ಸಾರಾಂಶ
ವಡೋದರಾ: ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿಗಳ ದೋಣಿಯೊಂದು ಮಗುಚಿದ ಪರಿಣಾಮ 14 ವಿದ್ಯಾರ್ಥಿಗಳು ಹಾಗೂ ಇಬ್ಬರು ಶಿಕ್ಷಕರು ಮೃತಪಟ್ಟ ದಾರುಣ ಘಟನೆ ಗುಜರಾತ್‌ನ ವಡೋದರಾದಲ್ಲಿ ಗುರುವಾರ ನಡೆದಿದೆ.
ಖಾಸಗಿ ಶಾಲೆಯೊಂದರ 23 ವಿದ್ಯಾರ್ಥಿಗಳು ಹಾಗೂ ನಾಲ್ವರು ಶಿಕ್ಷಕರು ಪಿಕ್‌ನಿಕ್‌ಗೆ ತೆರಳಿದ್ದ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಹರ್ನಿ ಸರೋವರದಲ್ಲಿ ದೋಣಿ ತಲೆಕೆಳಗಾಗಿದ್ದು, ದೋಣಿಯಲ್ಲಿದ್ದ ಎಲ್ಲರೂ ನೀರಿನಲ್ಲಿ ಮುಳುಗಿದ್ದಾರೆ.
ಈ ಪೈಕಿ ಇಬ್ಬರು ಶಿಕ್ಷಕರು, 14 ಮಕ್ಕಳು ಸೇರಿ 16 ಮಂದಿ ಮೃತಪಟ್ಟಿದ್ದಾರೆ. ಓರ್ವ ವಿದ್ಯಾರ್ಥಿಯನ್ನು ರಕ್ಷಿಸಲಾಗಿದೆ. ನಾಪತ್ತೆಯಾಗಿರುವ ಉಳಿದಿರುವವರಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೋಣಿಯಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ ಯಾರೂ ಸಹ ಲೈಫ್ ಜಾಕೆಟ್ ಧರಿಸಿರಲಿಲ್ಲ. ಹೀಗಾಗಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದುರಂತ ಸಂಭವಿಸಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸುವ ಮೊದಲೇ ಸ್ಥಳೀಯರು ಒಂದಷ್ಟು ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೋದಿ ಸಂತಾಪ: ವಿದ್ಯಾರ್ಥಿಗಳ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದು, ‘ಹರ್ನಿ ಸರೋವರದಲ್ಲಿ ದೋಣಿ ಮಗುಚಿ ವಿದ್ಯಾರ್ಥಿಗಳು ಸಾವಿಗೀಡಾದ ಘಟನೆಯಿಂದ ಆಘಾತವಾಗಿದೆ.
ಗಾಯಗೊಂಡವರು ಬೇಗ ಗುಣಮುಖರಾಗಲಿ ಎಂದು ಆಶಿಸುತ್ತೇನೆ. ತೊಂದರೆಗೊಳಗಾದವರಿಗೆ ಸ್ಥಳೀಯ ಆಡಳಿತ ಅಗತ್ಯ ನೆರವನ್ನು ಒದಗಿಸುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಅಲ್ಲದೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ರು. ಮತ್ತು ಗಾಯಗೊಂಡವರಿಗೆ 50 ಸಾವಿರ ರು. ಪರಿಹಾರ ಘೋಷಣೆ ಮಾಡಿದ್ದಾರೆ.
ಲೈಫ್ ಜಾಕೆಟ್ ಧರಿಸದೇ ಬೋಟಿಂಗ್ ಕರೆದೊಯ್ದ ಕಾರಣದಿಂದಲೇ ದುರಂತದ ಪ್ರಮಾಣ ಹೆಚ್ಚಾಗಿದೆ ಎಂಬ ಆರೋಪಗಳ ಬೆನ್ನಲ್ಲೇ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆಯೂರ್ ರೊಕಾಡಿಯಾ ಹೇಳಿದ್ದಾರೆ.
ಕಳೆದ ವರ್ಷ ಕೇರಳದ ಮಲ್ಲಪುರಂ ಜಿಲ್ಲೆಯಲ್ಲೂ ಬೋಟ್ ದುರಂತ ಸಂಭವಿಸಿ 20 ಮಂದಿ ಮೃತಪಟ್ಟಿದ್ದರು.