ಸಾರಾಂಶ
ಮೂಲ ಅರ್ಜಿ ಜತೆ ಹೆಚ್ಚುವರಿ ಅರ್ಜಿಗೆ ಕೇರಳ ಸಚಿವ ಸಂಪುಟ ನಿರ್ಧಾರ ಮಾಡಿದೆ.
ತಿರುವನಂತಪುರಂ: ಕೇಂದ್ರ ಸರ್ಕಾರ ಸೋಮವಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಗೆ ಕೇರಳದಲ್ಲಿ ಭಾರೀ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಕಾಯದೆ ಜಾರಿಗೆ ತಡೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ರಾಜ್ಯದ ಎಡರಂಗ ಸರ್ಕಾರ ತೀರ್ಮಾನಿಸಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಬಳಕ ಮುಖ್ಯಮಂತ್ರಿ ಕಚೇರಿ ಅಧಿಕೃತ ಹೇಳಿಕೆಯನ್ನು ಈ ಬಗ್ಗೆ ಬಿಡುಗಡೆ ಮಾಡಿದೆ.‘ಸುಪ್ರೀಂ ಕೋರ್ಟ್‌ನಲ್ಲಿ ಈಗಾಗಲೇ ಸಿಎಎ ವಿರುದ್ಧ ರಾಜ್ಯ ಸಲ್ಲಿಸಿದ್ದ ಮೂಲ ಅರ್ಜಿಯೊಂದಿಗೆ ಪ್ರಸ್ತುತ ಕೇಂದ್ರ ಸರ್ಕಾರ ಜಾರಿ ಮಾಡಿರುವ ಕಾನೂನು ಜಾರಿಗೆ ತಡೆ ಕೋರುವಂತೆ ವಿಧಿ 131ರ ಅಡಿಯಲ್ಲಿ ಪ್ರತ್ಯೇಕ ಸಲ್ಲಿಸಲು ನಿರ್ಣಯ ಕೈಗೊಂಡಿದೆ. ಮುಂದಿನ ಕ್ರಮಗಳನ್ನು ರಾಜ್ಯದ ಅಡ್ವೋಕೇಟ್ ಜನರಲ್ ಕೈಗೊಳ್ಳಲಿದ್ದಾರೆ’ ಎಂದು ತಿಳಿಸಿದೆ. ಇದೇ ವೇಳೆ ಸಿಎಎ ಕಾನೂನು ಕೇರಳ ರಾಜ್ಯದಲ್ಲಿ ಜಾರಿ ಮಾಡದಿರಲು ಮುಖ್ಯಮಂತ್ರಿ ನೀಡಿದ ಹೇಳಿಕೆಗೆ ಬದ್ಧ ಆಗಿರುವುದಾಗಿಯೂ ಸಂಪುಟ ಹೇಳಿದೆ.
ಮಂಗಳವಾರವಷ್ಟೇ ಅಖಿಲ ಭಾರತ ಮುಸ್ಲಿಂ ಲೀಗ್‌ನ ಕೇರಳ ಘಟಕವೂ ಸಿಎಎ ಜಾರಿಗೆ ತಡೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.