ಸಾರಾಂಶ
ಸಕ್ಕರೆಯ ಒಟ್ಟು ಉತ್ಪಾದನೆ ಪೈಕಿ ಶೇ.20ರಷ್ಟನ್ನು ಭಾರತದಲ್ಲಿ ತಯಾರಿಸಿದ ಸೆಣಬಿನ ಚೀಲಗಳಲ್ಲಿ ಪ್ಯಾಕಿಂಗ್ ಮಾಡುವುದನ್ನು ಕಡ್ಡಾಯಗೊಳಿಸಿ ಕೇಂದ್ರ ಜವಳಿ ಸಚಿವಾಲಯ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಬೆಂಗಳೂರು: ಸಕ್ಕರೆಯ ಒಟ್ಟು ಉತ್ಪಾದನೆ ಪೈಕಿ ಶೇ.20ರಷ್ಟನ್ನು ಭಾರತದಲ್ಲಿ ತಯಾರಿಸಿದ ಸೆಣಬಿನ ಚೀಲಗಳಲ್ಲಿ ಪ್ಯಾಕಿಂಗ್ ಮಾಡುವುದನ್ನು ಕಡ್ಡಾಯಗೊಳಿಸಿ ಕೇಂದ್ರ ಜವಳಿ ಸಚಿವಾಲಯ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಈ ಕುರಿತು ಕೇಂದ್ರ ಜವಳಿ ಸಚಿವಾಲಯ 2023ರ ಡಿ.26 ಹಾಗೂ 2024ರ ಜೂ.28ರಂದು ಹೊರಡಿಸಿದ್ದ ಅಧಿಸೂಚನೆ ರದ್ದು ಕೋರಿ ದಕ್ಷಿಣ ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ, ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ನಾಗಪ್ರಸನ್ನ ಅವರ ಪೀಠ ಅರ್ಜಿ ವಜಾಗೊಳಿಸಿದೆ. ಕಚ್ಚಾ ಸೆಣಬಿನ ಬೆಳಗಾರರು ಮತ್ತು ಕಾರ್ಮಿಕರಿಗೆ ಆರ್ಥಿಕ ನ್ಯಾಯ ಒದಗಿಸುವ ಉದ್ದೇಶದಿಂದ ಈ ನೀತಿ ತರಲಾಗಿದೆ. ಶೇ.100ರಷ್ಟು ಸಕ್ಕರೆ ಪ್ಯಾಕಿಂಗ್‌ನಲ್ಲಿ ಸೆಣಬಿನ ಚೀಲ ಬಳಕೆ ಕ್ರಮವನ್ನು ಸುಪ್ರೀಂ ಎತ್ತಿಹಿಡಿದಿತ್ತು. ಈಗ ಶೇ.20ರಷ್ಟು ಬಳಸಲು ಅಧಿಸೂಚನೆ ಹೊರಡಿಸಿದ್ದು, ಅದನ್ನು ಪ್ರಶ್ನಿಸುವುದಾದರೆ ಪರಿಗಣಿಸಲ್ಲ ಎಂದು ಪೀಠ ತಿಳಿಸಿದೆ.
ಕೇಂದ್ರ ಸರ್ಕಾರದ ಅಧಿಸೂಚನೆಯು ಸೆಣಬಿನ ಉದ್ಯಮವನ್ನು ಉತ್ತೇಜಿಸುವ ಗುರಿ ಹೊಂದಿದೆ. ಆದರೆ, ಈ ಚೀಲಗಳು ಆರೋಗ್ಯಕ್ಕೆ ಅಪಾಯಕಾರಿ. ಸೆಣಬಿನ ಚೀಲಗಳಲ್ಲಿ ಪ್ಯಾಕಿಂಗ್ ಮಾಡುವುದರಿಂದ ಸಕ್ಕರೆಯ ಗುಣಮಟ್ಟ ಹಾಳಾಗಲಿದೆ ಹಾಗೂ ಸಕ್ಕರೆ ಕಲುಷಿತಗೊಳ್ಳುತ್ತದೆ. ಆದ್ದರಿಂದ ಕೇಂದ್ರ ಜವಳಿ ಸಚಿವಾಲಯದ ಅಧಿಸೂಚನೆ ರದ್ದುಪಡಿಸಬೇಕು ಎಂದು ಅರ್ಜಿದಾರ ಸಂಘ ಕೋರಿತ್ತು.
ಸೆಣಬಿನ ಕಚ್ಚಾ ಪದಾರ್ಥಗಳ ಉತ್ಪನ್ನ ಹಾಗೂ ಸೆಣಬಿನ ಪ್ಯಾಕೇಜಿಂಗ್‌ಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಒಂದು ಕ್ವಿಂಟಲ್ ಮೇಲ್ಪಟ್ಟ ಸಗಟು ಪ್ಯಾಕೇಜಿಂಗ್ ಹಾಗೂ ರಫ್ತಿಗೆ ಈ ಮಿತಿ ಅನ್ವಯ ಆಗಲ್ಲ. ಕೇವಲ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮತ್ತು ವಿತರಣೆಗಷ್ಟೇ ಈ ನೀತಿ ಅನ್ವಯವಾಗಲಿದೆ ಎಂದು ಕೇಂದ್ರ ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿತ್ತು.