ಸಾರಾಂಶ
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ನಡುವೆ ನಡೆದ 90 ನಿಮಿಷಗಳ ಚರ್ಚೆಯು ವಾಕ್ಸಮರಕ್ಕೆ ಸಾಕ್ಷಿಯಾಯಿತು.
ವಾಷಿಂಗ್ಟನ್ : ವರ್ಷಾಂತ್ಯಕ್ಕೆ ಚುನಾವಣೆ ಎದುರಿಸುತ್ತಿರುವ ಅಮೆರಿಕವು ಮಂಗಳವಾರ ತಡರಾತ್ರಿ (ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ) 90 ನಿಮಿಷಗಳ ಅಪರೂಪದ ಅಧ್ಯಕ್ಷೀಯ ಚರ್ಚಾ ವಾಕ್ಸಮರಕ್ಕೆ ಸಾಕ್ಷಿ ಆಯಿತು. ರಿಪಬ್ಲಿಕನ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಹಾಗೂ ಡೆಮಾಕ್ರೆಟಿಕ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಾದ-ಪ್ರತಿವಾದ ನಡೆಸಿದರು.
‘ಈಗಾಗಲೇ ಜೋ ಬೈಡೆನ್ ಅಮೆರಿಕದ ಅತಿ ಕೆಟ್ಟ ಅಧ್ಯಕ್ಷನಾಗಿ ಹೊರಹೊಮ್ಮಿದ್ದಾರೆ. ಇನ್ನು ಡೆಮಾಕ್ರೆಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ಮಾರ್ಕ್ಸ್‌ವಾದಿ ಆಗಿದ್ದು, ಅವರು ಅಮೆರಿಕ ಅಧ್ಯಕ್ಷೆ ಆದರೆ ದೇಶವನ್ನೇ ಹಾಳು ಮಾಡುತ್ತಾರೆ’ ಎಂದು ಟ್ರಂಪ್ ಕುಟುಕಿದರು. ಆದರೆ ಇದಕ್ಕೆ ತಿರುಗೇಟು ನೀಡಿದ ಕಮಲಾ, ‘ನೀವು ಹಳೆಯ ಸರ್ಕಾರದ ಬಗ್ಗೆ ಟೀಕೆ ನಿಲ್ಲಿಸಿ. ನೀವು ಬೈಡೆನ್ ಅಲ್ಲ, ಕಮಲಾ ವಿರುದ್ಧ ಸ್ಪರ್ಧಿಸಿದ್ದೇನೆ ಎಂಬುದನ್ನು ನೆನಪಿಸಿಕೊಳ್ಳಿ’ ಎಂದಿದ್ದು, ಟ್ರಂಪ್ ಅಧ್ಯಕ್ಷರಾದರೆ ಅನೇಕ ಜನಪರ ಕಾನೂನುಗಳನ್ನು ರದ್ದು ಮಾಡಲಿದ್ದಾರೆ ಎಂದು ಜನೆಗೆ ಎಚ್ಚರಿಸಿದರು.
ಎಬಿಸಿ ನ್ಯೂಸ್‌ನಲ್ಲಿ ಪ್ರಸಾರವಾದ ಚರ್ಚೆಯಲ್ಲಿ ಮಾತನಾಡಿದ ಟ್ರಂಪ್, ‘ಬೈಡೆನ್ ಈ ದೇಶ ಕಂಡ ಅತಿ ಕೆಟ್ಟ ಅಧ್ಯಕ್ಷ ಹಾಗೂ ಕಮಲಾ ಈ ದೇಶ ಕಂಡ ಕೆಟ್ಟ ಉಪಾಧ್ಯಕ್ಷೆ. ಕಮಲಾ ತಾವು ಅಮೆರಿಕವನ್ನು 5 ವರ್ಷದಲ್ಲಿ ಅಭಿವೃದ್ಧಿ ಮಾಡಿದ್ದೇವೆ ಎಂದು ನೀಡಿದ ಹೇಳಿಕೆ ಸುಳ್ಳು. ಅವರು ಅಧ್ಯಕ್ಷೆ ಆದರೆ ದೇಶವನ್ನು ಹಾಳು ಮಾಡಲಿದ್ದಾರೆ’ ಎಂದರು.
ಇದಕ್ಕೆ ತಿರುಗೇಟು ನೀಡಿದ ಕಮಲಾ, ‘ಹಳೆಯದನ್ನು ಕೆದಕಿದರೆ ಪ್ರಯೋಜನವಿಲ್ಲ. ನಾವು ಭವಿಷ್ಯದ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ. ನೀವು ಬೈಡೆನ್ ಆಡಳಿತ ವಿಫಲವಾಗಿದೆ ಎಂದಿದ್ದೀರಿ. ಆದರೆ ಬೈಡೆನ್ ಅಭ್ಯರ್ಥಿ ಅಲ್ಲ. ನಾನು ಅಭ್ಯರ್ಥಿ. ನಾನು ಅಧ್ಯಕ್ಷೆ ಆದರೆ ಅಮೆರಿಕ ಮಹಿಳೆಯರನ್ನು ಕಾಡುತ್ತಿರುವ ಗರ್ಭಪಾತದ ಪರ ಕಾನೂನು ತರುವೆ. ವಲಸಿಗರ ಸ್ಥಿತಿ ಹಾಗೂ ಆರ್ಥಿಕ ಸ್ಥಿತಿ ಸುಧಾರಣೆಗೆ ಕೆಲಸ ಮಾಡುವೆ. ಉಕ್ರೇನ್-ರಷ್ಯಾ ಹಾಗೂ ಇಸ್ರೇಲ್ ಯುದ್ಧದ ಅಂತ್ಯಕ್ಕೆ ಶ್ರಮಿಸುವೆ’ ಎಂದರು. ಅಲ್ಲದೆ, ವಿಶ್ವ ನಾಯಕರು ಟ್ರಂಪ್ ನಿಲುವುಗಳನ್ನು ನೋಡಿ ನಗುತ್ತಿದ್ದಾರೆ. ‘ಪಂಚ್’ ಕೊಟ್ಟಿಲ್ಲ ಅಷ್ಟೇ’ ಎಂದು ವ್ಯಂಗ್ಯವಾಡಿದರು.
ಪುಟಿನ್ ನಿಮ್ಮನ್ನು ತಿಂದು ಹಾಕ್ತಾರೆ: ಕಮಲಾ ವ್ಯಂಗ್ಯ
‘ನಾನು ಅಧ್ಯಕ್ಷನಾದರೆ ಉಕ್ರೇನ್-ರಷ್ಯಾ ಯುದ್ಧ ನಿಲ್ಲಿಸಲು ಮಧ್ಯಸ್ಥಿಕೆ ವಹಿಸುವೆ’ ಎಂದು ಡೊನಾಲ್ಡ್ ಟ್ರಂಪ್ ಹೇಳಿದರು. ಇದಕ್ಕೆ ತಿರುಗೇಟು ನೀಡಿದ ಕಮಲಾ, ‘ನೀವು ಯಾವಾಗಲೂ ಸರ್ವಾಧಿಕಾರಿಗಳ ಪರ ಎಂಬುದು ಗೊತ್ತು. ಹಿಂದೆ ಕೊರಿಯಾದ ಕಿಮ್ ಜಾಂಗ್ ಉನ್ ಜತೆಗೂ ಅನ್ಯೋನ್ಯವಾಗಿದ್ದಿರಿ. ಉಕ್ರೇನ್ ಅನ್ನು ಆಕ್ರಮಿಸಿ ಇಡೀ ಯುರೋಪ್ ಬೇಕು ಎಂದು ಹೇಳುತ್ತಾರೆ. ಸ್ನೇಹಕ್ಕೆ ಕಟ್ಟುಬಿದ್ದು ಅದಕ್ಕೂ ಹೂಂ ಅಂತೀರಿ. ಕೊನೆಗೆ ಪುಟಿನ್ ನಿಮ್ಮನ್ನೇ ತಿಂದು ಹಾಕ್ತಾರೆ’ ಎಂದು ಕಮಲಾ ಕುಟುಕಿದರು.
ಇನ್ನು ಇಸ್ರೇಲ್-ಹಮಾಸ್ ಯುದ್ಧದ ಬಗ್ಗೆಯೂ ಚರ್ಚೆ ನಡೆದು, ‘ಕಮಲಾ ಇಸ್ರೇಲ್ ವಿರೋಧಿ’ ಎಂದು ಟ್ರಂಪ್ ಆರೋಪಿಸಿದರು. ಆದರೆ ನಾವು ಕದನವಿರಾಮದ ಪರ ಇದ್ದೇವೆ ಎಂದು ಕಮಲಾ ಸ್ಪಷ್ಟಪಡಿಸಿದರು.
ಗರ್ಭಪಾತ ಕಾಯ್ದೆ ಪರ ಕಮಲಾ ವಾದ
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾದರೆ ಗರ್ಭಪಾತ ನಿಷೇಧ ಕಾಯ್ದೆ ಜಾರಿಗೆ ತರುತ್ತಾರೆ. ಆದರೆ ನಾನು ಇದಕ್ಕೆ ಅವಕಾಶ ನೀಡಲ್ಲ. ಅನಿವಾರ್ಯ ಸಂದರ್ಭದಲ್ಲಿ ಗರ್ಭಪಾತ ಮಾಡಿಸಿಕೊಳ್ಳಲು ಅನುಕೂಲವಾದ ನಿಯಮ ಜಾರಿಗೆ ತರುವೆ ಎಂದು ಕಮಲಾ ಹ್ಯಾರಿಸ್ ಹೇಳಿದರು.
ಇದಕ್ಕೆ ತಿರುಗೇಟು ನೀಡಿದ ಟ್ರಂಪ್. ‘2022ರಲ್ಲಿ ಸುಪ್ರೀಂ ಕೋರ್ಟು ಗರ್ಭಪಾತದ ವಿಚಾರವನ್ನು ರಾಜ್ಯಗಳ ವಿವೇಚನೆಗೆ ಬಿಟ್ಟಿದೆ. ಅದನ್ನು ಪಾಲಿಸೋಣ’ ಎಂದರು.
‘ವಲಸಿಗರು ನಾಯಿ ಬೆಕ್ಕು ತಿಂತಾರೆ’ ಎಂದು ಸುಳ್ಳು ಹೇಳಿದ ಟ್ರಂಪ್
‘ದೇಶದಲ್ಲಿ ಅಕ್ರಮ ವಲಸಿಗರ ಸಮಸ್ಯೆ ಕಾಡುತ್ತಿದೆ. ವಲಸಿಗರ ಮೇಲೆ ನಿರ್ಬಂಧ ಹೇರಬೇಕು’ ಎಂದು ಹೇಳುವ ಭರದಲ್ಲಿ ಟ್ರಂಪ್ ಅವರು, ‘ವಲಸಿಗರು ಸ್ಪ್ರಿಂಗ್‌ಫೀಲ್ಡ್‌ನಲ್ಲಿ ನಾಯಿ ಬೆಕ್ಕುಗಳನ್ನು ತಿನ್ನುತ್ತಿದ್ದಾರೆ’ ಎಂದು ಆರೋಪಿಸಿದರು. ಕೂಡಲೇ ಎಬಿಸಿ ನಿರೂಪಕರು ‘ಇದು ಸುಳ್ಳು ಸುದ್ದಿ’ ಎಂದು ಸ್ಪಷ್ಟಪಡಿಸಿದರು. ‘ನಂತರ ಟೀವಿಯಲ್ಲಿ ಆ ರೀತಿಯ ವರದಿ ನೋಡಿದ್ದೇನೆ’ ಎಂದ ಟ್ರಂಪ್ ಹಾರಿಕೆ ಉತ್ತರ ನೀಡಿದರು.
ಹಸ್ತಲಾಘವದಿಂದ ಚರ್ಚೆ ಆರಂಭ- ನಂತರ ವಾಕ್ಸಮರ
ಎಬಿಸಿ ನ್ಯೂಸ್ ನಡೆಸಿಕೊಟ್ಟ ಈ ಬಹಿರಂಗ ಅಧ್ಯಕ್ಷೀಯ ಚರ್ಚೆ ಕಮಲಾ ಹ್ಯಾರಿಸ್-ಡೊನಾಲ್ಡ್ ಟ್ರಂಪ್ ನಡುವಿನ ಮೊದಲ ಚರ್ಚೆ ಆಗಿತ್ತು. ಇಬ್ಬರೂ ಮೊದಲ ಸಲ ಮುಖಾಮುಖಿ ಆದ ಕಾರಣ ಇವರು ಹೇಗೆ ವರ್ತಿಸುವರು ಎಂಬ ಕುತೂಹಲ ಇತ್ತು. ಆದರೆ ಮೊದಲು ಇಬ್ಬರೂ ನಗುತ್ತ ಹಸ್ತಲಾಘವ ಮಾಡಿದರು. ನಂತರ ತೀವ್ರ ವಾಕ್ಸಮರ ನಡೆಸಿದರು.
ಚರ್ಚೆಯಲ್ಲಿ ಕಮಲಾ ಮೇಲುಗೈ: ವಿಶ್ಲೇಷಕರು
ಎಬಿಸಿ ನ್ಯೂಸ್ ನಡೆಸಿಕೊಟ್ಟ ಈ ಅಧ್ಯಕ್ಷೀಯ ಚರ್ಚೆಯಲ್ಲಿ ಕಮಲಾ ಸಾಕಷ್ಟು ಉತ್ತಮ ವಾದಗಳನ್ನು ಮಾಡಿ ಮೇಲುಗೈ ಸಾಧಿಸಿದ್ದಾರೆ ಎಂದು ಫಾಕ್ಸ್ ನ್ಯೂಸ್ ಹಾಗೂ ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ. ಈ ಮುಂಚೆ ಟ್ರಂಪ್-ಬೈಡೆನ್ ನಡುವಿನ ಚರ್ಚೆಯಲ್ಲಿ ಟ್ರಂಪ್ ಅರಳು ಮರುಳಾದಂತೆ ವರ್ತಿಸಿ ಭಾರಿ ಹಿನ್ನಡೆ ಕಂಡಿದ್ದರು.