ಸಾರಾಂಶ
ನವದೆಹಲಿ: ‘ಜನನಾಯಕ’ ಖ್ಯಾತಿಯ ಬಿಹಾರದ ಮಾಜಿ ಮುಖ್ಯಮಂತ್ರಿ, ಒಬಿಸಿ ನಾಯಕ ಕರ್ಪೂರಿ ಠಾಕೂರ್ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ‘ಭಾರತ ರತ್ನ’ ಪ್ರಶಸ್ತಿ ಘೋಷಿಸಲಾಗಿದೆ. ಠಾಕೂರ್ ಅವರಿಗೆ ಮರಣೋತ್ತರವಾಗಿ ಈ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಮಂಗಳವಾರ ಘೋಷಿಸಿದ್ದಾರೆ. ಜ.24ಕ್ಕೆ ಕರ್ಪೂರಿ ಠಾಕೂರ್ ಅವರು ಜನಿಸಿ 100 ವರ್ಷಗಳಾಗುತ್ತಿದೆ. ಜನನಾಯಕರಾಗಿದ್ದ ಠಾಕೂರ್ ಅವರು, 1970-71 ಮತ್ತು 1977-79ರವರೆಗೆ 2 ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ ಸ್ವಾತಂತ್ರ್ಯ ಪೂರ್ವದಲ್ಲಿ ‘ಭಾರತ ಬಿಟ್ಟು ತೊಲಗಿ’ ಆಂದೋಲನದಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದ್ದರು. ಈ ಪ್ರಶಸ್ತಿಗೆ ಆಯ್ಕೆಯಾದ 49ನೇ ವ್ಯಕ್ತಿ ಇವರು.
ಯಾರಿಗೆ ಗೌರವ?ಭಾರತ ರತ್ನ ಪ್ರಶಸ್ತಿ ದೇಶದ ಅತ್ಯುನ್ನತ ನಾಗರಿಕ ಗೌರವವಾಗಿದ್ದು, ಕಲೆ, ಸಾಹಿತ್ಯ, ವಿಜ್ಞಾನ ಮತ್ತು ಸಮಾಜ ಸೇವೆಯಲ್ಲಿ ತೊಡಗಿದ ಪ್ರಮುಖ ವ್ಯಕ್ತಿಗಳಿಗೆ ಇದನ್ನು ನೀಡಿ ಗೌರವಿಸಲಾಗುತ್ತದೆ. ಈ ಮೊದಲು 2019ರಲ್ಲಿ ಪ್ರಣಬ್ ಮುಖರ್ಜಿ, ಭೂಪೇನ್ ಹಜಾರಿಕಾ ಮತ್ತು ನಾನಾಜಿ ದೇಶ್‌ಮುಖ್ ಅವರಿಗೆ ಭಾರತ ರತ್ನ ನೀಡಲಾಗಿತ್ತು.ಯಾರು ಈ ಕರ್ಪೂರಿ ಠಾಕೂರ್?
ತಮ್ಮ ಜೀವನದುದ್ದಕ್ಕೂ ಜನರ ಏಳಿಗೆಗಾಗಿ ದುಡಿದವರು ಠಾಕೂರ್ ಜನನಾಯಕ ಎಂದೇ ಪ್ರಸಿದ್ಧರಾಗಿದ್ದರು. 1924ರಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ರಾಷ್ಟ್ರೀಯ ವಿಚಾರಧಾರೆಗಳಿಗೆ ಮನಸೋತು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಜೈಲು ಸೇರಿದ್ದರು. ಸ್ವಾತಂತ್ರ್ಯದ ಬಳಿಕ ಶಿಕ್ಷಕರಾಗಿ ಸೇವೆ ಆರಂಭಿಸಿದ ಇವರು, ಬಳಿಕ ರಾಜಕೀಯಕ್ಕೆ ಧುಮುಕಿ, ಬಿಹಾರ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ ಎನಿಸಿಕೊಂಡರು. ರಾಮ್‌ಮನೋಹರ್ ಲೋಹಿಯಾ, ಜಯಪ್ರಕಾಶ್ ನಾರಾಯಣ್ ಅವರ ಸಾಮಾಜಿಕ ಚಿಂತನೆಗಳಿಂದ ಪ್ರೇರೇಪಿತರಾಗಿದ್ದ ಕರ್ಪೂರಿ ಠಾಕೂರ್, ಬಿಹಾರದ ಮುಖ್ಯಮಂತ್ರಿಯಾಗಿದ್ದ ವೇಳೆ ಉದ್ಯೋಗದಲ್ಲಿ ಹಿಂದುಳಿದ ವರ್ಗಗಳಿಗೆ ಒಳ ಮೀಸಲು ಕಲ್ಪಿಸುವ ಮುಂಗೇರಿ ಲಾಲ್ ಆಯೋಗದ ವರದಿ ಜಾರಿಗೊಳಿಸುವ ಮೂಲಕ ಸಾಮಾಜಿಕ ಸುಧಾರಣೆಗೆ ನಾಂದಿ ಹಾಡಿದ್ದರು.ರಾಜಕೀಯ ಲೆಕ್ಕಾಚಾರ?ಇತ್ತೀಚೆಗಷ್ಟೇ ಬಿಹಾರದ ಜೆಡಿಯು- ಆರ್‌ಜೆಡಿ ಮೈತ್ರಿಕೂಟ ಜಾತಿ ಗಣತಿ ವರದಿ ಪ್ರಕಟ ಮೂಲಕ ಒಬಿಸಿ ಮತ್ತು ಹಿಂದುಳಿದ ವರ್ಗಗಳನ್ನು ಸೆಳೆಯುವ ಕೆಲಸ ಮಾಡಿತ್ತು. ಜೊತೆಗೆ ಮೀಸಲು ಪ್ರಮಾಣ ಹೆಚ್ಚಿಸುವ ನಿರ್ಧಾರ ಪ್ರಕಟಿಸಿತ್ತು. ಮತ್ತೊಂದೆಡೆ ಇತ್ತೀಚೆಗೆ ಮುಕ್ತಾಯವಾದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ವೇಳೆ ಆದಿವಾಸಿಗಳು, ಒಬಿಸಿ ಸಮುದಾಯ ಮತಗಳು ಬಿಜೆಪಿ ಪರವಾಗಿ ನಿಂತಿದ್ದು ಮೂರು ರಾಜ್ಯಗಳಲ್ಲಿ ಗೆಲುವಿಗೆ ಕಾರಣವಾಗಿತ್ತು. ಅದರ ಬೆನ್ನಲ್ಲೇ ಒಬಿಸಿ ಸಮುದಾಯದ ನಾಯಕರೊಬ್ಬರ ಸಾಧನೆ ಗುರುತಿಸಿ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿರುವುದು ಒಬಿಸಿ ಮತ ಬೇಟೆಗೆ ಮುಂದಾಗಿದ್ದ ಜೆಡಿಯು, ಆರ್‌ಜೆಡಿಗೆ ನೀಡಿದ ಪೆಟ್ಟು ಎಂದು ವಿಶ್ಲೇಷಿಸಲಾಗಿದೆ.