ಸಾರಾಂಶ
ಶ್ರೀಹರಿಕೋಟದ ಎರಡನೇ ಉಡ್ಡಯನ ಕೇಂದ್ರದಿಂದ ಬೃಹತ್ ಜಿಎಸ್‌ಎಲ್‌ವಿ ರಾಕೆಟ್ ಆಗಸಕ್ಕೇರಿ 2ನೇ ತಲೆಮಾರಿನ ನಾವಿಕ್ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಯಲ್ಲಿ ಕೂರಿಸುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ತನ್ನ 100ನೇ ಉಡ್ಡಯನದ ಇತಿಹಾಸ ಬರೆಯಿತು.
ಶ್ರೀಹರಿಕೋಟಾ: ಶ್ರೀಹರಿಕೋಟದ ಎರಡನೇ ಉಡ್ಡಯನ ಕೇಂದ್ರದಿಂದ ಬೃಹತ್ ಜಿಎಸ್‌ಎಲ್‌ವಿ ರಾಕೆಟ್ ಆಗಸಕ್ಕೇರಿ 2ನೇ ತಲೆಮಾರಿನ ನಾವಿಕ್ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಯಲ್ಲಿ ಕೂರಿಸುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ತನ್ನ 100ನೇ ಉಡ್ಡಯನದ ಇತಿಹಾಸ ಬರೆಯಿತು.
ಬೆಳಗ್ಗೆ 6.29ಕ್ಕೆ ಬೃಹತ್ ರಾಕೆಟ್ ಮೋಡದಿಂದಾವೃತ ಆಗಸದಲ್ಲಿ 19 ನಿಮಿಷ ಸಾಗಿದ ಬಳಿಕ ಎನ್‌ವಿಎಸ್-2 (ಸ್ವದೇಶಿ ಜಿಪಿಎಸ್ ಸ್ಯಾಟಲೈಟ್) ಉಪಗ್ರಹವನ್ನು ನಿಯೋಜಿತ ಕಕ್ಷೆಗೆಕೂರಿಸಿತು. ಇದರೊಂದಿಗೆ ಇಸ್ರೋ ನೂತನ ಅಧ್ಯಕ್ಷ ವಿ.ನಾರಾಯಣನ್ ನೇತೃತ್ವದಲ್ಲಿ ನಡೆದ ಮೊದಲ ಉಡ್ಡಯನ ಯಶಸ್ವಿ ಆದಂತಾಗಿದೆ.
ಇಸ್ರೋದ ಈ ವರ್ಷದ ಮೊದಲ ಮತ್ತು 100ನೇ ಉಡ್ಡಯನವು ಯಶಸ್ವಿಯಾಗಿದೆ ಎಂದು ಘೋಷಿಸಲು ತುಂಬಾ ಸಂತೋಷ ಪಡುತ್ತೇನೆ. ಜಿಎಸ್‌ಎಲ್‌ವಿ-ಎಫ್15 ರಾಕೆಟ್ ನ್ಯಾವಿಗೇಷನ್ ಉಪಗ್ರಹ ಎನ್‌ವಿಎಸ್-02 ಅನ್ನು ಉದ್ದೇಶಿತ ಕಕ್ಷೆಗೆ ಕೂರಿಸುವಲ್ಲಿ ಯಶಸ್ವಿಯಾಗಿದೆ. ಇದು ಭಾರತದ ಪಾಲಿಗೆ ಮಹತ್ವದ ಮೈಲಿಗಲ್ಲಾಗಿದೆ ಎಂದು ನಂತರ ನಾರಾಯಣನ್ ಖುಷಿ ಹಂಚಿಕೊಂಡರು.
ಮುಂದಿನ 5 ವರ್ಷಗಳಲ್ಲಿ 200ನೇ ಉಡ್ಡಯನ?: 1963ರ ನ.21ರಂದು ಮೊದಲ ಬಾರಿಗೆ ಅಮೆರಿಕದ ರಾಕೆಟ್ ಬಳಸಿ ಭಾರತವು ಉಪಗ್ರಹ ಉಡ್ಡಯನ ಮಾಡಿತ್ತು. ಬಳಿಕ 1979ರಲ್ಲಿ ಪ್ರೊ.ಸತೀಶ್ ಧವನ್ ಮತ್ತು ಎಪಿಜೆ ಅಬ್ದುಲ್ ಕಲಾಂ ನೇತೃತ್ವದಲ್ಲಿ ಎಸ್‌ಎಲ್‌ವಿ ರಾಕೆಟ್ ಮೂಲಕ ಮೊದಲ ಉಡ್ಡಯನ ಮಾಡಲಾಗಿತ್ತು. ಇದಾದ 46 ವರ್ಷಗಳ ಬಳಿಕ 100ನೇ ಉಡ್ಡಯನದ ಮೈಲಿಗಲ್ಲನ್ನು ಇಸ್ರೋ ಸಾಧಿಸಿದೆ. ಮೊದಲ 100 ಉಡ್ಡಯನಕ್ಕೆ ಸುಮಾರು ಅರ್ಧ ಶತಮಾನ ತೆಗೆದುಕೊಂಡ ಇಸ್ರೋ ಮುಂದಿನ 100 ಉಡ್ಡಯನದ ಸಾಧನೆಯನ್ನು ಕೇವಲ ಐದು ವರ್ಷಗಳಲ್ಲೇ ಪೂರ್ಣಗೊಳಿಸುವ ವಿಶ್ವಾಸ ಹೊಂದಿದೆ.
ಮುಂದಿನ 100 ಉಡ್ಡಯನದ ಸಾಧನೆಯನ್ನು ಕೇವಲ ಐದು ವರ್ಷಗಳಲ್ಲಿ ಸಾಧಿಸಲು ಸಾಧ್ಯವೇ ಎಂಬ ಪತ್ರಕರ್ತರ ಪ್ರಶ್ನೆಗೆ, ಇದು ಸಾಧ್ಯ ಎಂದು ನಾರಾಯಣನ್ ತಿಳಿಸಿದರು.
ಈವರೆಗೆ ಇಸ್ರೋವು 6 ತಲೆಮಾರಿನ ಉಪಗ್ರಹ ಉಡ್ಡಯನ ರಾಕೆಟ್‌ಗಳನ್ನು ಅಭಿವೃದ್ಧಿಪಡಿಸಿದೆ. ಇದರಲ್ಲಿ ಮೊದಲ ರಾಕೆಟ್(ಎಸ್‌ಎಲ್‌ವಿ-3ಇ ಅನ್ನು ಪ್ರೊ।ಸತೀಶ್ ಧವನ್ ಮತ್ತು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ನೇತೃತ್ವದಲ್ಲಿ ನಿರ್ಮಿಸಲಾಗಿತ್ತು. ಇದಾದ ಬಳಿಕ ಒಟ್ಟು 46 ವರ್ಷಗಳಲ್ಲಿ ಇಸ್ರೋವು ಈವರೆಗೆ 548 ಉಪಗ್ರಹಗಳನ್ನು ಕಕ್ಷೆಗೆ ಕೂರಿಸಿದೆ. 433 ವಿದೇಶಿ ಉಪಗ್ರಹಗಳನ್ನೂ ಹಾರಿಸಿದೆ ಎಂದು ನಾರಾಯಣನ್ ಮಾಹಿತಿ ನೀಡಿದರು.