ಭೀಕರ ರೈಲು ದುರಂತಕ್ಕೆ 9 ಬಲಿ : 60 ಜನರಿಗೆ ಗಾಯ

| Published : Jun 18 2024, 12:57 AM IST / Updated: Jun 18 2024, 05:14 AM IST

ಸಾರಾಂಶ

ಬಂಗಾಳದಲ್ಲಿ ಪ್ರಯಾಣಿಕ ರೈಲಿಗೆ ಹಿಂದಿನಿಂದ ಗೂಡ್ಸ್‌ ರೈಲು ಡಿಕ್ಕಿ ಹೊಡೆದಿದ್ದು, 60ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ. ಸಿಗ್ನಲ್‌ ವೈಫಲ್ಯದಿಂದ ದುರಂತ ಸಂಭವಿಸಿರುವ ಶಂಕೆ ವ್ಯಕ್ತವಾಗಿದ್ದು,  ದುರಂತದಲ್ಲಿ 9ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

 ನ್ಯೂ ಜಲಪೈಗುರಿ/ಕೋಲ್ಕತಾ :  ಕಳೆದ ವರ್ಷ 300 ಜನರ ಬಲಿಪಡೆದ ಒಡಿಶಾ ರೈಲು ಅಪಘಾತ ಇನ್ನೂ ಜನಮಾನಸದಲ್ಲಿ ಇರುವಾಗಲೇ ಮತ್ತೊಂದು ಘೋರ ರೈಲು ಅಪಘಾತ ಸಂಭವಿಸಿದೆ. ಕಾಂಚನಜುಂಗಾ ಎಕ್ಸ್‌ಪ್ರೆಸ್‌ ರೈಲಿಗೆ ಗೂಡ್ಸ್‌ ರೈಲು ಹಿಂದಿನಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ 9 ಜನರು ಸಾವನ್ನಪ್ಪಿ, 60 ಜನರು ಗಾಯಗೊಂಡ ಘಟನೆ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ ಜಿಲ್ಲೆಯ ರಂಗಾಪಾನಿ ನಿಲ್ದಾಣದ ಸಮೀಪ ನಡೆದಿದೆ. 

ಮೃತರಲ್ಲಿ ಗೂಡ್ಸ್‌ ರೈಲಿನ ಇಬ್ಬರೂ ಚಾಲಕರು, ಎಕ್ಸ್‌ಪ್ರೆಸ್‌ ರೈಲಿನ ಗಾರ್ಡ್‌ ಕೂಡಾ ಸೇರಿದ್ದಾರೆ. ಗಾಯಾಳುಗಳನ್ನು ಉತ್ತರ ಬಂಗಾಳ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರು ಪರಿಸ್ಥಿತಿ ಗಂಭೀರವಾಗಿರುವ ಕಾರಣ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಭೀತಿ ಇದೆ.ಘಟನಾ ಸ್ಥಳಕ್ಕೆ ವಿಪತ್ತು ಪರಿಹಾರ ತಂಡಗಳು ಧಾವಿಸಿದ್ದು, ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ಅಪಘಾತದಲ್ಲಿ ಮಡಿದವರ ಕುಟುಂಬಗಳಿಗೆ ರೈಲ್ವೆ ಸಚಿವಾಲಯ ತಲಾ 10 ಲಕ್ಷ ರು. ಮತ್ತು ಗಾಯಗೊಂಡವರಿಗೆ ತಲಾ 2.5 ಲಕ್ಷ ರು. ಪರಿಹಾರ ಪ್ರಕಟಿಸಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಪಘಾತ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಕಾರಣ ಏನು?:ಘಟನಾ ಸ್ಥಳದಲ್ಲಿ ಬೆಳಗ್ಗೆ 5.50ರಿಂದ ಸಿಗ್ನಲ್‌ ವೈಫಲ್ಯವಾಗಿತ್ತು. ಸಿಗ್ನಲ್‌ ವೈಫಲ್ಯ ಆದಾಗ ರೆಡ್‌ ಸಿಗ್ನಲ್‌ ಇದ್ದರೂ ಸಂಚರಿಸಲು ಸಮೀಪದ ರೈಲು ನಿಲ್ದಾಣದ ಸ್ಟೇಷನ್‌ ಮಾಸ್ಡರ್‌ ‘ಟಎ 912’ ಹೆಸರಿನ ಅನುಮತಿ ಪತ್ರವನ್ನು ರೈಲು ಚಾಲಕರಿಗೆ ನೀಡುತ್ತಾರೆ. ಏಕಕಾಲಕ್ಕೆ ಗೂಡ್ಸ್‌ ಹಾಗೂ ಕಾಂಚನಜುಂಗಾ ರೈಲು ಚಾಲಕರಿಗೆ ಈ ಪ್ರಮಾಣಪತ್ರ ವಿತರಿಸಿದ್ದೇ ಅಪಘಾತಕ್ಕೆ ನಾಂದಿ ಹಾಡಿರಬಹುದು ಎನ್ನಲಾಗಿದೆ. ಈ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ರೈಲ್ವೆ ಸುರಕ್ಷತಾ ಆಯುಕ್ತರಿಂದ ತನಿಖೆಗೆ ಆದೇಶಿಸಿದ್ದಾರೆ.

ಏನಾಯ್ತು?:

ಅಗರ್ತಾಲಾದಿಂದ ಸಿಯಾಲ್‌ದಹದಿಂದ ಹೊರಟಿದ್ದ ಕಾಂಚನಜುಂಗಾ ಪ್ರಯಾಣಿಕ ರೈಲು ನ್ಯೂ ಜಲಪೈಗುರಿಯಿಂದ 30 ಕಿ.ಮೀ. ದೂರದಲ್ಲಿರುವ ರಂಗಾಪಾನಿ ನಿಲ್ದಾಣ ದಾಟಿ, ಒಂದು ಸ್ಥಳದಲ್ಲಿ ನಿಂತಿತ್ತು. ಇದೇ ವೇಳೆ ಸೋಮವಾರ ಬೆಳಗ್ಗೆ 9 ಗಂಟೆ ವೇಳೆಗೆ ಅದೇ ಮಾರ್ಗದಲ್ಲಿ ಹಿಂದಿನಿಂದ ಬಂದ ಸರಕು ಸಾಗಣೆ ರೈಲು ರಭಸವಾಗಿ ಕಾಂಚನಜುಂಗಾ ರೈಲಿನ ಹಿಂಭಾಗದ ಬೋಗಿಗಳಿಗೆ ಅಪ್ಪಳಿಸಿದೆ. ಈ ರಭಸಕ್ಕೆ ಪ್ರಯಾಣಿಕ ರೈಲಿನ ಎರಡು ಬೋಗಿಗಳು ಹಳಿ ತಪ್ಪಿ ಉರುಳಿಬಿದ್ದರೆ, ಇನ್ನೊಂದು ಬೋಗಿ, ಸರಕು ರೈಲಿನ ಅಡಿಯಲ್ಲಿ ಸಿಕ್ಕಿಹಾಕಿಕೊಂಡು ಗಾಳಿಯಲ್ಲಿ ತೇಲಾಡುತ್ತಾ ನಿಂತಿದೆ.ಎರಡೂ ರೈಲುಗಳ ನಡುವಿನ ಡಿಕ್ಕಿಯ ರಭಸಕ್ಕೆ ಸರಕು ಸಾಗಣೆ ರೈಲಿನ ಇಬ್ಬರೂ ಚಾಲಕರು, ಕಾಂಚನಜುಂಗಾ ರೈಲಿನ ಹಿಂದಿನ ಬೋಗಿಯಲ್ಲಿ ಇರುವ ಗಾರ್ಡ್‌ ಸೇರಿದಂತೆ ಹಲವರು ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳದಲ್ಲಿ ಪ್ರತಿಕೂಲ ಹವಾಮಾನ ಇರುವ ಕಾರಣ ಪರಿಹಾರ ಕಾರ್ಯಗಳಿಗೆ ಅಡ್ಡಿಯಾಗಿದೆ. ಜೊತೆಗೆ ಈ ಮಾರ್ಗದಲ್ಲಿ ಸಂಚರಿಸುವ ಕೆಲ ದೂರಮಾರ್ಗದ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.ಕಳೆದ ವರ್ಷ ಒಡಿಶಾದ ಬಾಹಾನಗಾ ಬಜಾರ್‌ ರೈಲು ನಿಲ್ದಾಣದ ಬಳಿ ಸಂಭವಿಸಿದ ರೈಲು ಅಪಘಾತದಲ್ಲಿ 300 ಜನರು ಸಾವನ್ನಪ್ಪಿ, 1000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

 ಎಲ್ಲಿ?

ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿಯಿಂದ 30 ಕಿ.ಮೀ. ದೂರದ ಡಾರ್ಜೀಲಿಂಗ್‌ ಜಿಲ್ಲೆಯ ರಂಗಾಪಾನಿ ರೈಲ್ವೆ ನಿಲ್ದಾಣದ ಸಮೀಪ

ಯಾವಾಗ? ಸೋಮವಾರ ಬೆಳಿಗ್ಗೆ 9 ಗಂಟೆಯ ವೇಳೆಯಲ್ಲಿ

ಏನಾಯ್ತು? ಹಳಿಯಲ್ಲಿ ನಿಂತಿದ್ದ ಕಾಂಚನಜುಂಗಾ ಎಕ್ಸ್‌ಪ್ರೆಸ್‌ ರೈಲಿಗೆ ಹಿಂದಿನಿಂದ ಬಂದ ಗೂಡ್ಸ್‌ ರೈಲು ಡಿಕ್ಕಿ. ಪ್ಯಾಸೆಂಜರ್‌ ರೈಲಿನ ಎರಡು ಬೋಗಿಗಳು ಹಳಿ ತಪ್ಪಿ ಉರುಳಿ ಬಿದ್ದು ಸಾವು    ನೋವು