ಸಾರಾಂಶ
ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಆಪರೇಷನ್ ಸಿಂದೂರದ ಪತ್ರಿಕಾಗೋಷ್ಠಿ ನೇತೃತ್ವದ ವಹಿಸಿದ್ದ ಕರ್ನಲ್ ಸೋಫಿಯಾ ಖುರೇಷಿ, ವಿಂಗ್ ಕಮಾಂಡರ್ ವ್ಯೋವಿಕಾ ಸಿಂಗ್ ಮತ್ತು ನೌಕಾ ಕಮಾಂಡರ್ ಪ್ರೇರಣಾ ಸೇನಾ ಸಮವಸ್ತ್ರದಲ್ಲಿಯೇ ಕಾಣಿಸಿಕೊಳ್ಳಲಿದ್ದಾರೆ.
ನವದೆಹಲಿ: ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್‌ಪತಿಯ ಸ್ವಾತಂತ್ರ್ಯ ದಿನಾಚರಣೆ ವಿಶೇಷ ಕಾರ್ಯಕ್ರಮದಲ್ಲಿ ಆಪರೇಷನ್ ಸಿಂದೂರದ ಪತ್ರಿಕಾಗೋಷ್ಠಿ ನೇತೃತ್ವದ ವಹಿಸಿದ್ದ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ ಖುರೇಷಿ, ವಿಂಗ್ ಕಮಾಂಡರ್ ವ್ಯೋವಿಕಾ ಸಿಂಗ್ ಮತ್ತು ನೌಕಾ ಕಮಾಂಡರ್ ಪ್ರೇರಣಾ ಸೇನಾ ಸಮವಸ್ತ್ರದಲ್ಲಿಯೇ ಕಾಣಿಸಿಕೊಳ್ಳಲಿದ್ದಾರೆ. ಆದರೆ ಇದಕ್ಕೆ ವಿರೋಧ ಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್, ‘ಮನರಂಜನಾ ಕಾರ್ಯಕ್ರಮದಲ್ಲಿ ಸಶಸ್ತ್ರ ಪಡೆ ಅಧಿಕಾರಿಗಳು ಸಮವಸ್ತ್ರ ಧರಿಸಿ ಭಾಗಿಯಾಗಿದ್ದಾರೆ. ಬಾಲಿವುಡ್ ನಟನಿಗೆ ಮಿಲಿಟರಿ ಕಾರ್ಯಾಚರಣೆ ಬಗ್ಗೆ ವಿವರಿಸುತ್ತಿದ್ದಾರೆ. ಯಾವುದೇ ಗಂಭೀರ ರಾಷ್ಟ್ರದಲ್ಲಿ ಈ ಬಗ್ಗೆ ಯೋಚಿಸಲಾಗದು. ಇದು ನರೇಂದ್ರ ಮೋದಿ ನೇತೃತ್ವದ ನವಭಾರತದ ದೃಶ್ಯ. ಸೇನೆಗೆ ಅವಮಾನ ಮಾಡಿದೆ’ ಎಂದು ಕಿಡಿಕಾರಿದೆ.
ಶಿವಸೇನೆ ಯುಬಿಟಿ ಬಣದ ನಾಯಕ ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿದ್ದು ‘ಆಪರೇಷನ್ ಸಿಂದೂರದ ಭಾಗವಾಗಿದ್ದ ಸೇನಾಧಿಕಾರಿಗಳು ಸಮವಸ್ತ್ರ ಧರಿಸಿಯೇ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಈ ಮೂಲಕ ಖಾಸಗಿ ಚಾನೆಲ್ ಹಣ ಮಾಡಿಕೊಳ್ಳಲು ಯತ್ನಿಸುತ್ತಿದೆ’ ಎಂದಿದ್ದಾರೆ.
ನೆಟ್ಟಿಗರ ಕಿಡಿ:
ಇನ್ನು ನೆಟ್ಟಿಗರು ಕೂಡ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ‘ ಈ ಮೂಲಕ ಒಂದು ರಾಷ್ಟ್ರೀಯವಾದಿ ಪಕ್ಷ ಕೆಲ ಮತಗಳನ್ನು ಪಡೆಯಲು ಬಯಸುತ್ತಿದೆ’ ಎಂದಿದ್ದಾರೆ. ಇನ್ನು ಕೆಲವರು, ‘ ಮೋದಿಯವರು ಸೇನೆಯನ್ನು ತಮ್ಮ ಸಾರ್ವಜನಿಕ ಸಂಪರ್ಕ( ಪಿಆರ್) ರೀತಿ ರಾಜಕೀಯ ಸಾಧನವಾಗಿ ಬಳಸುತ್ತಿದ್ದಾರೆ’ ಎಂದು ಕಿಡಿ ಕಾರಿದ್ದಾರೆ.