ಸಾರಾಂಶ
ವಿದೇಶಿ ಉಗ್ರರು ದಾಳಿ ನಡೆಸಬೇಕಿರುವ ಸ್ಥಳ, ಪರಾರಿಯಾಗಲು ಇರುವ ದಾರಿ ಹಾಗೂ ಭದ್ರತಾ ಪಡೆಗಳ ಬಗ್ಗೆ ಅತ್ಯಂತ ನಿಖರ ಮಾಹಿತಿ ಸಿಗುತ್ತಿದೆ. ಅದನ್ನು ಸ್ಥಳೀಯರೇ ನೀಡುತ್ತಿದ್ದಾರೆ ಎಂದು ಶಂಕಿಸಲಾಗಿದೆ. ಉಗ್ರರಿಗೆ ಆಶ್ರಯ, ಆಹಾರ, ಮಾಹಿತಿ ಎಲ್ಲವೂ ಸಿಗುತ್ತಿದೆ ಎಂದು ಭದ್ರತಾ ಪಡೆಗಳ ಮೂಲಗಳು ತಿಳಿಸಿವೆ.
ನವದೆಹಲಿ: ಬಹುತೇಕ ಪ್ರಶಾಂತವಾಗಿದ್ದ ಜಮ್ಮು-ಕಾಶ್ಮೀರದಲ್ಲಿ ಕೇವಲ 72 ತಾಸುಗಳಲ್ಲಿ 3 ಪ್ರತ್ಯೇಕ ಭಯೋತ್ಪಾದಕ ದಾಳಿಗಳು ನಡೆದಿದ್ದು, 12 ಮಂದಿ ಸಾವಿಗೀಡಾಗಿ, 40 ಮಂದಿ ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ ಜಮ್ಮು-ಕಾಶ್ಮೀರದಲ್ಲಿ ಹೊಸ ಬಗೆಯ ಉಗ್ರರ ಜಾಲ ತಲೆಎತ್ತಿರುವ ಕುರಿತು ಭದ್ರತಾ ಪಡೆಗಳಲ್ಲಿ ಚರ್ಚೆ ಆರಂಭವಾಗಿದೆ.
ಕಳೆದ 72 ತಾಸುಗಳಲ್ಲಿ ಯಾತ್ರಿಕರ ಬಸ್ ಮೇಲೆ ಸೇರಿದಂತೆ ಉಗ್ರರು ನಡೆಸಿದ ದಾಳಿಯಲ್ಲಿ 9 ನಾಗರಿಕರು ಹತರಾಗಿದ್ದರೆ, ಒಬ್ಬ ಯೋಧ ಹುತಾತ್ಮನಾಗಿದ್ದಾನೆ. ಇಬ್ಬರು ಉಗ್ರರನ್ನು ಕೊಲ್ಲಲಾಗಿದೆ. 34 ನಾಗರಿಕರು, 6 ಯೋಧರು ಗಾಯಗೊಂಡಿದ್ದಾರೆ.
ದಾಳಿ ನಡೆಸುತ್ತಿರುವುದು ವಿದೇಶಿ ಉಗ್ರರು. ಅವರಿಗೆ ದಾಳಿ ನಡೆಸಬೇಕಿರುವ ಸ್ಥಳ, ಪರಾರಿಯಾಗಲು ಇರುವ ದಾರಿ ಹಾಗೂ ಭದ್ರತಾ ಪಡೆಗಳ ತಾಣಗಳ ಬಗ್ಗೆ ಅತ್ಯಂತ ನಿಖರ ಮಾಹಿತಿ ಇರುವುದು ಆತಂಕಕ್ಕೆ ಕಾರಣವಾಗಿದೆ. ಸ್ಥಳೀಯರು, ಉಗ್ರರ ಪರ ಕೆಲಸ ಮಾಡುವವರು ಹಾಗೂ ಸ್ಥಳೀಯ ಉಗ್ರರ ಬೆಂಬಲದೊಂದಿಗೆ ಈ ಹೊಸ ಉಗ್ರರ ಜಾಲ ಕಾರ್ಯಾಚರಿಸುತ್ತಿರುವಂತಿದೆ. ಉಗ್ರರಿಗೆ ಆಶ್ರಯ, ಆಹಾರ, ಮಾಹಿತಿ ಎಲ್ಲವೂ ಸಿಗುತ್ತಿದೆ ಎಂದು ಭದ್ರತಾ ಪಡೆಗಳ ಮೂಲಗಳು ತಿಳಿಸಿವೆ.
ಜಮ್ಮು-ಕಾಶ್ಮೀರದಲ್ಲಿ ಲೋಕಸಭೆ ಚುನಾವಣೆ ಮುಗಿದ ಕೂಡಲೇ ದಾಳಿ ಹೆಚ್ಚಾಗಿರುವುದು ಗಮನಾರ್ಹ. 70ರಿಂದ 80 ಮಂದಿ ವಿದೇಶಿ ಉಗ್ರರು ದೇಶದೊಳಕ್ಕೆ ನುಸುಳಿದ್ದಾರೆ. ದಾಳಿ ನಡೆಸಬೇಕಾದ ನಿರ್ದಿಷ್ಟ ಸ್ಥಳವನ್ನು ತಲಪುವುದು ಹೇಗೆ, ಜನರಿಲ್ಲದ ಪ್ರದೇಶಗಳು ಎಲ್ಲಿವೆ, ದಾಳಿ ನಡೆಸಿದ ನಂತರ ಹೇಗೆ ತಪ್ಪಿಸಿಕೊಳ್ಳಬೇಕು ಎಂಬುದನ್ನೆಲ್ಲಾ ಅವರು ಕಲಿತಿದ್ದಾರೆ. ಸ್ಥಳೀಯರ ಜತೆ ಸಮನ್ವಯ ಸಾಧಿಸಿ ಈ ದಾಳಿ ನಡೆಸುತ್ತಿರುವಂತಿದೆ. ದಾಳಿ ನಡೆಸುವ ಸ್ಥಳಕ್ಕೆ ಸ್ಥಳೀಯರೇ ಕರೆದುಕೊಂಡು ಹೋಗುತ್ತಿರುವಂತಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ದಾಳಿಗಳು ಜಮ್ಮು ಭಾಗದಲ್ಲಿ ಆಗಬಹುದು ಎಂದು ಮೂಲಗಳು ಆತಂಕ ವ್ಯಕ್ತಪಡಿಸಿವೆ.