ಸಾರಾಂಶ
ನವದೆಹಲಿ: ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ ಪ್ರಮುಖ ವಿಪಕ್ಷ ಕಾಂಗ್ರೆಸ್‌ಗೆ ಆದಾಯ ತೆರಿಗೆ ಇಲಾಖೆ ಭರ್ಜರಿ ಶಾಕ್ ನೀಡಿದೆ. 2018-19ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಲ್ಲಿ ವಿಳಂಬವಾಗಿದೆ ಎಂಬ ಕಾರಣ ನೀಡಿ ಕಾಂಗ್ರೆಸ್‌ಗೆ 210 ಕೋಟಿ ರು. ದಂಡ ಪಾವತಿ ಮಾಡುವಂತೆ ನೋಟಿಸ್ ಜಾರಿ ಮಾಡಿದೆ.
ಜೊತೆಗೆ, ಪಕ್ಷದ ವಿವಿಧ ಖಾತೆಯಲ್ಲಿ ಒಟ್ಟಾರೆ 162 ಕೋಟಿ ರು. ಮಾತ್ರ ಹಣ ಇದ್ದ ಕಾರಣ ಎಲ್ಲಾ ಖಾತೆಗಳನ್ನೂ ಸ್ಥಗಿತಗೊಳಿಸಿದೆ.ಆದರೆ ಈ ಕುರಿತು ಪಕ್ಷದ ನಾಯಕರು ಕೂಡಲೇ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಖಾತೆಗಳ ನಿರ್ವಹಣೆ ಮೇಲೆ ಹೇರಲಾಗಿದ್ದ ನಿರ್ಬಂಧ ಸದ್ಯಕ್ಕೆ ತೆರವುಗೊಳಿಸಿ ವಿಚಾರಣೆಯನ್ನು ಮುಂದಿನ ವಾರಕ್ಕೆ (ಫೆ.21ಕ್ಕೆ) ನಿಗದಿ ಮಾಡಿದೆ.
ಹೀಗಾಗಿ ತಕ್ಷಣಕ್ಕೆ ಕಾಂಗ್ರೆಸ್ ಅಪಾಯದಿಂದ ಪಾರಾಗಿದ್ದರೂ, ಮುಂದಿನ ವಾರದ ವಿಚಾರಣೆ ವೇಳೆ ಪ್ರತಿಕೂಲ ಪರಿಣಾಮ ಬಂದರೆ ಲೋಕಸಭಾ ಚುನಾವಣೆಗೂ ಮುನ್ನ ಪಕ್ಷದ ಭಾರೀ ಆರ್ಥಿಕ ಸಂಕಷ್ಟ ಎದುರಿಸಬೇಕಾಗಿ ಬರುವ ಸಾಧ್ಯತೆ ಇದೆ.
ಈ ನಡುವೆ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ಪಕ್ಷದ ಖಜಾಂಚಿ ಅಜಯ್ ಮಾಕನ್, ‘ಹುರುಳಿಲ್ಲದ ಕಾರಣಗಳನ್ನು ನೀಡಿ ಪಕ್ಷದ ಎಲ್ಲ ಪ್ರಮುಖ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಕಿಡಿಕಾರಿದ್ದಾರೆ.
ಮತ್ತೊಂದೆಡೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿ, ‘ಅಧಿಕಾರದ ಮದದಲ್ಲಿರುವ ಮೋದಿ ಸರ್ಕಾರ, ಲೋಕಸಭಾ ಚುನಾವಣೆ ಘೋಷಣೆಗೂ ಕೆಲವೇ ದಿನಗಳ ಮೊದಲು ದೇಶದ ಅತಿದೊಡ್ಡ ವಿಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ. ಇದು ದೇಶದ ಪ್ರಜಾಪ್ರಭುತ್ವ ಮೇಲಿನ ಅತ್ಯಂತ ಆಳವಾದ ದಾಳಿ’ ಎಂದು ಕಿಡಿಕಾರಿದ್ದಾರೆ.
ತೆರಿಗೆ ಶಾಕ್: 2018-19ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಲ್ಲಿ 45 ದಿನಗಳ ಕಾಲ ವಿಳಂಬ ಮಾಡಲಾಗಿದೆ ಎಂದು ಆರೋಪಿಸಿ ಅಖಿಲ ಭಾರತ ಕಾಂಗ್ರೆಸ್ ಪಕ್ಷಕ್ಕೆ ಆದಾಯ ತೆರಿಗೆ ಇಲಾಖೆ 210 ಕೋಟಿ ರು. ದಂಡ ಕಟ್ಟುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಿದೆ.
ಆದರೆ ಪಕ್ಷದ ವಿವಿಧ ವಿಭಾಗಗಳ ಎಲ್ಲಾ ಖಾತೆಗಳಲ್ಲಿ ಇರುವ ಒಟ್ಟು ಹಣವೇ 162 ಕೋಟಿ ರು. ಎನ್ನುವ ಕಾರಣಕ್ಕಾಗಿ ಎಲ್ಲಾ ಖಾತೆಗಳನ್ನು ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ.
ಮೇಲ್ಮನವಿ: ತೆರಿಗೆ ಇಲಾಖೆ ಅಧಿಕಾರಿಗಳ ಕ್ರಮದ ಬಗ್ಗೆ ಮಾಹಿತಿ ಸಿಗುತ್ತಲೇ ಪಕ್ಷದ ಹಿರಿಯ ನಾಯಕ ವಿವೇಕ್ ಟಂಖಾ, ಆದಾಯ ತೆರಿಗೆ ಇಲಾಖೆ ಮೇಲ್ಮನವಿ ನ್ಯಾಯಾಧಿಕರಣಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ತೆರಿಗೆ ಇಲಾಖೆಯ ಕ್ರಮದಿಂದಾಗಿ ಪಕ್ಷವು ಚುನಾವಣೆಯ ಹಬ್ಬದಲ್ಲಿ ಭಾಗವಹಿಸುವ ಅವಕಾಶವನ್ನು ಕಳೆದುಕೊಳ್ಳಲಿದೆ ಎಂದು ದೂರಿದ್ದಾರೆ.
ನ್ಯಾಯಾಧಿಕರಣ ಸದ್ಯಕ್ಕೆ ಖಾತೆ ಸ್ಥಗಿತಕ್ಕೆ ತಡೆ ನೀಡಿದ್ದು, ಪುನಃ ಬಳಕೆಗೆ ಅನುವು ಮಾಡಿಕೊಟ್ಟಿದೆ. ಆದರೆ, ಆದರೆ 115 ಕೋಟಿ ರು. ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡಲು ಪ್ರಸೂಚನೆ ನೀಡಿದೆ. ಇದರಿಂದಾಗಿ ಪಕ್ಷದ ಖಾತೆಗಳಲ್ಲಿರುವ 162 ಕೋಟಿ ರು. ಪೈಕಿ 47 ಕೋಟಿ ರು. ಬಳಕೆಗೆ ಮಾತ್ರ ಕಾಂಗ್ರೆಸ್‌ಗೆ ಅವಕಾಶ ಸಿಕ್ಕಂತಾಗಿದೆ. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಾಧಿಕರಣ ಮುಂದಿನ ಬುಧವಾರಕ್ಕೆ ನಿಗದಿಪಡಿಸಿದೆ.
ಮಾಕನ್ ಕಿಡಿ: ತೆರಿಗೆ ಇಲಾಖೆ ಕ್ರಮದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪಕ್ಷದ ಖಜಾಂಚಿ ಅಜಯ್ ಮಾಕನ್, 2018-19ನೇ ಸಾಲಿನ ತೆರಿಗೆ ರಿಟರ್ನ್ಸ್ ಅನ್ನು ಕೆಲವೇ ದಿನ ವಿಳಂಬವಾಗಿ ಸಲ್ಲಿಸಿದ್ದಕ್ಕೆ ನಮ್ಮ ಎಲ್ಲಾ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ.
ನಾವು ಕ್ರೌಡ್‌ಫಂಡಿಂಗ್ ಮೂಲಕ ಸಂಗ್ರಹಿಸಿದ್ದ ಹಣವನ್ನು ಕೂಡಾ ಬಳಸಲಾಗದ ಸ್ಥಿತಿ ತಲುಪಿದ್ದೇವೆ. ಅಲ್ಲದೆ, ಖಾತೆಯಲ್ಲಿ 115 ಕೋಟಿ ರು.ಗಳನ್ನು ಕನಿಷ್ಠ ಇಡಲೇಬೇಕು ಎಂದು ಐಟಿ ನ್ಯಾಯಾಧಿಕರಣ ಸೂಚಿಸಿರುವುದರಿಂದ ಪರೋಕ್ಷವಾಗಿ ಆ ಹಣ ಜಪ್ತಿ ಆದಂತೆಯೇ ಆಗಿದೆ.
ಲೋಕಸಭಾ ಚುನಾವಣೆ ಘೋಷಣೆಗೆ 2 ವಾರವಷ್ಟೇ ಬಾಕಿ ಉಳಿದಿರುವಾಗ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಮುಖ ವಿಪಕ್ಷದ ಬ್ಯಾಂಕ್ ಖಾತೆಗಳನ್ನು ಹುರುಳಿಲ್ಲದ ಕಾರಣ ಸ್ಥಗಿತಗೊಳಿಸಲಾಗಿದೆ. ಇದು ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬುದನ್ನು ಮತ್ತೊಮ್ಮೆ ತೋರಿಸಿದೆ’ ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವದ ಮೇಲಿನ ದಾಳಿ: ಅಧಿಕಾರದ ಮದದಲ್ಲಿರುವ ಮೋದಿ ಸರ್ಕಾರ ದೇಶದ ಅತಿದೊಡ್ಡ ವಿಪಕ್ಷದ ಬ್ಯಾಂಕ್ ಖಾತೆ ಸ್ಥಗಿತಗೊಳಿಸಿದೆ. ಇದು ಪ್ರಜಾಪ್ರಭುತ್ವ ಮೇಲಿನ ದಾಳಿ. ಹೀಗಾಗಿಯೇ ಈ ಬಾರಿ ಮೋದಿ ಗೆದ್ದರೆ ಮತ್ತೆ ದೇಶದಲ್ಲಿ ಚುನಾವಣೆ ನಡೆಯೋಲ್ಲ ಎಂದು ಈ ಹಿಂದೆ ನಾನು ಹೇಳಿದ್ದು. ದೇಶದಲ್ಲಿನ ಬಹುಸ್ತರದ ಪಕ್ಷಗಳ ವ್ಯವಸ್ಥೆ ಮತ್ತು ಭಾರತದ ಪ್ರಜಾಪ್ರಭುತ್ವವನ್ನು ಕಾಪಾಡುವಂತೆ ನಾವು ನ್ಯಾಯಾಂಗಕ್ಕೆ ಮನವಿ ಮಾಡುತ್ತೇವೆ.- ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ