ಸಾರಾಂಶ
ನವದೆಹಲಿ: ಅಮೇಠಿ ಬದಲಾಗಿ ರಾಯ್‌ಬರೇಲಿಯಿಂದ ರಾಹುಲ್ ಗಾಂಧಿ ಸ್ಪರ್ಧೆ ಕೇವಲ ಪರಂಪರೆಯಲ್ಲ. ಬದಲಿಗೆ ಅದು ಜವಾಬ್ದಾರಿ ಮತ್ತು ಕರ್ತವ್ಯ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಇದೊಂದು ಸುದೀರ್ಘ ಚುನಾವಣಾ ಪ್ರಕ್ರಿಯೆ, ಇಲ್ಲಿ ಚದುರಂಗದಾಟಗಳು ಬಾಕಿ ಉಳಿದಿವೆ. ರಾಹುಲ್ ಗಾಂಧಿ ರಾಯ್‌ಬರೇಲಿ ಸ್ಪರ್ಧೆಗೆ ಹಲವರು ಬೇರೆ ಬೇರೆ ರೀತಿ ಅಭಿಪ್ರಾಯ ಹೇಳುತ್ತಿದ್ದಾರೆ, ಆದರೆ ರಾಹುಲ್ ಗಾಂಧಿ, ರಾಜಕೀಯ ಚದುರಂಗದಾಟದಲ್ಲಿ ಅನುಭವಿ. ಅವರು ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ. ರಾಹುಲ್ ಕಣಕ್ಕಿಳಿದಿರುವುದರಿಂದ ಸಾಂಪ್ರದಾಯಿಕ ಕ್ಷೇತ್ರಗಳ ಬಗ್ಗೆ ಮಾತನಾಡುತ್ತಿದ್ದ ಬಿಜೆಪಿ ಚುನಾವಣಾ ಚಾಣಕ್ಯನಿಗೆ ಏನು ಮಾಡಬೇಕು ಎನ್ನುವುದು ತಿಳಿಯುತ್ತಿಲ್ಲ ’ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
‘ರಾಯ್ ಬರೇಲಿ, ಕೇವಲ ಸೋನಿಯಾ ಗಾಂಧಿ ಕ್ಷೇತ್ರ ಮಾತ್ರವಲ್ಲ. ಅದರ ಜೊತೆಗೆ ಇಂದಿರಾ ಗಾಂಧಿ ಕೂಡ ಪ್ರತಿನಿಧಿಸಿದ್ದ ಕ್ಷೇತ್ರ. ಹೀಗಾಗಿ ರಾಹುಲ್ ಗಾಂಧಿ ಇಲ್ಲಿ ಕಣಕ್ಕಿಳಿದಿರುವುದು ಪರಂಪರೆಯಲ್ಲ, ಜವಾಬ್ದಾರಿ ಮತ್ತು ಕರ್ತವ್ಯ’ ಎಂದರು.
ಇನ್ನೂ ಇದೇ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ಚುನಾವಣಾ ಕಣದಿಂದ ಹಿಂದಕ್ಕೆ ಸರಿದಿರುವುದರ ಬಗ್ಗೆ ಸಮರ್ಥಿಸಿಕೊಂಡಿರುವ ಕಾಂಗ್ರೆಸ್ ನಾಯಕ, ಉಪ ಚುನಾವಣೆಗಳ ಮೂಲಕ ಪ್ರಿಯಾಂಕಾ ಚುನಾವಣೆ ಪ್ರವೇಶಿಸಬಹುದು ಎಂದರು