ಸಾರಾಂಶ
ರಾಂಚಿ: ಜಾರ್ಖಂಡ್ ವಿಧಾನಸಭೆಯ 43 ಕ್ಷೇತ್ರಗಳಿಗೆ ಬುಧವಾರ ನಡೆದ ಮತದಾನ ಶಾಂತಿಯುತವಾಗಿ ಸಂಪನ್ನಗೊಂಡಿದೆ. 43 ಸ್ಥಾನಗಳಿಗೆ 683 ಅಭ್ಯರ್ಥಿಗಳು ಸ್ಪರ್ಧಿಸಿದ್ದು ಶೇ.65ರಷ್ಟು ಮತದಾನವಾಗಿದೆ. ರಾಜ್ಯದಲ್ಲಿ ಈ ಬಾರಿ ಆಡಳಿತಾರೂಢ ಜೆಎಂಎನ್- ಕಾಂಗ್ರೆಸ್ ಮೈತ್ರಿಕೂಟ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿದೆ. ಉಳಿದ 37 ಸ್ಥಾನಗಳಿಗೆ ನ.20ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದ್ದು, ನ.23ರಂದು ಮತ ಎಣಿಕೆ ನಡೆಯಲಿದೆ.
ಪ್ರಿಯಾಂಕಾ ಕಣಕ್ಕೆ ಇಳಿದ ವಯನಾಡಲ್ಲಿ ಶೇ.65 ಮತ
ವಯನಾಡು : ಕೇರಳದ ವಯನಾಡು ಲೋಕಸಭಾ ಕ್ಷೇತ್ರಕ್ಕೆ ಬುಧವಾರ ನಡೆದ ಉಪಚುನಾವಣೆಯಲ್ಲಿ ಶೇ.65ರಷ್ಟು ಮತದಾನವಾಗಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ರಾಜಕೀಯ ಪಾದಾರ್ಪಣೆ ಮಾಡಿದ ಕ್ಷೇತ್ರದಲ್ಲಿ ಈ ಬಾರಿ ಮತದಾನ ಪ್ರಮಾಣ ಇಳಿಕೆಯಾಗಿದೆ. ಕಳೆದ ಏಪ್ರಿಲ್ನಲ್ಲಿ ನಡೆದ ಚುನಾವಣೆಯಲ್ಲಿ ಶೇ.74 ರಷ್ಟು ಮತದಾನವಾಗಿದ್ದರೆ, 2019ರಲ್ಲಿ ಶೇ. 80ರಷ್ಟು ಮತದಾನವಾಗಿತ್ತು. ಪ್ರಿಯಾಂಕಾ ವಿರುದ್ಧ ಬಿಜೆಪಿಯಿಂದ ನವ್ಯಾ ಹರಿದಾಸ್ ಕಣಕ್ಕೆ ಇಳಿದಿದ್ದಾರೆ.
ಬಂಗಾಳ ಹೊರತು ಉಳಿದೆಲ್ಲೆಡೆ ಉಪಚುನಾವಣೆ ಶಾಂತಿಯುತ
ನವದೆಹಲಿ: 10 ರಾಜ್ಯಗಳ 31 ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ನಡೆದ ಉಪಚುನಾವಣೆಯಲ್ಲಿ ಶೇ.55ರಿಂದ ಶೇ.90ರವರೆಗೆ ಮತ ಚಲಾವಣೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣಾ ಹಿಂಸಾಚಾರಕ್ಕೆ ಒಬ್ಬ ಟಿಎಂಸಿ ಕಾರ್ಯಕರ್ತ ಬಲಿಯಾಗಿದ್ದು, ಉಳಿದಂತೆ ಎಲ್ಲೆಡೆ ಮತದಾನ ಶಾಂತಿಯುತವಾಗಿತ್ತು. ರಾಜಸ್ಥಾನದ 7, ಬಂಗಾಳದ 6, ಅಸ್ಸಾಂನ 5, ಬಿಹಾರದ 4, ಕರ್ನಾಟಕ 3, ಮಧ್ಯಪ್ರದೇಶದ 2, ಛತ್ತೀಸ್ಗಢ, ಗುಜರಾತ್, ಕೇರಳ, ಮೇಘಾಲಯದ ತಲಾ1 ಸ್ಥಾನಗಳಿಗೆ ಬುಧವಾರ ಉಪಚುನಾವಣೆ ನಡೆಯಿತು. ಮೇಘಾಲಯದ ಗನ್ಬೆಗ್ರೆ ಕ್ಷೇತ್ರದಲ್ಲಿ ಗರಿಷ್ಠ ಶೇ.90.84ರಷ್ಟು ಮತದಾನ ಆಗಿದೆ.