ಸಾರಾಂಶ
ಜಮ್ಮು : 72 ತಾಸುಗಳ ಅವಧಿಯಲ್ಲಿ ಜಮ್ಮು ಭಾಗದಲ್ಲಿ ಭಯೋತ್ಪಾದಕರು ಮೂರನೇ ಬಾರಿಗೆ ಅಟ್ಟಹಾಸಗೈದಿದ್ದಾರೆ. ಈ ಪೈಕಿ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಕೊಂದು ಹಾಕಿವೆ. 15 ತಾಸುಗಳ ಕಾರ್ಯಾಚರಣೆ ವೇಳೆ ಯೋಧನೊಬ್ಬ ಹುತಾತ್ಮನಾಗಿದ್ದಾನೆ.
ಭಾನುವಾರ ಸಂಜೆ ಜಮ್ಮುವಿನ ರಿಯಾಸಿ ಜಿಲ್ಲೆಯಲ್ಲಿ ಯಾತ್ರಿಕರಿದ್ದ ಬಸ್ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ ಬಸ್ ಕಮರಿಗೆ ಉರುಳಿ 9 ಮಂದಿ ಬಲಿಯಾಗಿದ್ದರು. ಮಂಗಳವಾರ ಸಂಜೆ ಉಗ್ರರು ದೋಡಾದ ಚೆಕ್‌ಪೋಸ್ಟ್‌ವೊಂದರಲ್ಲಿ ಐವರು ಯೋಧರ ಮೇಲೆ ದಾಳಿ ಮಾಡಿದ್ದರು. ಇದೀಗ ಜಮ್ಮು ಪ್ರಾಂತ್ಯದ ಕಠುವಾದಲ್ಲೇ ಮತ್ತೊಂದು ದಾಳಿ ನಡೆದಿದೆ.
ಮಂಗಳವಾರ ರಾತ್ರಿ 8ರ ಸುಮಾರಿಗೆ ಕಠುವಾ ಜಿಲ್ಲೆಯ ಗ್ರಾಮವೊಂದಕ್ಕೆ ಆಗಮಿಸಿದ ಉಗ್ರರು, ಮನೆಯೊಂದರಿಂದ ಕುಡಿಯಲು ನೀರು ಕೇಳಿದ್ದಾರೆ. ಗಾಬರಿಗೊಂಡ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಭದ್ರತಾ ಪಡೆಗಳ ಆಗಮನವಾಗುತ್ತಿದ್ದಂತೆ, ಒಬ್ಬ ಉಗ್ರ ಗ್ರೆನೇಡ್ ಎಸೆದಿದ್ದಾನೆ. ತಕ್ಷಣವೇ ಆತನನ್ನು ಕೊಲ್ಲಲಾಗಿದೆ.
ಮತ್ತೊಬ್ಬ ಉಗ್ರಗಾಮಿ ಎಂ4 ಕಾರ್ಬೈನ್ ರೈಫಲ್, ಎಕೆ ಅಸಾಲ್ಟ್ ರೈಫಲ್‌ನೊಂದಿಗೆ ದಾಳಿ ನಡೆಸಿದ್ದ. 15 ತಾಸುಗಳ ಕಾರ್ಯಾಚರಣೆ ನಡೆಸಿ ಆತನನ್ನು ಕೊಲ್ಲಲಾಗಿದೆ. ಆತನ ಬಳಿ 1 ಲಕ್ಷ ರು. ನಗದು, ಪಾಕಿಸ್ತಾನದಲ್ಲಿ ತಯಾರಾದ ಆಹಾರ ಹಾಗೂ ಔಷಧಗಳು ಸಿಕ್ಕಿವೆ. ಈ ಉಗ್ರರು ಯಾವ ಉಗ್ರ ಸಂಘಟನೆಗೆ ಸೇರಿದವರು ಎಂಬುದು ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಠುವಾದಲ್ಲಿ ಮತ್ತಷ್ಟು ಉಗ್ರಗಾಮಿಗಳು ಇರಬಹುದು ಎಂಬ ಅನುಮಾನದೊಂದಿಗೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದಿದ್ದಾರೆ.
ಈ ಕಾರ್ಯಾಚರಣೆ ವೇಳೆ ಸಿಆರ್‌ಪಿಎಫ್ ಯೋಧ ಕಬೀರ್ ದಾಸ್ ಎಂಬುವರು ಹುತಾತ್ಮರಾಗಿದ್ದಾರೆ. ಮಧ್ಯಪ್ರದೇಶ ಮೂಲದ ಅವರು ಕಾರ್ಯಾಚರಣೆ ವೇಳೆ ಗಾಯಗೊಂಡಿದ್ದರು. ಆದರೆ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಉಸಿರು ಚೆಲ್ಲಿದ್ದಾರೆ.
ಕಾರ್ಯಾಚರಣೆ ವೇಳೆ ಪೊಲೀಸರ ವಾಹನಗಳ ಮೇಲೂ ಗುಂಡಿನ ದಾಳಿ ನಡೆದಿದೆ. ಅದೃಷ್ಟವಶಾತ್ ಅಧಿಕಾರಿಗಳು ಬಚಾವಾಗಿದ್ದಾರೆ.