ಸಾರಾಂಶ
ಬೆಂಗಳೂರು: ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಉಡ್ಡಯನ ಕೇಂದ್ರದಲ್ಲಿ ಮಾನವರಹಿತ ಗಗನಯಾನ ಯೋಜನೆ ಭಾಗವಾಗಿ ಎಚ್‌ಎಲ್‌ವಿಎಂ-3 ರಾಕೆಟ್ ಜೋಡಣೆ ಕಾರ್ಯಕ್ಕೆ ಬುಧವಾರ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಈ ಮೂಲಕ ಮನುಷ್ಯರನ್ನು ಅಂತರಕ್ಷಕ್ಕೆ ಕೊಂಡೊಯ್ಯುವ ಪೂರ್ವಭಾವಿಯಾಗಿ ಮುಂದಿನ ವರ್ಷ ನಡೆಯಲಿರುವ ಮಾನವರಹಿತ ಗಗನಯಾನ ಯೋಜನೆ(ಜಿ-1)ಯ ಸಿದ್ಧತೆ ಅಧಿಕೃತವಾಗಿ ಆರಂಭವಾದಂತಾಗಿದೆ.
ಈ ಮಾನವರಹಿತ ಗಗನಯಾನ ಯೋಜನೆಯು ಮಾನವಸಹಿತ ಬಾಹ್ಯಾಕಾಶ ಯೋಜನೆ ಮತ್ತು ಭವಿಷ್ಯದ ಬಾಹ್ಯಾಕಾಶ ಯೋಜನೆ ದೃಷ್ಟಿಯಲ್ಲಿ ಮಹತ್ವದ್ದಾಗಿದೆ. ಗಗನಯಾನ ಯೋಜನೆಗೆ ಬಳಸುವ ಎಚ್‌ಎಲ್‌ವಿಎಂ ರಾಕೆಟ್‌ನ ಜೋಡಣೆ ಕಾರ್ಯ ಎಲ್‌ವಿಎಂ3 ರಾಕೆಟ್‌ನ ಮೊದಲ ಉಡ್ಡಯನ(ಡಿ.18, 2014ರಂದು)ದ 10ನೇ ವರ್ಷದ ಸಂಭ್ರಮದಲ್ಲೇ ನಡೆಯುತ್ತಿರುವುದು ಕಾಕತಾಳಿಯವಾಗಿದೆ.
ಎಚ್‌ಎಲ್‌ವಿಎಂ3 ರಾಕೆಟ್ ಅನ್ನು ಮಾನವ ಸಹಿತ ಬಾಹ್ಯಾಕಾಶ ಯೋಜನೆಗಳಿಗೆಂದೇ ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ಎಲ್‌ವಿಎಂ3ಯ ಸುಧಾರಿತ ಆವೃತ್ತಿಯಾಗಿದೆ. ಈ ರಾಕೆಟ್ ಹೆಚ್ಚು ವಿಶ್ವಾಸಾರ್ಹವಾಗಿದ್ದು ಮತ್ತು ಮಾನವಸಹಿತ ಯೋಜನೆಗಳಿಗೆ ಬೇಕಾದ ಹೆಚ್ಚಿನಭದ್ರತಾ ವ್ಯವಸ್ಥೆಗಳನ್ನು ಒಳಗೊಂಡಿದೆ ಎಂದು ಇಸ್ರೋ ಹೇಳಿದೆ.
ಮೂರು ಹಂತಗಳನ್ನೊಳಗೊಂಡ ಎಚ್‌ಎಲ್‌ವಿಎಂ3 ರಾಕೆಟ್ 53 ಮೀಟರ್ ಉದ್ದ ಇದ್ದು, 640 ಟನ್ ತೂಕ ಇದೆ. ಭೂಮಿಯ ಕೆಳಕಕ್ಷೆ(ಎಲ್‌ಇಒ) ಗೆ 10 ಟನ್ ತೂಕದ ಪೇ ಲೋಡ್‌ಗಳನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ.
ಗಗನಯಾನ ಯೋಜನೆಯು ಭವಿಷ್ಯದಲ್ಲಿ ಇಸ್ರೋದ ಕನಸಾದ ಭಾರತೀಯ ಅಂತರಿಕ್ಷ ನಿಲ್ದಾಣ(ಬಿಎಎಸ್) ಸ್ಥಾಪಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ. ಈ ಗಗನಯಾನ ಯೋಜನೆಯಿಂದ ಪಡೆದ ಅನುಭವವು ಮುಂದೆ ಭಾರತ ತನ್ನದೇ ಆದ ಸ್ಪೇಸ್ ಸ್ಟೇಷನ್ ನಿರ್ಮಿಸುವಲ್ಲಿ ನೆರವಾಗಲಿದೆ.