ಸಾರಾಂಶ
ಮೋದಿಯನ್ನು ದೇವರಿಗೆ ಹೋಲಿಸಿ ಮಾಡಿದ್ದ ಟ್ವೀಟ್ ಅಳಿಸಿ ಕೇರಳ ಕಾಂಗ್ರೆಸ್ ಘಟಕ ಕ್ರಿಶ್ಚಿಯನ್ ಸಮುದಾಯಕ್ಕೆ ಬೇಷರತ್ ಕ್ಷಮೆಯಾಚಿಸಿದೆ.
ತಿರುವನಂತಪುರ: ಜಿ7 ಶೃಂಗದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ್ದ ಪೋಪ್ ಫ್ರಾನ್ಸಿಸ್ ಚಿತ್ರಕ್ಕೆ ‘ಕೊನೆಗೂ ಪೋಪ್‌ಗೆ ದೇವರ ದರ್ಶನ ಭಾಗ್ಯ ಲಭಿಸಿತು’ ಎಂದು ಟ್ವೀಟ್ ಮಾಡಿ ವಿವಾದ ಸೃಷ್ಟಿಸಿದ್ದ ಕೇರಳ ಕಾಂಗ್ರೆಸ್ ಘಟಕ, ಟ್ವೀಟ್ ಅಳಿಸಿಹಾಕಿ ಕ್ರಿಶ್ಚಿಯನ್ ಸಮುದಾಯದ ಬಳಿ ಬೇಷರತ್ ಕ್ಷಮೆ ಕೇಳಿದೆ.
ಕೇರಳ ಕಾಂಗ್ರೆಸ್ ಈ ಕುರಿತು ಟ್ವೀಟ್ ಮಾಡಿ, ‘ನಾವು ಯಾರನ್ನೂ ನೋಯಿಸುವ ಉದ್ದೇಶದೊಂದಿಗೆ ಟ್ವೀಟ್ ಮಾಡಿರಲಿಲ್ಲ. ಆದರೆ ಬಿಜೆಪಿಗರೇ ನಮ್ಮನ್ನು ಟೀಕಿಸುವ ಭರದಲ್ಲಿ ಪೋಪ್ ಕುರಿತು ತುಚ್ಛವಾಗಿ ಮಾತನಾಡಿದ್ದಾರೆ. ಅವರೂ ಸಹ ಕ್ರಿಶ್ಚಿಯನ್ನರ ಕ್ಷಮೆಯಾಚಿಸಲಿ’ ಎಂದು ಆಗ್ರಹಿಸಿದೆ.
ಮೋದಿ ಇತ್ತೀಚೆಗೆ ತಾವು ದೇವರೇ ತನ್ನನ್ನು ಕಳಿಸಿದ್ದಾನೆ ಎಂದು ಭಾಸವಾಗುತ್ತಿದೆ ಎಂದು ಹೇಳಿಕೊಂಡಿದ್ದರು. ಹೀಗಾಗಿ ಮೋದಿಯನ್ನು ದೇವರಿಗೆ ಹೋಲಿಸಿ ಕೇರಳ ಕಾಂಗ್ರೆಸ್ ವ್ಯಂಗ್ಯವಾಗಿ ಟ್ವೀಟ್ ಮಾಡಿತ್ತು.