ಪ್ರಧಾನಿಗೆ ಅಧಿಕಾರ ಕಳೆದುಕೊಳ್ಳುವ ಭಯವಿದೆ. ಆದ್ದರಿಂದ ರಾಹುಲ್‌ ಜತೆ ಚರ್ಚೆಗೆ ಬರಲು ಮೋದಿಗೆ ಧೈರ್‍ಯವಿಲ್ಲ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

ನವದೆಹಲಿ: ಲೋಕಸಭಾ ಚುನಾವಣೆಯ ನಡುವೆ ಜ್ವಲಂತ ಸಮಸ್ಯೆಗಳ ಕುರಿತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಜತೆ ಚರ್ಚಿಸಲು ನೀಡಿದ ಆಹ್ವಾನವನ್ನು ಒಪ್ಪಲು ಪ್ರಧಾನಿ ನರೇಂದ್ರ ಮೋದಿ ಇನ್ನೂ ಧೈರ್ಯ ಮಾಡಿಲ್ಲ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌, ‘ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ ಮೊದಲ ದಿನವೇ ರಾಹುಲ್‌ ಗಾಂಧಿ ತಮ್ಮ ಒಪ್ಪಿಗೆ ನೀಡಿದ್ದಾರೆ. ಆದರೆ 56 ಇಂಚು ಎದೆಯುಬ್ಬಿಸಿಕೊಂಡು ಪ್ರಚಾರಗಳಲ್ಲಿ ಭಾಗಿಯಾಗುವ ಪ್ರಧಾನಿ ಮೋದಿ ಮಾತ್ರ ಇನ್ನೂ ಧೈರ್ಯ ತೋರುತ್ತಿಲ್ಲ. ಇದು ಅವರ ಅಧೈರ್ಯವನ್ನು ತೋರಿಸುತ್ತಿದೆ’ ಎಂಬುದಾಗಿ ಟೀಕಿಸಿದ್ದಾರೆ.

ಮೋದಿಗೆ ಕುರ್ಚಿ ಕಳೆವ ಭೀತಿ ಪ್ರಧಾನಿ:

ಇದೇ ವೇಳೆ ಪ್ರಧಾನಿ ಮೋದಿ ನೀಡುವ ಸಂದರ್ಶನಗಳನ್ನು ಟೀಕಿಸಿದ ಜೈರಾಂ ‘ನರೇಂದ್ರ ಮೋದಿ ತಾವು ಅಧಿಕಾರದಿಂದ ಕೆಳಗಿಳಿಯುವ ಭಯದಿಂದ ಎಲ್ಲ ವಾಹಿನಿಗಳಿಗೆ ಸಂದರ್ಶನ ನೀಡಿ ಸಣ್ಣ ಸಣ್ಣ ವಿಷಯಗಳಿಗೂ ಮಹತ್ವ ಸಿಗುವಂತೆ ನೋಡಿಕೊಳ್ಳುತ್ತಿದ್ದಾರೆ. ಆದರೆ ಅವೆಲ್ಲವೂ ಸುಳ್ಳು ಭರವಸೆಗಳಿಂದ ಕೂಡಿವೆ ಎಂಬುದು ಜನರಿಗೆ ತಿಳಿದಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.