ಸಾರಾಂಶ
ನವದೆಹಲಿ: ಸುಪ್ರೀಂಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿಗಳಾಗಿ ನ್ಯಾ.ಭೂಷಣ್ ರಾಮಕೃಷ್ಣ ಗವಾಯಿಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದ ಗಣತಂತ್ರ ಮಂಟಪದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ನೂತನ ಸಿಜೆಐಗೆ ಗೌಪ್ಯತೆಯ ಪ್ರಮಾಣ ಬೋಧಿಸಿದರು. ಬಳಿಕ ನ್ಯಾ.ಗವಾಯಿ, ತಮ್ಮ ತಾಯಿ ಕಮಲಾ ತಾಯ್ ಗವಾಯಿ ಅವರ ಪಾದ ಸ್ಪರ್ಶಿಸಿ ಆರ್ಶೀವಾದ ಪಡೆದುಕೊಂಡರು.
ದೇಶದ ಮೊದಲ ಬೌದ್ಧ ಸಿಜೆಐ ಎಂಬ ಹಿರಿಮೆಗೆ ಪಾತ್ರರಾಗಿರುವ ಗವಾಯಿ, ಮುಂದಿನ 6 ತಿಂಗಳ ಕಾಲ ಈ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ಹಿಂದಿನ ಸಿಜೆಐ ನ್ಯಾ.ಸಂಜೀವ್ ಖನ್ನಾ ಮಂಗಳವಾರ ನಿವೃತ್ತರಾಗಿದ್ದು ಅವರ ಹುದ್ದೆಯನ್ನು ನ್ಯಾ. ನೂತನ ಸಿಜೆಐ ತುಂಬಿದ್ದಾರೆ.
1960ರಲ್ಲಿ ಮಹಾರಾಷ್ಟ್ರ ಅಮರಾವತಿಯಲ್ಲಿ ಜನಿಸಿದ್ದ ನ್ಯಾ.ಗವಾಯ್ 2003ರಲ್ಲಿ ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ಜಡ್ಜ್, 2025ರಲ್ಲಿ ಪೂರ್ಣ ಪ್ರಮಾಣದ ಜಡ್ಜ್ ಆಗಿ ನೇಮಕಗೊಂಡಿದ್ದರು. 2019ರಲ್ಲಿ ಸುಪ್ರೀಂಕೋರ್ಟ್ ಜಡ್ಜ್ ಆಗಿ ಪದೋನ್ನತಿ ಹೊಂದಿದ್ದ ಇವರು, ಸಂವಿಧಾನದ 370ನೇ ವಿಧಿ ರದ್ದು, ಚುನಾವಣಾ ಬಾಂಡ್ ರದ್ದು, ನೋಟು ಅಪನಗದೀಕರಣ ಎತ್ತಿಹಿಡಿದ ಪ್ರಕರಣ, ರಾಜ್ಯಗಳಿಗೆ ಒಳಮೀಸಲಿನ ಅವಕಾಶ ಕಲ್ಪಿಸಿದ ತೀರ್ಪು ನೀಡಿದ ಪೀಠಗಳ ಭಾಗವಾಗಿದ್ದರು.ನ್ಯಾ.ಗವಾಯಿ ಅವರ ತಂದೆ, ಆರ್.ಎಸ್. ಗವಾಯಿ ಈ ಹಿಂದೆ ಬಿಹಾರ, ಕೇರಳ, ಸಿಕ್ಕಿಂನ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಜೊತೆಗೆ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ನಾಯಕರು ಕೂಡಾ ಆಗಿದ್ದರು.