ಸೂರ್‍ಯಯಾನ: ಇಂದು ಇಸ್ರೋಗೆ ಅಗ್ನಿಪರೀಕ್ಷೆ!

| Published : Jan 06 2024, 02:00 AM IST / Updated: Jan 06 2024, 12:37 PM IST

ಸಾರಾಂಶ

ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಹತ್ವಾಕಾಂಕ್ಷಿ ಸೂರ್ಯಯಾನದ ಮಹತ್ವದ ಹೆಜ್ಜೆಯಾಗಿರುವ ಆದಿತ್ಯ ಎಲ್‌1 ನೌಕೆಯನ್ನು ಎಲ್‌ 1 ಪಾಯಿಂಟ್‌ಗೆ ಸೇರಿಸಬೇಕಿದೆ. ಇದರಲ್ಲಿ ಸ್ವಲ್ಪ ಎಡವಿದರು, ನೌಕೆ ನಿಷ್ಕೃಯಗೊಳ್ಳುವ ಭೀತಿ ಇರಲಿದೆ.

ಪಿಟಿಐ ಬೆಂಗಳೂರು  

ಭೂಮಿಯಿಂದ ಸೂರ್ಯನತ್ತ ಈಗಾಗಲೇ ನಾಲ್ಕು ತಿಂಗಳ ಅವಧಿಯಲ್ಲಿ 15 ಲಕ್ಷ ಕಿ.ಮೀ.ಗಳನ್ನು ಕ್ರಮಿಸಿರುವ ಆದಿತ್ಯ ಎಲ್‌1 ಸೌರ್ಯನೌಕೆಯನ್ನು ಶನಿವಾರ ಅದರ ನಿಗದಿತ ಕಕ್ಷೆಯಲ್ಲಿ ಕೂರಿಸುವ ಮಹತ್ವದ ಸಾಹಸಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಸಜ್ಜಾಗಿದೆ.

ಆದಿತ್ಯ ಎಲ್‌1 ನೌಕೆಯನ್ನು ಶನಿವಾರ ಸಂಜೆ 4 ಗಂಟೆಯ ವೇಳೆಗೆ ಲ್ಯಾಂಗ್ರೇಜ್‌ ಪಾಯಿಂಟ್‌ (ಎಲ್‌1)ನಲ್ಲಿ ಇಸ್ರೋ ಕೂರಿಸಲಿದೆ. ಇದು ಸೂರ್ಯಯಾನ ನೌಕೆಯ ಅಂತಿಮ ನಿಲ್ದಾಣವಾಗಿದ್ದು, ಅಲ್ಲಿಂದಲೇ ಅದು ಸೂರ್ಯನನ್ನು ನಿರಂತರವಾಗಿ ಅಧ್ಯಯನ ಮಾಡಲಿದೆ.

ಸೆ.2ರಂದು ಎಲ್‌1 ನೌಕೆಯನ್ನು ಇಸ್ರೋ ಉಡಾವಣೆ ಮಾಡಿತ್ತು. ಅದು ನಾಲ್ಕು ತಿಂಗಳ ಕಾಲ ಸುಮಾರು 15 ಲಕ್ಷ ಕಿ.ಮೀ. ಸಂಚರಿಸಿ ತನ್ನ ಅಂತಿಮ ಗುರಿಯನ್ನು ಸಮೀಪಿಸಿದೆ. ಅದನ್ನೀಗ ಎಲ್‌1 ಪಾಯಿಂಟ್‌ ಎಂಬ ನಿರ್ವಾತ ಪ್ರದೇಶದಲ್ಲಿ ಕೂರಿಸಲಾಗುತ್ತದೆ. ಈ ಅವಕಾಶ ಕೈಬಿಟ್ಟರೆ ಅದು ಸೂರ್ಯನತ್ತ ಪ್ರಯಾಣ ಮುಂದುವರೆಸಿ ವ್ಯರ್ಥವಾಗುವ ಅಪಾಯವಿದೆ. 

ಹೀಗಾಗಿ ಶನಿವಾರದ ಕಾರ್ಯಾಚರಣೆ ಇಸ್ರೋಗೆ ಅತ್ಯಂತ ಮಹತ್ವದ್ದಾಗಿದೆ.ಎಲ್‌1 ಪಾಯಿಂಟ್‌ ಎಂಬುದು ಭೂಮಿಯಿಂದ ಸೂರ್ಯನಿಗಿರುವ ಒಟ್ಟು ದೂರದಲ್ಲಿ ನೂರನೇ ಒಂದರಷ್ಟು ದೂರವಾಗಿದೆ. ಇಲ್ಲಿಂದ ಯಾವುದೇ ಅಡೆತಡೆಯಿಲ್ಲದೆ, ಹಗಲು ರಾತ್ರಿಗಳಿಲ್ಲದೆ, ಗ್ರಹಣಗಳೂ ಇಲ್ಲದೆ ಆದಿತ್ಯ ನೌಕೆಯು ಸೂರ್ಯನನ್ನು ನಿರಂತರವಾಗಿ ಅಧ್ಯಯನ ಮಾಡಬಹುದಾಗಿದೆ. 

ಸೂರ್ಯನಲ್ಲಿ ನಡೆಯುವ ಚಟುವಟಿಕೆಗಳು ಹಾಗೂ ಅಂತರಿಕ್ಷದ ವಾತಾವರಣದ ಮೇಲೆ ಅದರ ಪರಿಣಾಮವನ್ನು ಎಲ್‌1 ಅಧ್ಯಯನ ನಡೆಸಲಿದೆ. ‘ಆದಿತ್ಯ ನೌಕೆಯಲ್ಲಿ 4 ಪೇಲೋಡ್‌ಗಳಿವೆ. ಅವು ಸೂರ್ಯನನ್ನು ಅಧ್ಯಯನ ಮಾಡಿ ಇಸ್ರೋಗೆ ಮಾಹಿತಿ ರವಾನಿಸಲಿವೆ’ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.