ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್-ಬಿಜೆಪಿ ಮೈತ್ರಿಯ ಮೂರನೇ ಅಭ್ಯರ್ಥಿ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ.ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಭಾನುವಾರ ತಮ್ಮ ಜೆ.ಪಿ.ನಗರದ ನಿವಾಸದಲ್ಲಿ ಜೆಡಿಎಸ್ ಶಾಸಕರೊಂದಿಗೆ ಸಭೆ ನಡೆಸಿ ಸುದೀರ್ಘವಾಗಿ ಚರ್ಚಿಸಿದರು.
ಬೆಂಗಳೂರು : ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್-ಬಿಜೆಪಿ ಮೈತ್ರಿಯ(ಎನ್‌ಡಿಎ) ಮೂರನೇ ಅಭ್ಯರ್ಥಿ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ.
ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಭಾನುವಾರ ತಮ್ಮ ಜೆ.ಪಿ.ನಗರದ ನಿವಾಸದಲ್ಲಿ ಜೆಡಿಎಸ್ ಶಾಸಕರೊಂದಿಗೆ ಸಭೆ ನಡೆಸಿ ಸುದೀರ್ಘವಾಗಿ ಚರ್ಚಿಸಿದರು.
ಕಾಂಗ್ರೆಸ್ ಪಕ್ಷವು ಹೂಡಿರುವ ಐದನೇ ಅಭ್ಯರ್ಥಿಗೆ ಪ್ರತಿ ಸ್ಪರ್ಧಿಯಾಗಿ ಎನ್‌ಡಿಎಯಿಂದ ಮೂರನೇ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಬಿಜೆಪಿ ರಾಜ್ಯ ನಾಯಕರು ಹಾಗೂ ಕೇಂದ್ರದ ಬಿಜೆಪಿ ನಾಯಕರೊಂದಿಗೆ ಚರ್ಚಿಸಿದ ಬಳಿಕವೇ ಎಚ್.ಡಿ.ಕುಮಾರಸ್ವಾಮಿ ಅವರು ಈ ತೀರ್ಮಾನ ಕೈಗೊಂಡಿದ್ದಾರೆ.
ಆದರೆ, ಅಭ್ಯರ್ಥಿ ಯಾರು ಎಂಬುದು ಇನ್ನೂ ಅಂತಿಮವಾಗಿಲ್ಲ. ವಿಧಾನ ಪರಿಷತ್ತಿನ ಮಾಜಿ ಸದಸ್ಯ ಬಿ.ಎಂ.ಫಾರೂಕ್, ನಿವೃತ್ತರಾಗಲಿರುವ ಇಂಚರಾ ಗೋವಿಂದರಾಜು, ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ ಅವರ ಪತಿ ರಾಮೇಗೌಡ ಸೇರಿ ನಾಲ್ವರು ಆಕಾಂಕ್ಷಿಗಳಿದ್ದಾರೆ. ಸೋಮವಾರವೇ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುವುದರಿಂದ ಭಾನುವಾರ ತಡರಾತ್ರಿ ಅಥವಾ ಸೋಮವಾರ ಬೆಳಗ್ಗೆ ಅಭ್ಯರ್ಥಿ ಹೆಸರು ಅಂತಿಮಗೊಳ್ಳಲಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಇಂದು ಅಭ್ಯರ್ಥಿ ಘೋಷಣೆ:
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾ ರೆಡ್ಡಿ, ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಶಾಸಕರ ಸಭೆ ನಡೆಯಿತು. ವಿಧಾನ ಪರಿಷತ್ತಿನ ಚುನಾವಣೆಗೆ ಎನ್‌ಡಿಎ ಮೈತ್ರಿಕೂಟದಿಂದ ಮೂರನೇ ಅಭ್ಯರ್ಥಿ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ. ಯಾರನ್ನು ಅಭ್ಯರ್ಥಿ ಮಾಡಬೇಕು ಎಂಬುದು ಭಾನುವಾರ ರಾತ್ರಿ ಅಥವಾ ಸೋಮವಾರ ಬೆಳಗ್ಗೆ ಅಂತಿಮಗೊಳ್ಳಲಿದೆ ಎಂದು ಹೇಳಿದರು.
ಕೈಗೆ ಕೌಂಟರ್ ನೀಡಲು 3ನೇ ಅಭ್ಯರ್ಥಿ:
ಕಾಂಗ್ರೆಸ್‌ನಿಂದ ಐದನೇ ಅಭ್ಯರ್ಥಿ ಹಾಕಿರುವುದರಿಂದ ಅವಿರೋಧವಾಗಿ ಆಯ್ಕೆ ಆಗಲು ಬಿಡುವುದಿಲ್ಲ. ಹೀಗಾಗಿ ಎನ್‌ಡಿಎಯಿಂದ ಮೂರನೇ ಅಭ್ಯರ್ಥಿ ಹಾಕಲು ತೀರ್ಮಾನಿಸಲಾಗಿದೆ. ಈ ಸಂಬಂಧ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರೊಂದಿಗೆ ಚರ್ಚಿಸಿದ್ದಾರೆ. ಜೆಡಿಎಸ್ ಬಳಿ 18 ಮತಗಳಿವೆ. ಬಿಜೆಪಿಯಿಂದ ಏಳು ಮತಗಳಿವೆ. ಹೀಗಾಗಿ ಎನ್‌ಡಿಎಯಿಂದ ಮೂರನೇ ಅಭ್ಯರ್ಥಿ ಹಾಕಲು ತೀರ್ಮಾನಿಸಲಾಗಿದೆ ಎಂದರು.
ಕಾಂಗ್ರೆಸ್ ಅತೃಪ್ತರ ಸೆಳೆಯಲು ಯತ್ನ?
ಎನ್‌ಡಿಎ ಮೂರನೇ ಅಭ್ಯರ್ಥಿ ಗೆಲ್ಲಲು ಬಿಜೆಪಿ-ಜೆಡಿಎಸ್ ಬಳಿ ಅಗತ್ಯ ಮತಗಳಿಲ್ಲ. ಗೆಲ್ಲಲು 28 ಮತಗಳ ಅಗತ್ಯವಿದೆ. ಜೆಡಿಎಸ್‌ನ 18 ಮತ್ತು ಬಿಜೆಪಿಯ 7 ಸೇರಿದರೂ ಮತಗಳ ಸಂಖ್ಯೆ 25 ದಾಟುವುದಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಕೆಲ ಶಾಸಕರು ಅಸಮಾಧಾನಗೊಂಡಿದ್ದಾರೆ. ಈ ಅಸಮಾಧಾನಿತರ ಮತಗಳನ್ನು ಸೆಳೆಯಲು ಜೆಡಿಎಸ್-ಬಿಜೆಪಿ ಪ್ರಯತ್ನಿಸಬಹುದು. ಆದರೆ, ಇದು ಅಷ್ಟು ಸುಲಭವಿಲ್ಲ ಎನ್ನಲಾಗುತ್ತಿದೆ.
ರಾಜ್ಯಸಭೆ, ಮೇಲ್ಮನೆ ನಾಮಪತ್ರ ಸಲ್ಲಿಕೆಗೆಇಂದೇ ಕೊನೆ ದಿನ- ಬಿಜೆಪಿ ಅಭ್ಯರ್ಥಿಗಳು ಇಂದು ಪ್ರಕಟ
ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಯ 4 ಮತ್ತು ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿದೆ. ಈಗಾಗಲೇ ಕಾಂಗ್ರೆಸ್ಸಿನ ರಾಜ್ಯಸಭೆ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ನಾಲ್ವರು ಎಂಎಲ್‌ಸಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಐದನೆಯವರು ಸೋಮವಾರ ಸಲ್ಲಿಕೆ ಮಾಡಲಿದ್ದಾರೆ. ಆದರೆ ಬಿಜೆಪಿ- ಜೆಡಿಎಸ್‌ನಿಂದ ಈವರೆಗೂ ಅಭ್ಯರ್ಥಿ ಘೋಷಣೆಯಾಗಿಲ್ಲ. ಇಂದೇ ಅಭ್ಯರ್ಥಿ ಘೋಷಣೆ ಮಾಡಿ, ನಾಮಪತ್ರ ಸಲ್ಲಿಕೆ ಮಾಡುವುದು ನಿಚ್ಚಳವಾಗಿದೆ.
- ಕಾಂಗ್ರೆಸ್‌ನಿಂದ 5ನೇ ಅಭ್ಯರ್ಥಿ ಅವಿರೋಧ ಆಯ್ಕೆಯಾಗುವುದನ್ನು ತಡೆಯಲು ಈ ಕ್ರಮ
- ಈ ಬಗ್ಗೆ ಬಿಜೆಪಿ ರಾಷ್ಟ್ರೀಯ, ರಾಜ್ಯ ನಾಯಕರ ಜತೆ ಚರ್ಚೆ ನಡೆಸಿರುವ ಕುಮಾರಸ್ವಾಮಿ
- ಜೆಡಿಎಸ್‌ನ 18 ಮತ, ಬಿಜೆಪಿಯ ಹೆಚ್ಚುವರಿ 7 ಮತ ನಂಬಿ ಮೂರನೇ ಅಭ್ಯರ್ಥಿ ಕಣಕ್ಕೆ
- ಗೆಲ್ಲಲು 28 ಮತಗಳ ಅಗತ್ಯ, ಆದರೆ ದೋಸ್ತಿಗಳ ಬಳಿ ಇರೋದು ಕೇವಲ 25 ಮತ
- ಹೀಗಾಗಿ ಕಾಂಗ್ರೆಸ್‌ನ ಅತೃಪ್ತ ಮತಗಳನ್ನು ಸೆಳೆಯಲು ದೋಸ್ತಿಗಳಿಂದ ತೀವ್ರ ಪ್ರಯತ್ನ