ಭವಿಷ್ಯದ ಗಗನಯಾನ ಯೋಜನೆಗೆ ಬಳಸುವ ಸಿಇ20 ಕ್ರಯೋಜನಿಕ್‌ ಎಂಜಿನ್‌ನ ಯಶಸ್ವಿ ಪರೀಕ್ಷೆ

| Published : Dec 13 2024, 12:48 AM IST / Updated: Dec 13 2024, 04:24 AM IST

ಸಾರಾಂಶ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭವಿಷ್ಯದ ಬಾಹ್ಯಾಕಾಶ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದ ಸಿಇ20 ಕ್ರಯೋಜನಿಕ್‌ ಎಂಜಿನ್‌(ಎವಿಎಂ-3 ರಾಕೆಟ್‌ನ ಎಂಜಿನ್‌)ನ ನಿರ್ಣಾಯಕ ಪರೀಕ್ಷೆ ಯಶಸ್ವಿಯಾಗಿದೆ.

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭವಿಷ್ಯದ ಬಾಹ್ಯಾಕಾಶ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದ ಸಿಇ20 ಕ್ರಯೋಜನಿಕ್‌ ಎಂಜಿನ್‌(ಎವಿಎಂ-3 ರಾಕೆಟ್‌ನ ಎಂಜಿನ್‌)ನ ನಿರ್ಣಾಯಕ ಪರೀಕ್ಷೆ ಯಶಸ್ವಿಯಾಗಿದೆ.

ಎಂಜಿನ್‌ಗೆ ಆಗಸದಲ್ಲೇ ಎಂಜಿನ್‌ಗೆ ಮರುಚಾಲನೆ ನೀಡುವ ವ್ಯವಸ್ಥೆಯೊಂದಿಗೆ ಈ ಪರೀಕ್ಷೆ ನಡೆದಿರುವ ಹಿನ್ನೆಲೆಯಲ್ಲಿ ಇಸ್ರೋವು ರಾಕೆಟ್‌ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲು ಸಾಧಿಸಿದಂತಾಗಿದೆ.

ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಇಸ್ರೋ ಪ್ರೊಪಲ್ಷನ್‌ ಕಾಂಪ್ಲೆಕ್ಸ್‌ನಲ್ಲಿ ನ.29ರಂದು ಸಿಇ20 ಕ್ರೋಯಜನಿಕ್‌ ಎಂಜಿನ್‌ನ ಸಮುದ್ರಮಟ್ಟದ ಹಾಟ್‌ ಟೆಸ್ಟ್‌ ಅನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ಇಸ್ರೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ದೇಶೀ ನಿರ್ಮಿತ ಈ ಸಿಇ20 ಕ್ರಯೋಜನಿಕ್‌ ಎಂಜಿನ್‌ ಅನ್ನು ಲಿಕ್ವಿಡ್‌ ಪ್ರೊಪಲ್ಷನ್‌ ಸಿಸ್ಟಮ್ಸ್‌ ಸೆಂಟರ್‌ ಅ‍ಭಿವೃದ್ಧಿಪಡಿಸಿದೆ. ಈ ಎಂಜಿನ್‌ ಉಡ್ಡಯನ ವಾಹನದ ಮೇಲಿನ ಹಂತಕ್ಕೆ ಶಕ್ತಿ ತುಂಬುತ್ತದೆ. ಕ್ರಯೋಜನಿಕ್‌ ಎಂಜಿನ್‌ ಅನ್ನು 19 ಟನ್‌ನಿಂದ 22 ಟನ್‌ವರೆಗಿನ ಥ್ರಸ್ಟ್‌ಲೆವಲ್‌ನಲ್ಲಿ ಕಾರ್ಯನಿರ್ವಹಿಸುವಂತೆ ರೂಪಿಸಲಾಗಿದೆ.

ಇಸ್ರೋ ಪ್ರಕಾರ ಈ ಪರೀಕ್ಷೆಯು ಭವಿಷ್ಯದ ಬಾಹ್ಯಾಕಾಶ ಯೋಜನೆಗಳ ದೃಷ್ಟಿಯಲ್ಲಿ ಮಹತ್ವದ್ದಾಗಿದೆ. ಹಲವು ಉಪಗ್ರಹಗಳ ಉಡಾವಣೆಯಂಥ ಪರಿಸ್ಥಿತಿಗಳಲ್ಲಿ ರಾಕೆಟ್‌ ಎಂಜಿನ್‌ಗ‍ಳಿಗೆ ಪುನರ್ ಚಾಲನೆ ನೀಡುವ ತಂತ್ರಜ್ಞಾನ ಅಭಿವೃದ್ಧಿಗೆ ಈ ಪರೀಕ್ಷೆಯಿಂದ ಹೆಚ್ಚಿನ ಲಾಭವಾಗಲಿದೆ. ಆಗಸದಲ್ಲೇ ಎಂಜಿನ್‌ಗಳಿಗೆ ಮರು ಚಾಲನೆ ನೀಡುವುದು ಇಸ್ರೋದ ಕಾರ್ಯ ಯೋಜನೆಗಳ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ನೆರವಾಗಲಿದೆ. ಈಗಾಗಲೇ ಇಸ್ರೋದ ಚಂದ್ರಯಾನ ಯೋಜನೆಗಳಿಗೆ ಈ ಎಂಜಿನ್‌ ಬಳಿಸದ ಎಲ್‌ವಿಎಂ3 ರಾಕೆಟ್‌ಗಳನ್ನೇ ಬಳಸಲಾಗಿದೆ. ಮುಂದಿನ ಮಾನವಸಹಿತ ಗಗನಯಾನ ಯೋಜನೆಗೂ ಇದೇ ಎಂಜಿನ್‌ ಬಳಕೆಯಾಗಲಿದೆ.