ಸ್ವಾತಂತ್ರ್ಯೋತ್ಸವ ಮೂಲಕ ಆಪರೇಷನ್ ಸಿಂದೂರ ಜಯ ಆಚರಣೆ: ಕೋಣೆಮನೆ

| Published : Aug 14 2025, 01:00 AM IST

ಸ್ವಾತಂತ್ರ್ಯೋತ್ಸವ ಮೂಲಕ ಆಪರೇಷನ್ ಸಿಂದೂರ ಜಯ ಆಚರಣೆ: ಕೋಣೆಮನೆ
Share this Article
  • FB
  • TW
  • Linkdin
  • Email

ಸಾರಾಂಶ

ಇನ್ನೆರಡು ದಿನಗಳಲ್ಲಿ ದೇಶದಾದ್ಯಂತ ತಾಲೂಕು - ನಗರ ಮಟ್ಟಗಳಲ್ಲಿ ಭಾರತ ವಿಭಜನೆಯ ಕರಾಳತೆಯನ್ನು ಬಿಂಬಿಸುವ ತಿರಂಗ ಯಾತ್ರೆ - ಪಂಜಿನ ಮೆರವಣಿಗೆಗಳು ನಡೆಯಲಿವೆ ಎಂದು ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ ತಿಳಿಸಿದ್ದಾರೆ.

ಉಡುಪಿ: ಈ ಬಾರಿಯ ಸ್ವಾತಂತ್ರ್ಯೋತ್ಸವದ ಮೂಲಕ ಅಪರೇಶನ್ ಸಿಂದೂರದ ಜಯವನ್ನು ಆಚರಿಸಲಾಗುವುದು ಮತ್ತು ಕಾಂಗ್ರೆಸ್ ಪಕ್ಷ ಸಾಂವಿಧಾನಿಕ ಸಂಸ್ಥೆಗಳಿಗೆ ಮಾಡುತ್ತಿರುವ ಅವಮಾನಕ್ಕೆ ಉತ್ತರ ನೀಡಲಾಗುವುದು ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್ ಕೋಣೆಮನೆ ಹೇಳಿದ್ದಾರೆ.

ಬುಧವಾರ ಉಡುಪಿ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರದಾನಿ ಮೋದಿ ಅವರು ಹರ್‌ ಘರ್ ತಿರಂಗ ಸಂಕಲ್ಪ ಘೋಷಿಸಿದ್ದು, ದೇಶದಾದ್ಯಂತ ಜನರು ಪಕ್ಷಬೇಧವಿಲ್ಲದೇ ಅದ್ಭುತ ಸ್ಪಂದನೆ ನೀಡಿದ್ದಾರೆ. ಇನ್ನೆರಡು ದಿನಗಳಲ್ಲಿ ದೇಶದಾದ್ಯಂತ ತಾಲೂಕು - ನಗರ ಮಟ್ಟಗಳಲ್ಲಿ ಭಾರತ ವಿಭಜನೆಯ ಕರಾಳತೆಯನ್ನು ಬಿಂಬಿಸುವ ತಿರಂಗ ಯಾತ್ರೆ - ಪಂಜಿನ ಮೆರವಣಿಗೆಗಳು ನಡೆಯಲಿವೆ ಎಂದರು.

ಬಿಜೆಪಿ ಅನೇಕ ವರ್ಷಗಳ ಕಾಲ ವಿಪಕ್ಷದಲ್ಲಿ ಮಾದರಿಯಾಗಿ ನಡೆದುಕೊಂಡಿತ್ತು. ಈಗ ಅಧಿಕಾರದಲ್ಲಿರುವಾಗಲೂ ವಿಪಕ್ಷಗಳನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿದೆ. ಅಪರೇಶನ್ ಸಿಂದೂರದ ಬಗ್ಗೆ ಜಗತ್ತಿಗೆ ಮಾಹಿತಿ ನೀಡುವುದಕ್ಕೆ ವಿಪಕ್ಷ ನಾಯಕರನ್ನೇ ಕಳುಹಿಸಿದೆ. ಆದರೇ ಕಾಂಗ್ರೆಸ್ ನಮ್ಮ ಸೈನಿಕರ ಹೋರಾಟದ ಕಿಚ್ಚನ್ನೇ ಪ್ರಶ್ನಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪರೇಶನ್ ಸಿಂಧೂರವನ್ನು ಛೋಟೆಮೋಟೆ ದಾ‍ಳಿ ಎಂದು ಅವಮಾನಿಸಿದ್ದಾರೆ. ಕಾಂಗ್ರೆಸಿಗರಿಗೆ ನಮ್ಮ ಸೈನಿಕರ ಬಗ್ಗೆ ಗೌರವವಿಲ್ಲ. ಇದಕ್ಕೆಲ್ಲಾ ಈ ಬಾರಿಯ ಸ್ವಾತಂತ್ರ್ಯೋತ್ಸವ ಉತ್ತರವಾಗಬೇಕು ಎಂದವರು ಹೇಳಿದರು.

ಕಾಂಗ್ರೆಸಿಗರು ದೇಶದ ಸಾಂವಿಧಾನಿಕ ಸಂಸ್ಥೆಗಳನ್ನೂ ಕೂಡ ಸಂಶಯಿಸುತ್ತಿದ್ದಾರೆ. ಚುನಾವಣಾ ಆಯೋಗದ ಮೇಲೆಯೂ ನಂಬಿಕೆ ಇಲ್ಲ, ಎಐಸಿಸಿಯ ಛಾಯಾ ಅಧ್ಯಕ್ಷ ರಾಹುಲ್ ಗಾಂಧಿ ಚುನಾ‍ವಣಾ ಆಯೋಗದ ವೈಖರಿಯನ್ನೇ ಪ್ರಶ್ನಿಸಿದ್ದಾರೆ. ತಮ್ಮ ಆರೋಪಕ್ಕೆ ದಾಖಲೆ, ಅಫಿದವಿತ್ ಸಲ್ಲಿಸಿ ಎಂದರೆ ದೇಶದಾದ್ಯಂತ ಭಾಷಣ ಆರೋಪ ಮಾಡುತ್ತಾ ಪಲಾಯನ ಮಾಡುತ್ತಿದ್ದಾರೆ, ಕಾಂಗ್ರೆಸ್ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ವಿದೇಶಗಳಿಂದ ಸಹಾಯ ಪಡೆಯುತ್ತಿದೆ. ಕಾಂಗ್ರೆಸ್‌ನ ಈ ಸವಾಲನ್ನು ಬಿಜೆಪಿ ತನ್ನ ಸಾಧನೆಗಳನ್ನು ಜನರ ಮುಂದಿಡುವ ಮೂಲಕ ಸ್ವೀಕರಿಸುತ್ತದೆ ಎಂದರು.ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೋಣೆಮನೆ ಅವರು, ರಾಹುಲ್ ಗಾಂಧಿ ಅನ್ಯಾಯದ ವಿರುದ್ಧ ಮಾತನಾಡಬೇಕು, ವಾಕ್ ಸ್ವಾತಂತ್ರ್ಯ ರಕ್ಷಿಸಬೇಕು ಅಂತಾರೆ. ಆದರೆ ಅವರ ಈ ಸುಳ್ಳುಗಳಿಗೆ ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿದ್ದೇ ಕೈಗನ್ನಡಿ ಎಂದರು.ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಮಾಧ್ಯಮ ಸಮಿತಿಯ ಸದಸ್ಯ ರತನ್ ರಮೇಶ್ ಪೂಜಾರಿ, ದ.ಕ. ಜಿಲ್ಲಾ ವಕ್ತಾರ ಅರುಣ್ ಜಿ. ಶೇಟ್, ಉಡುಪಿ ಜಿಲ್ಲಾ ವಕ್ತಾರ ವಿಜಯಕುಮಾರ್ ಉದ್ಯಾವರ, ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ, ಗೀತಾಂಜಲಿ ಸುವರ್ಣ, ದಿನೇಶ್ ಅಮೀನ್, ಶಿವಕುಮಾರ್, ಗಿರೀಶ್ ಅಂಚನ್ ಇದ್ದರು.