ಜಾರ್ಖಂಡ್‌ ಸಿಎಂ ಸೊರೇನ್‌ ಶೀಘ್ರ ರಾಜೀನಾಮೆ: ಬಿಜೆಪಿ ಸಂಸದ ನಿಶಿಕಾಂತ್‌

| Published : Jan 02 2024, 02:15 AM IST

ಜಾರ್ಖಂಡ್‌ ಸಿಎಂ ಸೊರೇನ್‌ ಶೀಘ್ರ ರಾಜೀನಾಮೆ: ಬಿಜೆಪಿ ಸಂಸದ ನಿಶಿಕಾಂತ್‌
Share this Article
  • FB
  • TW
  • Linkdin
  • Email

ಸಾರಾಂಶ

ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ವಿರುದ್ಧ ಭ್ರಷ್ಟಾಚಾರ ಆರೋಪದ ಇ.ಡಿ. ತನಿಖೆ ನಡೆಸುತ್ತಿದ್ದು, ಅವರನ್ನು ಬಂಧಿಸುವ ಸಾಧ್ಯತೆ ಹಿನ್ನೆಲೆ ಪ್ಲ್ಯಾನ್‌ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಂಚಿ: ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೂರೇನ್‌ ಶೀಘ್ರವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಮತ್ತು ಅವರ ಪತ್ನಿ ಕಲ್ಪನಾ ಸೂರೇನ್‌ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಹೇಳಿಕೆ ನೀಡಿದ್ದಾರೆ.

ಜಾರಿ ನಿರ್ದೇಶನಾಲಯ (ಇ.ಡಿ.) ಸೂರೇನ್‌ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸುತ್ತಿದೆ. 7ನೇ ಬಾರಿ ಸಮನ್ಸ್‌ ಕೂಡ ಜಾರಿ ಆಗಿದೆ. ಹೀಗಾಗಿ ತಮ್ಮನ್ನು ಇ.ಡಿ. ಬಂಧಿಸಲಿದೆ ಎಂದು ಭಯಗೊಂಡಿರುವ ಸೂರೇನ್‌ ತಮ್ಮ ಪತ್ನಿಗೆ ಸಿಎಂ ಸ್ಥಾನ ನೀಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದರ ಬೆನ್ನಲ್ಲೇ ಟ್ವೀಟ್‌ ಮಾಡಿರುವ ದುಬೆ ‘ಜಾರ್ಖಂಡ್‌ನ ಗಂಡೇ ಶಾಸಕ ಸರ್ಫರಾಜ್ ಅಹ್ಮದ್ ಅವರು ವಿಧಾನಸಭೆಗೆ ರಾಜೀನಾಮೆ ನೀಡಿದ್ದಾರೆ ಮತ್ತು ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಶೀಘ್ರದಲ್ಲೇ ಹೇಮಂತ್ ಸೊರೆನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಅವರ ಪತ್ನಿ ಕಲ್ಪನಾ ಸೂರೇನ್‌ ಸಿಎಂ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ’ ಎಂದಿದ್ದಾರೆ. ಆದರೆ ಈ ಬಗ್ಗೆ ಜೆಎಂಎಂ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.