ಜೂ.5ರಂದು ಬಿಡುಗಡೆಯಾಗುತ್ತಿರುವ ತಮ್ಮ ‘ಥಗ್ ಲೈಫ್’ ಚಿತ್ರದ ಪ್ರಚಾರದ ವೇಳೆ ನಟ ಕಮಲ್‌ ಹಾಸನ್‌ ಕನ್ನಡ ಭಾಷೆಯ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

- ನಟನ ಹೇಳಿಕೆಗೆ ಕನ್ನಡಿಗರ ವ್ಯಾಪಕ ಆಕ್ರೋಶ

----

- ಥಗ್‌ ಲೈಫ್ ಚಿತ್ರ ಪ್ರಚಾರದ ವೇಳೆ ಕಮಲ್‌ ಭಾಷಣ

- ಡಾ। ರಾಜ್‌, ಶಿವಣ್ಣ ಬಗ್ಗೆ ಮೊದಲು ಮೆಚ್ಚುಗೆ ಮಾತು

- ಬಳಿಕ ಕನ್ನಡದ ಕುರಿತು ವಿವಾದಾತ್ಮಕ ಹೇಳಿಕೆ

- ಶಿವರಾಜ್ ಕುಮಾರ್‌ ಸಮ್ಮುಖದಲ್ಲೇ ಕಮಲ್‌ ನುಡಿ

==

ಚೆನ್ನೈ: ಜೂ.5ರಂದು ಬಿಡುಗಡೆಯಾಗುತ್ತಿರುವ ತಮ್ಮ ‘ಥಗ್ ಲೈಫ್’ ಚಿತ್ರದ ಪ್ರಚಾರದ ವೇಳೆ ನಟ ಕಮಲ್‌ ಹಾಸನ್‌ ಕನ್ನಡ ಭಾಷೆಯ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಚೆನ್ನೈನಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಕಮಲ್‌, ‘ಕನ್ನಡ ಹುಟ್ಟಿರುವುದು ತಮಿಳು ಭಾಷೆಯಿಂದ’ ಎಂದು ಹೇಳಿದ್ದಾರೆ. ಅವರು ಹೀಗೆ ಹೇಳಿದಾಗ ಕನ್ನಡದ ಖ್ಯಾತ ನಟ ಶಿವರಾಜ್‌ ಕುಮಾರ್‌ ಕೂಡ ಉಪಸ್ಥಿತರಿದ್ದರು.

ನಟನ ಹೇಳಿಕೆಗೆ ತಮಿಳಿಗರಿಂದ ಬೆಂಬಲ ವ್ಯಕ್ತವಾಗುತ್ತಿದೆ. ಆದರೆ ಇದರಿಂದ ಕ್ರೋಧಿತರಾಗಿರುವ ಕನ್ನಡಿಗರು, ‘ಕನ್ನಡಕ್ಕೆ ತಮಿಳು ಮೂಲ ಅಲ್ಲ. ತಮಿಳಿಗಿಂತಲೂ ಕನ್ನಡ ಬಹಳ ಹಳೆಯ ಭಾಷೆ’ ಎಂದು ಹಾಸನ್‌ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಆಗಿದ್ದೇನು?:

ಚೆನ್ನೈನಲ್ಲಿ ಮಣಿರತ್ನಂ ನಿರ್ದೇಶನದ, ಕಮಲ್‌ ಹಾಸನ್‌ ನಟನೆಯ ಥಗ್ ಲೈಫ್ ಚಿತ್ರದ ಪ್ರಚಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ನಟ ಶಿವರಾಜ್‌ ಕುಮಾರ್‌ ಭಾಗವಹಿಸಿದ್ದರು ಹಾಗೂ ಕಮಲ್‌ ಅವರಿಗಾಗಿ ಹಾಡೊಂದನ್ನೂ ಹಾಡಿದ್ದರು.

ಇದಾದ ಬಳಿಕ ವೇದಿಕೆಯೇರಿದ ಕಮಲ್‌, ಕನ್ನಡದ ದಿಗ್ಗಜ ನಟರಾಗಿದ್ದ ಡಾ। ರಾಜ್‌ಕುಮಾರ್‌ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಅವರೊಂದಿಗಿನ ಸುದೀರ್ಘ ಒಡನಾಟವನ್ನು ಸ್ಮರಿಸುತ್ತಾ, ‘ಪ್ರತಿಭೆಯನ್ನು ಪ್ರೋತ್ಸಾಹಿಸುವ ಗುಣವನ್ನು ನಾನು ಅಣ್ಣಾವ್ರಿಂದ ಕಲಿತಿದ್ದೇನೆ. ನನ್ನ ಸಿನಿಮಾಗಳಿಗೆ ಕ್ಲ್ಯಾಪ್‌ ಮಾಡಿದ್ದಷ್ಟೇ ಅಲ್ಲದೆ, ನಟನೆ ಮೆಚ್ಚು ಬೆನ್ನು ತಟ್ಟಿದ್ದಾರೆ’ ಎಂದರು. ಅಂತೆಯೇ ಶಿವಣ್ಣನವರ ಬಗ್ಗೆ ಮಾತನಾಡುತ್ತಾ, ‘ಇವರು ಸೂಪರ್‌ಸ್ಟಾರ್‌ ಹೌದು, ಸೂಪರ್‌ಸ್ಟಾರ್‌ನ ಮಗನೂ ಹೌದು. ಆದರೆ ಇಲ್ಲಿಗೆ ನನ್ನ ಅಭಿಮಾನಿಯಾಗಿ ಬಂದಿದ್ದಾರೆ. ಇದಕ್ಕೆ ನಾನು ಚಿರಋುಣಿ’ ಎಂದರು.

ಮುಂದುವರಿದು ಮಾತನಾಡಿದ ಕಮಲ್‌, ‘ನಿಮ್ಮ ಕನ್ನಡ ಭಾಷೆ ಹುಟ್ಟಿದ್ದು ನಮ್ಮ ತಮಿಳಿನಿಂದ’ ಎಂದರು. ಅವರ ಈ ಒಂದು ನುಡಿ ಭಾರೀ ವಿವಾದಕ್ಕೆ ಎಡೆಮಾಡಿದೆ.