ಮೋದಿ ಸಾಧನೆ ಪ್ರಚಾರ ಮಾಡಿ ಚುನಾವಣೆ ಗೆಲ್ಲಿ: ನಡ್ಡಾ ಸಲಹೆ

| Published : Feb 25 2024, 01:45 AM IST / Updated: Feb 25 2024, 11:15 AM IST

modi

ಸಾರಾಂಶ

ಬಿಜೆಪಿ ನಾಯಕರು, ಕಾರ್ಯಕರ್ತರಿಗೆ ಚುನಾವಣೆ ಗೆಲ್ಲುವಂತೆ ಅಧ್ಯಕ್ಷ ನಡ್ಡಾ ತಾಕೀತು ಮಾಡಿದ್ದಾರೆ. ಈ ನಡುವೆ 5 ರಾಜ್ಯಗಳ ಟಿಕೆಟ್‌ ಹಂಚಿಕೆ ಬಗ್ಗೆ ನಾಯಕರ ಜೊತೆ ಅಮಿತ್‌ ಶಾ ಚರ್ಚೆ ನಡೆಸಿದ್ದಾರೆ.

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 370 ಸೀಟು ಗೆಲ್ಲಲು ಶತಾಯ ಗತಾಯ ಶ್ರಮಿಸಬೇಕು. ಇದಕ್ಕಾಗಿ ಮೋದಿ ಸರ್ಕಾರ ಕಳೆದ 10 ವರ್ಷದಲ್ಲಿ ಮಾಡಿದ ಸಾಧನೆಯನ್ನು ಜನರಿಗೆ ತಲುಪಿಸಬೇಕು. 

ಪಕ್ಷದ ಯಾರೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ವಿಪಕ್ಷಗಳು ತೋಡಿದ ಗುಂಡಿಗೆ ಬೀಳಬಾರದು ಎಂದು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಸೂಚಿಸಿದ್ದಾರೆ.

ಶನಿವಾರ ನಡ್ಡಾ ಅವರು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಜತೆಗೂಡಿ ಪಕ್ಷದ ಆಯಕಟ್ಟಿನ ಮುಖಂಡರ ಜತೆ ಮಾತುಕತೆ ನಡೆಸಿದರು. 

ಈ ವೇಳೆ ಎಲ್ಲ ಜಿಲ್ಲೆ, ತಾಲೂಕು ಮಟ್ಟದ ನಾಯಕರು ಹಾಗೂ ಕಾರ್ಯಕರ್ತರು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಮೋದಿ ಸರ್ಕಾರದ ಸಾಧನೆಯನ್ನು ಮನೆಮನೆಗೆ ತಲುಪಿಸಬೇಕು. 

ಪಕ್ಷ 370 ಸೀಟು ಗೆಲ್ಲುವಂತೆ ಮಾಡಲು ಶ್ರಮಿಸಬೇಕು ಎಂದು ನಡ್ಡಾ ತಾಕೀತು ಮಾಡಿದರು.ಇದೇ ವೇಳೆ, ಪಕ್ಷದ ಯಾರೂ ವಿವಾದಾತ್ಮಕ ಹೇಳಿಕೆ ನೀಡಿ ವಿಪಕ್ಷಗಳ ಬಾಯಿಗೆ ಆಹಾರವಾಗಬಾರದು. 

ಒಂದು ವೇಳೆ ಪಕ್ಷದ ವಿರುದ್ಧ ಭಾರಿ ಅಪಪ್ರಚಾರ ನಡೆದರೆ ಎಲ್ಲ ನಾಯಕರೂ ಆ ಸೂಕ್ತ ರೀತಿಯಲ್ಲಿ ನಿಭಾಯಿಸಿ ವಿಪಕ್ಷಗಳಿಗೆ ತಿರುಗೇಟು ನೀಡಬೇಕು ಎಂದೂ ಸೂಚಿಸಿದರು.

ಬಳಿಕ ಪಕ್ಷದ ಕಚೇರಿಗೆ ಆಗಮಿಸಿದ ಕೇಂದ್ರ ಸಚಿವ ಅಮಿತ್‌ ಶಾ ಅವರು, ನಡ್ಡಾ ಹಾಗೂ ಸಂತೋಷ್‌ ಜತೆಗೂಡಿ ಉತ್ತರ ಪ್ರದೇಶ ಸೇರಿ 5 ರಾಜ್ಯಗಳ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಹಾಗೂ ಚುನಾವಣಾ ಸಿದ್ಧತೆ ಬಗ್ಗೆ ಚರ್ಚೆ ನಡೆಸಿದರು.