ಸಾರಾಂಶ
ಪಟ್ಟಣಂತಿಟ್ಟ: ಬೆಳಗ್ಗೆದ್ದು ಹುರುಪಲ್ಲಿ ಕೆಲಸಕ್ಕೆ ಹಾಜರಾದ ಡ್ರೈವರ್‌ಗಳು ಎಂದಿನಂತೆ ಮದ್ಯಪತ್ತೆ ಪರೀಕ್ಷೆ ಮಾಡಿಸಿಕೊಂಡಾಗ, ಆ ಯಂತ್ರವು ಅವರನ್ನು ಪಾನಮತ್ತರೆಂದು ಘೋಷಿಸಿದ ಘಟನೆ ಇಲ್ಲಿನ ಪಂಡಾಲಂ ಡಿಪೋದಲ್ಲಿ ನಡೆದಿದೆ. ಆದರೆ ಅಸಲಿಗೆ ಅವರ್ಯಾರೂ ಮದ್ಯವನ್ನೇ ಸೇವಿಸಿರಲಿಲ್ಲ.
ಅನುದಿನವೂ ಬಸ್ ಏರುವ ಮೊದಲು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕರನ್ನು ಮದ್ಯಪಾನ ಪತ್ತೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅದರಂತೆ ಬ್ರೀಥಲೈಸರ್‌ನಲ್ಲಿ ಪರೀಕ್ಷೆ ಮಾಡಿಸಿಕೊಂಡ 3 ಡ್ರೈವರ್‌ಗಳ ರಕ್ತದಲ್ಲಿ ಮದ್ಯದ ಮಟ್ಟ 10ಕ್ಕಿಂತ ಹೆಚ್ಚು ತೋರಿಸುತ್ತಿತ್ತು. ಇದು, ಅನುಮತಿಸಲಾದ ಮಿತಿಗಿಂತ ಅಧಿಕ.
ಇದರಿಂದ ಆಶ್ಚರ್ಯಚಕಿತರಾದ ಚಾಲಕರು, ‘ನಾವು, ಕೊಲ್ಲಂ ಜಿಲ್ಲೆಯ ಕೊಟ್ಟಾರಕರ ಎಂಬಲ್ಲಿಂದ ತಂದ ಹಲಸಿನ ಹಣ್ಣನ್ನು ತಿಂದದ್ದೇ ಇದಕ್ಕೆ ಕಾರಣ’ ಎಂದು ಹೇಳಿದ್ದಾರೆ. ಮೊದಮೊದಲು ಇದನ್ನು ನಂಬದ ಅಧಿಕಾರಿಗಳು, ಬಳಿಕ ಮದ್ಯಪತ್ತೆ ಪರೀಕ್ಷೆಯಲ್ಲಿ ಅದಾಗಲೇ ಪಾನಮತ್ತನಲ್ಲ ಎಂದು ಘೋಷಣೆಯಾಗಿದ್ದ ವ್ಯಕ್ತಿಗೆ, ಅದೇ ಹಲಸನ್ನು ತಿನ್ನಿಸುತ್ತಾರೆ. ಬಳಿಕ ಬ್ರೀಥಲೈಸರ್‌ನಲ್ಲಿ ಪರೀಕ್ಷಿಸಿದಾಗ, ಅದು ಅವರನ್ನೂ ಪಾನಮತ್ತರೆಂದು ಘೋಷಿಸಿಬಿಡುತ್ತದೆ.
ಹಲಸು ಅತಿಯಾಗಿ ಹಣ್ಣಾಗಿ ಹೆಚ್ಚು ಹುದುಗಿದ್ದರಿಂದ ಹೀಗಾಗಿದೆ ಎಂಬುದು ಬಳಿಕ ಬಯಲಾಗಿ, ಚಾಲಕರು ನಿರಾಳರಾಗಿದ್ದಾರೆ. ಆದರೆ ತಪ್ಪು ಹಲಸಿದ್ದೋ, ಆ ಯಂತ್ರದ್ದೋ ಎಂದು ಅಧಿಕಾರಿಗಳು ಇನ್ನೂ ತಲೆಕೆಡಿಸಿಕೊಂಡಿದ್ದಾರೆ.