ಸಾರಾಂಶ
ಲೋಕಸಭೆ ಚುನಾವಣೆ ಬಳಿಕ ಇಂಡಿಯಾ ಕೂಟದವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸೆಳೆಯಲು ಪ್ರಧಾನ ಮಂತ್ರಿ ಹುದ್ದೆಯ ಆಫರ್ ನೀಡಿದ್ದರು.
ಪಟನಾ: ಲೋಕಸಭೆ ಚುನಾವಣೆ ಬಳಿಕ ಇಂಡಿಯಾ ಕೂಟದವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸೆಳೆಯಲು ಪ್ರಧಾನ ಮಂತ್ರಿ ಹುದ್ದೆಯ ಆಫರ್ ನೀಡಿದ್ದರು. ಆದರೆ ನಿತೀಶ್ ಎನ್‌ಡಿಎ ಕೂಟದ ಬಗ್ಗೆ ತಮಗಿರುವ ಬದ್ಧತೆಯಿಂದ ಅದನ್ನು ತಿರಸ್ಕರಿಸಿ ಪ್ರಧಾನಿ ನರೇಂದ್ರ ಮೋದಿ ಜೊತೆ ಕೈಜೋಡಿಸಿದರು ಎಂದು ಜೆಡಿಯು ಪಕ್ಷದ ನಾಯಕ ಕೆ.ಸಿ.ತ್ಯಾಗಿ ಕುತೂಹಲಕಾರಿ ಮಾಹಿತಿ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ತ್ಯಾಗಿ,‘ಇಂಡಿಯಾ ಕೂಟ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಿತೀಶ್ ಕುಮಾರ್ ಅವರಿಗೆ ಅಲ್ಲಿ ಸರಿಯಾದ ಮರ್ಯಾದೆ ಸಿಗಲಿಲ್ಲ. ಅಲ್ಲದೇ ಇಂಡಿಯಾ ಕೂಟದ ನಾಯಕನ ಹುದ್ದೆಯೂ ಸಿಗಲಿಲ್ಲ. ಹೀಗಾಗಿ ಅವರು ಮತ್ತೆ ಎನ್‌ಡಿಎಗೆ ಮರಳಿದರು. ಆದರೆ ಚುನಾವಣೆ ಫಲಿತಾಂಶ ಬಂದ ಬಳಿಕ ಇಂಡಿಯಾ ಕೂಟದವರು ನಮ್ಮ ಬಳಿಕ ಬಂದು ನಿತೀಶ್ ಕುಮಾರ್ ಅವರೇ ಮತ್ತೆ ಪ್ರಧಾನಿ ಆಗಲಿ ಎಂದು ಆಯ್ಕೆ ನೀಡಿದ್ದರು. ಆದರೆ ಇದನ್ನು ನಿತೀಶ್ ತಿರಸ್ಕರಿಸಿ ತಮ್ಮ ಬದ್ಧತೆಯನ್ನು ತೋರಿಸಿದರು’ ಎಂದರು.
ಆದರೆ ಈ ರೀತಿಯ ಯಾವುದೇ ಆಫರ್ ಅನ್ನು ಇಂಡಿಯಾ ಕೂಟ ನೀಡಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.