ಕಮಲ್‌ನಾಥ್‌ ಜೊತೆ 20 ಕಾಂಗ್ರೆಸ್‌ ಶಾಸಕರೂ ಬಿಜೆಪಿಗೆ?

| Published : Feb 19 2024, 01:31 AM IST

ಸಾರಾಂಶ

ಒಂದಾಗಿ ದೆಹಲಿಗೆ ಆಗಮಿಸಿದ ಕಾಂಗ್ರೆಸ್ ಶಾಸಕರು, 4 ಮೇಯರ್‌ಗಳು ಕಮಲ್‌ನಾಥ್‌ ಜೊತೆಗೆ ಒಟ್ಟಾಗಿ ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ.

ಭೋಪಾಲ್‌/ನವದೆಹಲಿ: ಹಿರಿಯ ಕಾಂಗ್ರೆಸ್‌ ನಾಯಕ ಕಮಲ್‌ನಾಥ್‌ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುವುದು ಖಚಿತ ಎಂಬ ವದಂತಿಗಳ ನಡುವೆಯೇ ಮಧ್ಯಪ್ರದೇಶ 20ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್‌ ತೊರೆಯಲು ಸಜ್ಜಾಗಿದ್ದಾರೆ. ಈ ಪೈಕಿ ಈಗಾಗಲೇ 15ಕ್ಕೂ ಹೆಚ್ಚು ಶಾಸಕರು ಶಾಸಕರು ಮತ್ತು 4 ನಗರಗಳ ಮೇಯರ್‌ಗಳು ದಿಢೀರನೆ ದೆಹಲಿಗೆ ತಲುಪಿದ್ದಾರೆ ಎಂದು ವರದಿಗಳು ತಿಳಿಸಿವೆ.ಹಾಲಿ 230 ಸದಸ್ಯಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್‌ 66 ಸ್ಥಾನ ಹೊಂದಿದೆ. ಈ ಪೈಕಿ 20ಕ್ಕೂ ಹೆಚ್ಚು ಶಾಸಕರನ್ನು ತಮ್ಮ ಜೊತೆ ಕರೆದೊಯ್ಯಲು ಕಮಲ್‌ನಾಥ್‌ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.ಈಗಾಗಲೇ ತಮ್ಮ ನಾಯಕನ ಜೊತೆ ಬಿಜೆಪಿ ಸೇರಲು ಸಮ್ಮತಿಸಿರುವ ಕಾಂಗ್ರೆಸ್‌ ಶಾಸಕರು ಭಾನುವಾರ ದೆಹಲಿಗೆ ತಲುಪಿದ್ದಾರೆ. ಹೀಗೆ ದೆಹಲಿಗೆ ಆಗಮಿಸಿರುವ ಶಾಸಕರು ಮೊಬೈಲ್‌ ಸ್ವಿಚಾಫ್‌ ಮಾಡಿಕೊಂಡಿದ್ದು ಯಾರ ಸಂಪರ್ಕಕ್ಕೂ ಸಿಕ್ಕುತ್ತಿಲ್ಲ. ಈ ಎಲ್ಲಾ ಬೆಳವಣಿಗೆಗಳು ಕಾಂಗ್ರೆಸ್‌ ನಾಯಕರು ದೊಡ್ಡಮಟದಲ್ಲಿ ಬಿಜೆಪಿಗೆ ವಲಸೆ ಹೋಗುವುದರ ಸಂಕೇತ ಎನ್ನಲಾಗಿದೆ.9 ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ, ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿರುವ ಕಮಲ್‌ನಾಥ್‌ ಹಾಲಿ ಛಿಂಡ್ವಾರಾ ವಿಧಾನಸಭಾ ಕ್ಷೇತ್ರದ ಶಾಸಕರೂ ಹೌದು. ಈ ವಲಯದಲ್ಲಿ ಅವರು ಭಾರೀ ಪ್ರಭಾವಿಯಾಗಿದ್ದು, ತಮ್ಮ ದೊಡ್ಡ ಬೆಂಬಲಿಗರ ಪಡೆಯೊಂದಿಗೆ ಬಿಜೆಪಿ ಸೇರಿ ಕಾಂಗ್ರೆಸ್‌ಗೆ ದೊಡ್ಡಮಟ್ಟಿನ ಶಾಕ್‌ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.2020ರ ಮಾರ್ಚ್‌ನಲ್ಲೂ ಆಗ ಕಾಂಗ್ರೆಸ್‌ನಲ್ಲಿದ್ದ ಜ್ಯೋತಿರಾಧಿತ್ಯ ಸಿಂಧಿಯಾ ತಮ್ಮ ಬೆಂಬಲಿಗ ಶಾಸಕರೊಡಗೂಡಿ ಬಿಜೆಪಿ ಸೇರಿದ್ದರು. ಪರಿಣಾಮ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಕುಸಿದುಬಿದ್ದಿತ್ತು.