ಸಾರಾಂಶ
ಲಾಸ್ ಏಂಜಲೀಸ್: ನಟ, ನಿರ್ದೇಶಕ ಹಾಗೂ ಬರಹಗಾರ ಜಾನ್ ಕ್ರಾಸಿನ್ಸ್‌ಕಿ ‘2024ರ ಸೆಕ್ಸಿಯೆಸ್ಟ್ ಪುರುಷ’ ಎಂದು ಪೀಪಲ್ಸ್ ನಿಯತಕಾಲಿಕೆ ಮಂಗಳವಾರ ರಾತ್ರಿ ಘೋಷಿಸಿದೆ. ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ
ಕ್ರಾಸಿನ್ಸ್‌ಕಿ ಅವರು, ಈ ಘೋಷಣೆಯಿಂದ ನನಗೆ ವಾಸ್ತವವಾಗಿ ಕಣ್ಗತ್ತಲೆಯಾಗಿದ್ದು, ಆಲೋಚನೆಗಳೆಲ್ಲಾ ಶೂನ್ಯಗಳಾಗಿವೆ ಎಂದು ತಿಳಿಸಿದ್ದಾರೆ. ‘ಕ್ವೈಟ್ ಪ್ಲೇಸ್’ ಚಿತ್ರದ ಮೂಲಕ ನಟನೆಯನ್ನು ಆರಂಭಿಸಿದ ಕ್ರಾಸಿನ್ಸ್‌ಕಿ ಅವರು, ಜ್ಯಾಕ್ ರಯಾನ್ ಎಂಬ ಆ್ಯಕ್ಷನ್ ಚಿತ್ರ, ಸಿ ಆಫೀಸ್ ಸೇರಿದಂತೆ ಇನ್ನಿತರೆ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. 2023ರಲ್ಲಿ ನಟ ಹಾಗೂ ರೇಸರ್ ಪಾಟ್ರಿಕ್ ಡೆಂಪ್ಸಿ ಅವರು ಸೆಕ್ಸಿಯೆಸ್ಟ್ ಪುರುಷ ಎಂಬ ಖ್ಯಾತಿಗೆ ಪಾತ್ರರಾಗಿದ್ದರು.
ಷೇರುಪೇಟೇಲಿ ಸ್ವಿಗ್ಗಿ ಷೇರು ಲಿಸ್ಟಿಂಗ್: 500 ಸಿಬ್ಬಂದಿಗೆ ಕೋಟ್ಯಧಿಪತಿ ಭಾಗ್ಯ!
ನವದೆಹಲಿ: ಆಹಾರ ವಿತರಣೆಯ ಆನ್‌ಲೈನ್ ವೇದಿಕೆಯಾದ ಸ್ವಿಗ್ಗಿ ಷೇರುಪೇಟೆ ಪ್ರವೇಶ ಮಾಡಿತು. ಬುಧವಾರ ಸ್ವಿಗ್ಗಿಯ ಐಪಿಒ ಷೇರುಪೇಟೆಯಲ್ಲಿ ಲಿಸ್ಟಿ ಆಗಿದೆ. ಕಂಪನಿ ಪ್ರತಿ ಷೇರನ್ನು 390 ರು.ಗೆ ಬಿಡುಗಡೆ ಮಾಡಿದ್ದು, ಅದು ಶೇ.8ರಷ್ಟು ಹೆಚ್ಚು ಬೆಲೆಯೊಂದಿಗೆ ಲಿಸ್ಟ್ ಆಯಿತು. ದಿನದಂತ್ಯಕ್ಕೆ ಕಂಪನಿ ಷೇರುಗಳು ಶೇ.16ರಷ್ಟು ಏರಿಕೆಯೊಂದಿಗೆ 456ರಲ್ಲಿ ಕೊನೆಗೊಂಡಿತು. ಜೊತೆಗೆ ಕಂಪನಿಯ ಮಾರುಕಟ್ಟೆ ಮೌಲ್ಯ ಮೊದಲ ದಿನವೇ 1 ಲಕ್ಷ ಕೋಟಿ ರು. ದಾಟಿದೆ.
ಈ ನಡುವೆ ಸ್ವಿಗ್ಗಿ ತನ್ನ 500 ಹಾಲಿ ಮತ್ತು 5000 ಮಾಜಿ ಸಿಬ್ಬಂದಿಗಳಿಗೆ 9000 ಕೋಟಿ ರು. ಮೌಲ್ಯದ ಷೇರುಗಳನ್ನು ನೀಡಿತ್ತು. ಮಂಗಳವಾರ ಕಂಪನಿಯ ಷೇರುಬೆಲೆ ಉತ್ತಮ ಬೆಲೆಯೊಂದಿಗೆ ಲಿಸ್ಟ್ ಆದ ಬೆನ್ನಲ್ಲೇ 500 ಸಿಬ್ಬಂದಿ ಏಕಾಏಕಿ ಕೋಟ್ಯಧಿಪತಿಗಳಾಗಿ ಹೊರಹೊಮ್ಮಿದರು.
984 ಅಂಕ ಇಳಿದ ಸೆನ್ಸೆಕ್ಸ್ 4 ತಿಂಗಳ ಕನಿಷ್ಠಕ್ಕೆ: 2 ದಿನಕ್ಕೆ13 ಲಕ್ಷ ಕೋಟಿ ನಷ್ಟ
ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಮಂಗಳವಾರ 984 ಅಂಕಗಳ ಭಾರೀ ಕುಸಿತ ಕಮಡು 77690ರಲ್ಲಿ ಅಂತ್ಯವಾಗಿದೆ. ಇದು ಕಳೆದ 4 ತಿಂಗಳಲ್ಲೇ ಕನಿಷ್ಠ ಮೊತ್ತವಾಗಿದೆ. ಇನ್ನೊಂದೆಡೆ ನಿಫ್ಟಿ ಕೂಡಾ 324 ಅಂಕ ಇಳಿದು 23,559ರಲ್ಲಿ ಕೊನೆಯಾಗಿದೆ. ಕಳೆದ ಎರಡು ದಿನಗಳಲ್ಲಿ ಷೇರುಪೇಟೆ ಒಟ್ಟಾರೆ 1805 ಅಂಕ ಕುಸಿದು ಹೂಡಿಕೆದಾರರಿಗೆ 13 ಲಕ್ಷ ಕೋಟಿ ರು.ನಷ್ಟು ಭಾರೀ ನಷ್ಟವಾಗಿದೆ.ಜೊತೆಗೆ ಕಳೆದ 2 ತಿಂಗಳಲ್ಲಿ ಸೆನ್ಸೆಕ್ಸ್ 8300 ಅಂಕಗಳಷ್ಟು ಭಾರೀ ಕುಸಿಕ ಕಂಡಿರುವುದು ಹೂಡಿಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಳೆದ ಸೆ.27ರಂದು ಸೆನ್ಸೆಕ್ಸ್ ಸಾರ್ವಕಾಲಿಕ ಗರಿಷ್ಠ ಪ್ರಮಾಣವಾದ 85978 ಅಂಕಗಳಿಗೆ ತಲುಪಿತ್ತು.
ಚಿಲ್ಲರೆ ಹಣದುಬ್ಬರ 14 ತಿಂಗಳ ಗರಿಷ್ಠ ತಲುಪಿರುವುದು, ವಿದೇಶ ಹಣ ಹೊರಹರಿವು ಹೆಚ್ಚಳ, ಬ್ಯಾಂಕಿಂಗ್, ಆಟೋ ಷೇರುಗಳಲ್ಲಿನ ಮಾರಾಟವು ಮಾರುಕಟ್ಟೆ ಪತನಕ್ಕೆ ಕಾರಣವಾಗಿದೆ.
ಟಿಪ್ಪು ಸುಲ್ತಾನನ ಖಡ್ಗ ₹3.4 ಕೋಟಿಗೆ ಹರಾಜು
ಲಂಡನ್: 18ನೇ ಶತಮಾನದಲ್ಲಿ ಮೈಸೂರು ಆಳಿದ್ದ ಟಿಪ್ಪು ಸುಲ್ತಾನ್‌ಗೆ ಸೇರಿದ ಖಡ್ಗವೊಂದು ಲಂಡನ್‌ನಲ್ಲಿ 3.4 ಕೋಟಿ ರು.ಗೆ ಹರಾಜಾಗಿದೆ ಎಂದು ಬೋನ್‌ಹ್ಯಾಮ್ ಹರಾಜು ಸಂಸ್ಥೆ ಪ್ರಕಟಿಸಿದೆ. ಟಿಪ್ಪು ಕದನದಲ್ಲಿ ಸೋತ ನಂತರ ಆತನ ಖಡ್ಗವನ್ನು ಆಗಿನ ಬ್ರಿಟಿಷ್ ಸೇನೆಯ ಕ್ಯಾಪ್ಟನ್ ಜೇಮ್ಸ್ ಆಂಡ್ರ್ಯೂ ಡಿಕ್ ಎಂಬಾತನಿಗೆ ಅಧಿಕಾರಿಗಳು ಉಡುಗೊರೆಯಾಗಿ ನೀಡಿದ್ದರು. ಡಿಕ್ ಅವರ ವಂಶಸ್ಥರು ಈ ಖಡ್ಗವನ್ನು ಹರಾಜಿಗಿಟ್ಟಿದ್ದರು.1799ರಲ್ಲಿ ನಡೆದ ಶ್ರೀರಂಗಪಟ್ಟಣ ಕದನದಲ್ಲಿ ಟಿಪ್ಪು ಸುಲ್ತಾನ್ ಈ ಖಡ್ಗವನ್ನು ಬಳಸಿದ್ದನು ಎಂಬ ಉಲ್ಲೇಖವಿದೆ. ಈ ಖಡ್ಗವು ಉಕ್ಕಿನಿಂದ ತಯಾರಿಸಲಾಗಿದ್ದು, ಅರೆಬಿಕ್ ಭಾಷೆಯಲ್ಲಿ ‘ಹಾ’ ಎನ್ನುವ ಅಕ್ಷರನ್ನು ಚಿನ್ನದಿಂದ ಬರೆಸಲಾಗಿದೆ. ಈ ಅಕ್ಷರ ಹೈದರಾಲಿಯನ್ನು ಉಲ್ಲೇಖಿಸುತ್ತದೆ ಎಂದು ಇತಿಹಾಸ ತಜ್ಞರು ತಿಳಿಸಿದ್ದಾರೆ.
ಶಾರುಖ್, ಸಲ್ಮಾನ್ ಬಳಿಕ ಭೋಜ್‌ಪುರಿ ನಟಿ ಅಕ್ಷರಾಗೆ ಬೆದರಿಕೆ, 50 ಲಕ್ಷಕ್ಕೆ ಬೇಡಿಕೆ
ಪಟನಾ: ನಟರಾದ ಶಾರುಖ್, ಸಲ್ಮಾನ್ ಖಾನ್ ಬಳಿಕ ಇದೀಗ ಖ್ಯಾತ ಭೋಜ್‌ಪುರಿ ನಟಿ ನಟಿ ಅಕ್ಷರಾ ಸಿಂಗ್‌ಗೆ ಜೀವ ಬೆದರಿಕೆ ಹಾಕಲಾಗಿದೆ. ಸೋಮವಾರ ಅಕ್ಷರಾಗೆ ಎರಡು ಪ್ರತ್ಯೇಕ ಸಂಖ್ಯೆಗಳಿಂದ ಕರೆ ಮಾಡಿದ್ದ ಅನಾಮಿಕ ವ್ಯಕ್ತಿಯೊಬ್ಬ 50 ಲಕ್ಷ ರು. ಹಣ ನೀಡುವಂತೆ, ಇಲ್ಲದೇ ಹೋದಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ದನಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಷರಾ, ಭೋಜ್‌ಪುರಿ ಚಿತ್ರಗಳಲ್ಲಿ ಅತ್ಯಧಿಕ ಸಂಭಾವನೆ ಪಡೆವ ನಟಿಯಾಗಿದ್ದಾರೆ.