಲ್‌ ಮೇಲೆ ಏಕಾಏಕಿ 2500 ರಾಕೆಟ್‌ ಮೂಲಕ ದಾಳಿ ನಡೆಸಿ, ಇಸ್ರೇಲಿ ಗಡಿಯೊಳಗೆ 1000 ಜನರನ್ನು ನುಸುಳಿಸಿ 800ಕ್ಕೂ ಹೆಚ್ಚು ನಾಗರಿಕರು, ಯೋಧರ ಬಲಿ ಪಡೆದಿದ್ದ ಹಮಾಸ್‌ ಉಗ್ರರು, ಭಾನುವಾರದಿಂದೀಚೆಗೆ ಬಹುತೇಕ ತಣ್ಣಗಾಗಿದ್ದಾರೆ. ಗಾಜಾಪಟ್ಟಿ ಪ್ರದೇಶದಿಂದ ಇಸ್ರೇಲ್‌ ಕಡೆಗೆ ಒಂದಿಷ್ಟು ರಾಕೆಟ್‌ ಹಾರಿಬಂದಿದ್ದು ಬಿಟ್ಟರೆ ಉಗ್ರರ ಕಡೆಯಿಂದ ಹೆಚ್ಚಿನ ದಾಳಿ ನಡೆದಿಲ್ಲ. ಅಲ್ಲಲ್ಲಿ ಕೆಲ ದಾಳಿ ಘಟನೆ ಹೊರತುಪಡಿಸಿದರೆ ಬೇರೆಲ್ಲೂ ಕಾದಾಟ ನಡೆಯುತ್ತಿಲ್ಲ ಎಂದು ಇಸ್ರೇಲ್‌ ಸೇನೆಯ ವಕ್ತಾರ ಡೇನಿಯಲ್‌ ಹಗರಿ ಮಾಹಿತಿ ನೀಡಿದ್ದಾರೆ. 3 ಲಕ್ಷ ಮೀಸಲು ಸೇನೆ ಸನ್ನದ್ಧ: ನಾವು ಈಗಾಗಲೇ 3 ಲಕ್ಷ ಮೀಸಲು ಸೇನೆಯನ್ನು ಸನ್ನದ್ಥ ಸ್ಥಿತಿಯಲ್ಲಿ ಇರಿಸಿದ್ದೇವೆ. ಇಸ್ರೇಲ್‌ಗೆ ಬೆದರಿಕೆ ಹಾಕುವ ಯಾವುದೇ ಸೇನಾ ಸಾಮರ್ಥ್ಯವನ್ನು ಹಮಾಸ್‌ ಇನ್ನು ಮುಂದೆ ಹೊಂದಿರಬಾರದು ಎಂಬುದು ನಮ್ಮ ಗುರಿ ಎಂದು ಇಸ್ರೇಲ್‌ ಸೇನೆ ಮಾಹಿತಿ ನೀಡಿದೆ. ಬಿಡುಗಡೆ ತಂತ್ರ: ಈ ನಡುವೆ ಶನಿವಾರ ಮತ್ತು ಭಾನುವಾರದ ದಾಳಿ ವೇಳೆ ಯೋಧರು, ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ 150ಕ್ಕೂ ಹೆಚ್ಚು ಜನರನ್ನು ಅಪಹರಿಸಿ ಅವರನ್ನು ಒತ್ತೆಯಾಳಾಗಿರಿಸಿಕೊಂಡಿರುವ ಹಮಾಸ್‌, ಇವರ ಹತ್ಯೆ ಬೆದರಿಕೆ ಒಡ್ಡಿ, ಇಸ್ರೇಲ್‌ ಸೇನೆ ವಶದಲ್ಲಿರುವ ತನ್ನ ಸಾವಿರಾರು ಕಾರ್ಯಕರ್ತರನ್ನು ಬಿಡಿಸಿಕೊಳ್ಳಲು ಮುಂದಾಗಿದೆ. ‘ಸೋಮವಾರ ಮುಂಜಾನೆ ಕೂಡಾ ನಾವು ಸಾಕಷ್ಟು ಇಸ್ರೇಲಿ ಯೋಧರನ್ನು ಸೆರೆಹಿಡಿದಿದ್ದೇವೆ. ಇಸ್ರೇಲಿ ಸೇನೆ ಸೆರೆಹಿಡಿದಿರುವ ನಮ್ಮ ಯೋಧರನ್ನು ಬಿಡಿಸಿಕೊಳ್ಳುವುದು ನಮ್ಮ ಉದ್ದೇಶ’ ಎಂದು ಹಮಾಸ್‌ ವಕ್ತಾರ ಅಬ್ದೆಲ್‌ ಲತೀಫ್‌ ಹೇಳಿದ್ದಾನೆ. ಈ ಮೂಲಕ ದಾಳಿಯ ಉದ್ದೇಶ ಏನು ಎಂಬುದನ್ನು ಸ್ಪಷ್ಟಪಡಿಸಿದ್ದಾನೆ.