ಸಾರಾಂಶ
ಮುಂಬೈ : ಹೆಚ್ಚುಕಮ್ಮಿ ಒಂದು ಶತಮಾನದ ಹಿಂದೆಯೇ ಭಾರತದ ಬೈಕ್ ಪ್ರೇಮಿಗಳಲ್ಲಿ ರೈಡಿಂಗ್‌ನ ಹೊಸ ಕ್ರೇಜ್ ಹುಟ್ಟುಹಾಕಿದ್ದ ಜಾವಾ ಯೆಜ್ಡಿ ಮೋಟರ್‌ಸೈಕಲ್ ಕಂಪನಿ, ಜಾವಾ 42 ಎಫ್‌ಜೆ350 ಬೈಕ್‌ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಮುಂಬೈನಲ್ಲಿ ಇತ್ತೀಚೆಗೆ ನಡೆದ ಅದ್ಧೂರಿ ಸಮಾರಂಭದಲ್ಲಿ ಮಹಿಂದ್ರಾ ಅಂಡ್ ಮಹಿಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹಿಂದ್ರಾ ಅವರು 350ಸಿಸಿ ಸಾಮರ್ಥ್ಯದ ಈ ಶಕ್ತಿಶಾಲಿ ಬೈಕ್ ಬಿಡುಗಡೆ ಮಾಡಿದರು. ‘ಜಾವಾ ಕಂಪನಿಯನ್ನು ಹುಟ್ಟುಹಾಕಿದ ಚೆಕ್ ರಿಪಬ್ಲಿಕ್‌ನ ಫ್ರಾಂಟಿಸೆಕ್ ಮತ್ತು ಜಾನಿಟೆಕ್ ಅವರ ಸ್ಮರಣಾರ್ಥ ಈ ಸಿರೀಸ್‌ಗೆ ಎಫ್‌ಜೆ ಎಂದು ಹೆಸರಿಡಲಾಗಿದೆ’ ಎಂದು ಜಾವಾ ಯೆಜ್ಡಿ ಸಹ ಸಂಸ್ಥಾಪಕ ಅನುಪಮ್ ಥರೇಜಾ ಈ ವೇಳೆ ಹೇಳಿದರು.ಈಗ ನಡೆಯುತ್ತಿರುವ ಹಬ್ಬಗಳ ಋತುವಿನ ಹಿನ್ನೆಲೆಯಲ್ಲಿ ಜಾವಾ ಯೆಜ್ಡಿ ಬೈಕುಗಳನ್ನು ಹೆಚ್ಚು ವೇಗದಲ್ಲಿ ಮಾರಾಟ ಮಾಡುವ ಗುರಿಯನ್ನು ಹೊಂದಿರುವ ಕಂಪನಿ, ಆ ಉದ್ದೇಶಕ್ಕೆ ದೇಶಾದ್ಯಂತ 100 ಹೊಸ ಶೋರೂಮ್‌ಗಳನ್ನು ತೆರೆಯುವುದಾಗಿಯೂ ಥರೇಜಾ ಇದೇ ವೇಳೆ ಪ್ರಕಟಿಸಿದರು.
ಹೀಗಿದೆ ಜಾವಾ 42ಎಫ್‌ಜೆ: ಜಾವಾ 42ಎಫ್‌ಜೆ ಬೈಕ್ ಸ್ಟೀಲ್ ಚಾಸಿ ಹೊಂದಿದ್ದು, 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್, ಟ್ವಿನ್ ಶಾಕ್ ಅಬ್ಸಾರ್ಬರ್, ಆಫ್ಸೆಟ್ ಸ್ಪೀಡೋಮೀಟರ್, ಡಬಲ್ ಗ್ರಿಲ್ ಫ್ರೇಮ್, ಅಲ್ಫಾ 2 ಪವರ್ ಚೈನ್, 6 ಸ್ಪೀಡ್ ಟ್ರಾನ್ಸ್‌ಮಿಷನ್‌ನಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿದೆ. ಬೈಕ್‌ನ ಬಣ್ಣ ಮಾಸದಂತೆ ರೋಬೋ ಪೇಟಿಂಗ್ ಮಾಡಲಾಗಿದೆ.
5 ಕಲರ್, ಭರ್ಜರಿ ಬೆಲೆ: 5 ಬಣ್ಣಗಳಲ್ಲಿ ಈ ಬೈಕ್ ಲಭ್ಯವಿದ್ದು, ಎಕ್ಸ್ ಶೋರೂಂ ಬೆಲೆ 1,99,142 ರು.ನಿಂದ ಆರಂಭವಾಗಿ 2,20,142 ರು.ವರೆಗೆ ಇದೆ. ರೈಡಿಂಗ್ ಪ್ರಿಯರಿಗೆ ಹೊಸ ಅನುಭವ ನೀಡುವ ರೀತಿಯಲ್ಲಿ ಈ ಪ್ರೀಮಿಯಂ ಬೈಕುಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.